2500ಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರಿಗೆ ಬಾರದ ವೇತನ

ಹರಪನಹಳ್ಳಿ:

     ರಾಜ್ಯ ಸರ್ಕಾರ ಅಧೀನದಡಿ ಕಾರ್ಯನಿರ್ವಹಿಸುವ ಹರಪನಹಳ್ಳಿ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರು ಕಳೆದ ಎರಡು ತಿಂಗಳಿಂದ ವೇತನ ಬಾರದೇ ತೊಂದರೆ ಅನುಭವಿಸುತ್ತಿದ್ದಾರೆ.

       ಸಂವಿಧಾನದ 371ಜೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯಿಂದ ವರ್ಗಾಯಿಸಿ ಮೂಲ ಜಿಲ್ಲೆ ಬಳ್ಳಾರಿಗೆ ಸೇರ್ಪಡೆಗೊಳಿಸಿತ್ತು. ಇದಾದ ನಂತರ ತಾಲ್ಲೂಕಿನ ಒಂದೊಂದೆ ಇಲಾಖೆಗಳು ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಂಡಿವೆ. ಆದರೆ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರ ವೇತನ ಪಾವತಿಯಲ್ಲಿ ತಾಂತ್ರಿಕ ಸಮಸ್ಯೆ ಉದ್ಬವಿಸಿ ನಿಗದಿತ ದಿನಾಂಕಕ್ಕೆ ವೇತನ ಪಾವತಿ ಆಗದಿರುವುದು ನೌಕರರಿಗೆ ಸಂಕಷ್ಟ ತಂದಿದೆ.

      ತಾಲ್ಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಪಶು ಸಂಗೋಪನೆ, ಪದವಿ, ಪದವಿ ಪೂರ್ವ ಇಲಾಖೆ, ಪಶು ಸಂಗೋಪನೆ, ಕಂದಾಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬಿಸಿಎಂ, ಅರಣ್ಯ, ಅಬಕಾರಿ, ತೋಟಗಾರಿಕೆ, ಖಜಾನೆ, ಸರ್ವೇ, ಕೋರ್ಟ್, ಸಿಡಿಪಿಒ, ಸಹಕಾರಿ, ಲೆಕ್ಕಪತ್ರ, ನೋಂದಣಿ, ಎಪಿಎಂಸಿ, ಗ್ರಂಥಾಲಯ, ರೇಷ್ಮೆ ಇಲಾಖೆಗಳ ನೌಕರರಿಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳ ವೇತನ ಪಾವತಿ ಆಗಿಲ್ಲ.

      ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಿ 2500ಕ್ಕೂ ಹೆಚ್ಚು ನೌಕರರು ವೇತನ ಸಮಸ್ಯೆ ಎದುರಿಸುತ್ತಿದ್ದಾರೆ. ಅತೀ ಹೆಚ್ಚು ಎಂದರೆ ಶಿಕ್ಷಣ ಇಲಾಖೆಯೊಂದರಲ್ಲೇ ಸುಮಾರು 1500 ಜನ ಶಿಕ್ಷಕರಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಶಿಕ್ಷಕರು ವೇತನ ಪಾವತಿ ಆಗದೇ ತೊಂದರೆಗೆ ಸಿಲುಕಿದ್ದು, ಈಗ ಮತ್ತೆ ಎರಡು ತಿಂಗಳ ವೇತನ ಪಾವತಿ ಬಾಕಿ ಉಳಿದಿದೆ. ಈ ಬಾರಿ ಶಿಕ್ಷಣ ಇಲಾಖೆ ಸೇರಿದಂತೆ ತಾಲ್ಲೂಕಿನ ಎಲ್ಲ ಇಲಾಖೆಗಳ ನೌಕರರಿಗೆ ವೇತನ ಪಾವತಿ ಆಗಿಲ್ಲ. ಸಂಬಳವನ್ನೇ ನಂಬಿ ಜೀವನ ನಡೆಸುವ ಕುಟುಂಬಗಳಿಗೆ ವೇತನ ವಿಳಂಬ ಆಗಿರುವುದು ತೀವ್ರ ತೊಂದರೆ ಆಗಿದೆ.

     ಹರಪನಹಳ್ಳಿ ತಾಲ್ಲೂಕು ಬಳ್ಳಾರಿಗೆ ಸೇರಿರುವುದರಿಂದ ಎಲ್ಲ ಇಲಾಖೆಗಳ ದಾಖಲೆಗಳು ದಾವಣಗೆರೆಯಿಂದ ಬಳ್ಳಾರಿಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ನಡೆದು ತುಂಬಾ ದಿನಗಳು ಆಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೇ ದಾವಣಗೆರೆ ಜಿಲ್ಲೆಯ ಜಿಲ್ಲಾ ಖಜಾನೆಯಿಂದ ಬಳ್ಳಾರಿ ಜಿಲ್ಲಾ ಖಜಾನೆಗೆ ವರ್ಗಾಯಿಸುವ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ನೌಕರರ ವೇತನ ಪಾವತಿ ವಿಷಯದಲ್ಲಿ ಪದೇ ಪದೇ ತೊಂದರೆ ಆಗುತ್ತಿದೆ ಎಂಬ ಆರೋಪಗಳು ನೌಕರರ ವಲಯದಲ್ಲಿ ಕೇಳಿ ಬಂದಿವೆ.

    `ವೇತನ ಬಾರದಿರುವುದರಿಂದ ನೌಕರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮನೆ ಬಾಡಿಗೆ, ರೇಷನ್, ಮಕ್ಕಳ ಶಾಲಾ ಶುಲ್ಕ ಸೇರಿ ದಿನನಿತ್ಯದ ವಸ್ತುಗಳ ಖರೀದಿಗೆ ಹಣದ ಕೊರತೆ ಎದುರಾಗಿದೆ. ನೌಕರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ವೇತನ ಬಿಡುಗಡೆಗೆ ಕ್ರಮಕೈಗೊಳ್ಳಬೇಕು’ ಎಂದು ತಾಲ್ಲೂಕಿನ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.

       ವೇತನ ವಿಳಂಬವಾಗಿ ನೌಕರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದಿಯೂ ಇದೇ ಪರಿಸ್ಥಿತಿ ಉದ್ಭವವಾಗಿತ್ತು. ಅದು ಮತ್ತೆ ಮರುಕಳಿಸಿದೆ. ಆದಷ್ಟು ಬೇಗ ವೇತನ ಬಿಡುಗಡೆಗೆ ಸರ್ಕಾರ ಮುಂದಾಗಬೇಕು. ಇದೇ ಪರಿಸ್ಥಿತಿ ಮತ್ತೆ ಮುಂದುವರಿದರೆ ತಾಲ್ಲೂಕಿನ ಎಲ್ಲ ನೌಕರರು ಓಗ್ಗೂಡಿ ಹೋರಾಟಕ್ಕೆ ಅಣಿಯಾಗುತ್ತೇವೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ಸಂಗಪ್ಪನವರ ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap