ಹೂವಿನಹಡಗಲಿ :
1992ರಲ್ಲಿ ಕಾಗಿನೆಲೆಯಲ್ಲಿ ಕನಕ ಗುರುಪೀಠವನ್ನು ಸ್ಥಾಪನೆ ಮಾಡಿದ ಕಲ್ಪನೆ, ಸರ್ವ ಸಮಾಜದ ಶೋಷಿತರ ಜಾಗೃತಿಗಾಗಿ ಮಠ ಸ್ಥಾಪನೆ ಮಾಡಲಾಯಿತು ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ಹೇಳಿದರು.
ಅವರು ಮೈಲಾರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಏಳುಕೋಟಿ ಭಕ್ತರ ಕುಟೀರ ಉದ್ಘಾಟನೆ ನೆರವೇರಿಸಿ, ಮಾತನಾಡಿದರು. ನಂತರದಲ್ಲಿ ನಡೆದಂತಹ ಧಾರ್ಮಿಕ ಜಾಗೃತಿ, ಶಿಕ್ಷಣ, ಸಂಸ್ಕಾರ ಸಮಬಾಳ್ವೆ ಹೋರಾಟ, ಭಕ್ತಿಯ ಪೂರಕವಾಗಿ ಇಂದು ಮೈಲಾರದಲ್ಲಿ ಕಾಗಿನೆಲೆ ಗುರುಪೀಠದ ಶಾಖಾ ಮಠವನ್ನು ಸ್ಥಾಪನೆ ಮಾಡಲಾಗಿದೆ ಎಂದರು.
ನಂತರದಲ್ಲಿ 25 ವರ್ಷಗಳ ಅವಧಿಯಲ್ಲಿ ಸಮಾಜ, ಮಹತ್ವದ ಬದಲಾವಣೆಯನ್ನು ಹೊಂದಿದೆ ಎಂದ ಅವರು, ಕೆಲವರು ಶೋಷಿತ ವರ್ಗಗಳನ್ನು ಕತ್ತಲೆಯೆಯಲ್ಲಿಯೇ ಇರಿಸುವಂತಹ ಹುನ್ನಾರವನ್ನು ಮಾಡಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದರು, ಆದರೆ, ಈಗ ಕೆಳವರ್ಗಗಳು ಮಠಗಳ ಸ್ಥಾಪನೆಯ ಮೂಲಕ ಶೈಕ್ಷಣಿಕ ಆರ್ಥಿಕ ಅಭಿವೃದ್ದಿಯನ್ನು ಹೊಂದಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳನ್ನು ಪ್ರಸ್ತಾಪಿಸಿ, ಪರೋಕ್ಷವಾಗಿ ಕೆ.ಎಸ್. ಈಶ್ವರಪ್ಪನವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯನವರು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡದೇ, ಬರೀ ಬಾಷಣದ ಮುಖಾಂತರ ನನ್ನನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.
ಸಂಗೊಳ್ಳಿ ರಾಯಣ್ಣನ ಪ್ರಾಧಿಕಾರವನ್ನು ರಚಿಸುವುದರ ಮೂಲಕ ಅಭಿವೃದ್ದಿಗಾಗಿ 282 ಕೋಟಿ ರೂಗಳನ್ನು ಸರ್ಕಾರ ನೀಡಿದೆ, ಆದರೆ, ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ರಾಜಕೀಯ ಮಾಡುವ ಇವರ ಕೊಡುಗೆ ಏನು ? ಎಂದು ಛೇಡಿಸಿದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ನೀವು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗಿಗೆ ಉತ್ತರಿಸಿದ ಸಿದ್ದರಾಮಯ್ಯನವರು ಜನಾಶೀರ್ವಾದವಿದ್ದರೆ ಯಾರೇ ಆದರೂ ಕೂಡಾ ಅಧಿಕಾರವನ್ನು ಹಿಡಿಯಲು ಸಾಧ್ಯ, ಅಧಿಕಾರ ನೀಡುವವರು ಜನರೇ ಕಸಿದುಕೊಳ್ಳುವವರು ಜನರೆ ಎಂದರು.
ಈಗಾಗಲೇ ಕಾಗಿನೆಲೆ ಗುರುಪೀಠದ ನಾಲ್ಕು ಶಾಖಾಪೀಠಗಳಲ್ಲಿ ಶೈಕ್ಷಣಿಕ ಅಭಿವೃದ್ದಿವಾಗಿ ಶಿಕ್ಷಣ ಸಂಸ್ಥೆ ಹಾಗೂ ವಸತಿ ಶಾಲೆಗಳನ್ನು ತೆರೆಯಲಾಗಿದ್ದು, ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ಕೂಡಾ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು. ಆ ಕಾಲದಲ್ಲಿ ನಮ್ಮಂತಹ ಮಧ್ಯಮ ವರ್ಗದವರಿಗೆ, ಬಡವರಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಅತ್ಯಂತ ಕಠಿಣವಾಗಿತ್ತು. ಆ ಕಾರಣಕ್ಕಾಗಿ ಎಲ್ಲಾ ಬಡವರಿಗೂ ಕೂಡಾ ಗುಣಮಟ್ಟದ ಶಿಕ್ಷಣ ದೊರೆಯಲಿ ಎನ್ನುವ ಸದುದ್ದೇಶದಿಂದ ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದ ಪ್ರತಿಯೊಂದು ಹೋಬಳಿಯಲ್ಲಿಯೂ ಕೂಡಾ ವಸತಿ ಶಾಲೆಗಳನ್ನು ತೆರೆಯಲಾಯಿತು ಎಂದರು.
ಸ್ವತಃ ಜೀವನದಲ್ಲಿ ಬಡತನವನ್ನು ಅನುಭವಿಸಿದ ನನಗೆ, ಅನೇಕ ಪಾಠಗಳು ಪರಿಚಯವಾಗಿದ್ದವು. ಇಂತಹ ಒಂದು ಕಷ್ಟಗಳು ಇಂದಿನ ಮಕ್ಕಳಿಗೆ ಬರಬಾರದು ಎನ್ನುವ ಸದುದ್ದೇಶದಿಂದ ನನ್ನ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ದಾನಿಗಳ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಮುಜರಾಯಿ ಹಾಗೂ ಕೌಶಲ್ಯಾಭಿವೃದ್ದಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರವರು, ಸಮಾಜಕ್ಕೆ ಹಾಲುಮತ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ಸಿ.ಎಂ. ಸಿದ್ದರಾಮಯ್ಯನವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ಆಶಯವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯನವರ ಅವಧಿಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಜರುಗಿದವು ಎಂದು ಸ್ಮರಿಸಿದರು.
ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು. ಕನಕ ಗುರುಪೀಠದ ನಿರಂಜನಾನಂದಶ್ರೀಗಳು ಪ್ರಸ್ತಾವಿಕವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಶಾಖಾಮಠ ಸ್ಥಾಪನೆಗೆ ದೇಣಿಗೆ ನೀಡುವುದರ ಮೂಲಕ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದವನ್ನು ಸಲ್ಲಿಸಿದರು. ಇದೇ ಸಂರ್ದಭದಲ್ಲಿ ದೇಣಿಗೆ ನೀಡಿದ ಅನ್ಯ ಸಮಾಜದವರು ಹಾಗೂ ಹಾಲುಮತ ಸಮಾಜ ಬಾಂಧವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸಮಾಜದ ಗುರುಗಳಾದ ಗುರುವಿನ ಕೊಟ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಶ್ರೀಗಳು, ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಮಹಾಸ್ವಾಮಿಗಳು, ತಿಂಥಿಣಿ ಶಾಖಾಮಠದ ಸಿದ್ದರಮಾನಂದ ಮಹಾಸ್ವಾಮಿಗಳು , ಹಾಗೂ ಹರಿಹರ ಶಾಸಕ ರಾಮಪ್ಪ, ಹ.ಬೊ.ಹಳ್ಳಿ ಶಾಸಕ ಭೀಮನಾಯ್ಕ, ಎಂ.ಎಲ್.ಸಿ. ಪ್ರಸನ್ನಕುಮಾರ, ಮಾಜಿ ಸಚಿವ ಬಸವರಾಜ ಶಿವಣ್ಣನವರ್, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಶಾಸಕ ಸೋಮಶೇಖರ ಮೈಸೂರು, ಬಸವರಾಜ್ ಹಿಟ್ನಾಳ್, ಗೋವಿಂದಪ್ಪ, ಕಾರ್ಣಿಕದ ಗೊರವಯ್ಯ ರಾಮಪ್ಪ ಸೇರಿದಂತೆ ಸ್ಥಳೀಯ ಮುಖಂಡರಾದ ಎಂ.ಪರಮೇಶ್ವರಪ್ಪ, ಬೀರಪ್ಪ, ಹನುಮಂತಪ್ಪ. ಎಂ.ಬಸಣ್ಣ, ಆರ್.ಪಕ್ಕೀರಪ್ಪ, ಜಿ.ಪಂ.ಸದಸ್ಯೆ ವೀಣಾ ಪರಮೇಶ್ವರಪ್ಪ, ಮಾಜಿ ಸದಸ್ಯೆ ಪ್ರೇಮಕ್ಕ ಹನುಮಂತಪ್ಪ, ಹಾವೇರಿ ಜಿ.ಪಂ. ಅಧ್ಯಕ್ಷ ಎಸ್.ಕೆ.ಕರಿಯಣ್ಣ ಇತರರು ಇದ್ದರು.