ಹಾನಗಲ್ಲ :
ಸಮಾಜದಲ್ಲಿನ ಮೇಲು ಕೀಳು ಎಂಬ ಭಾವನೆ ಹಾಗೂ ಅಂಕು-ಡೊಂಕುಗಳನ್ನು ತಿದ್ದಲು ದೇಶವೇ ಒಪ್ಪಿಕೊಳ್ಳುವಂಥ ವಚನಗಳನ್ನು ರಚಿಸಿ ಶ್ರೇಷ್ಠ ದಾರ್ಶನಿಕರೆನಿಸಿಕೊಂಡ ತ್ರಿಪದಿ ಕವಿ ಸರ್ವಜ್ಞ ನಮ್ಮ ಜಿಲ್ಲೆಯವರೆಂಬುದೇ ನಮ್ಮೆಲ್ಲರ ಹೆಮ್ಮೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.
ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಕುಂಬಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸರ್ವಜ್ಞ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಂಬಾರ ಸಮುದಾಯದಲ್ಲಿ ಜನಿಸಿದ್ದರೂ ಎಲ್ಲರಿಗೂ ಅನ್ವಯವಾಗುವಂಥ ವಚನಗಳನ್ನು ರಚಿಸಿ ನಮ್ಮ ತಪ್ಪು ನಡೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಕುಂಬಾರರ ವೃತ್ತಿ ಬದಲಾದಂತೆ ಪ್ರವೃತ್ತಿಯೂ ಬದಲಾಗಬೇಕು.
ಪ್ರತಿ 25 ವರ್ಷಗಳಿಗೊಮ್ಮೆ ಕಾಲಘಟ್ಟ ಬದಲಾಗುತ್ತದೆ. ಕೆ ವರ್ಷಗಳ ಹಿಂದೆ ನಿರುದ್ಯೋಗ ಸಮಸ್ಯೆ ಎದುರಿಸಿದ್ದೆವು, ಈಗ ಕೆಲಸಕ್ಕೆ ಕಾರ್ಮಿಕರು ದೊರಕದ ಸಮಸ್ಯೆ ಎದುರಾಗಿದೆ. ಬಿಎಸ್ವೈ ಅವಧಿಯಲ್ಲಿ ಕುಂಬಾರ ಸೇರಿದಂತೆ 40 ಸಮುದಾಯಗಳಿಗೆ 2ಎ ಪ್ರಮಾಣಪತ್ರ ನೀಡಲು ಶಿಫಾರಸು ಮಾಡಲಾಗಿತ್ತು, ಆದರೆ ಅದು ಕಾರ್ಯಗತವಾಗಲಿಲ್ಲ. ಮೂಲ ಉದ್ಯೋಗಕ್ಕೆ ತಾಂತ್ರಿಕತೆ, ನೈಪುಣ್ಯತೆ ಅಳವಡಿಸಿಕೊಂಡಾಗ ಕುಂಬಾರರ ಉದ್ಯೋಗ ಇಂದೂ ಕೂಡ ಪ್ರಸ್ತುತವಾಗಲಿದೆ. ಹಾನಗಲ್ಲಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ ಅಭಿವೃದ್ಧಿ ಅನುದಾನದಲ್ಲಿ 5 ಲಕ್ಷರೂ ನೀಡುವುದಾಗಿ ಉದಾಸಿ ಭರವಸೆ ನೀಡಿದರು.
ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ವೀರಪ್ಪ ಚಕ್ರಸಾಲಿ ಹಾಗೂ ಶಿವಾನಂದ ಚಕ್ರಸಾಲಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹುಟ್ಟುಹಾಕಲು, ಮೌಢ್ಯ, ಜಾತಿ ಪದ್ಧತಿಯನ್ನು ತೊಡೆದುಹಾಕಲು ಸರ್ವಜ್ಞನ ವಚನಗಳು ದಾರಿಯಾಗಿವೆ. ಸಾಹಿತ್ಯ, ಆರೋಗ್ಯ, ಮೂಢನಂಬಿಕೆ, ಜನಜೀವನ, ಧರ್ಮ ಎಲ್ಲ ವಿಷಯಗಳ ಕುರಿತು ವಚನಗಳಲ್ಲಿ ಸಂದೇಶ ನೀಡಲಾಗಿದೆ. ಇತಿಹಾಸದಲ್ಲಿ ಸರ್ವಜ್ಞರ ಕುರಿತು ಮಾಹಿತಿಗಳ ಕೊರತೆ ಎದುರಾಗಿದೆ.
ಅಬಲೂರಿನಲ್ಲಿ ಜನಿಸಿದ್ದರೆಂಬ ಮಾಹಿತಿ ಹೊರತುಪಡಿಸಿ ಮುಂದಿನ ಎಲ್ಲ ಸಂಗತಿಗಳು ದೊರೆಯದಂತಾಗಿವೆ. ಕುಂಬಾರ ಸಮುದಾಯ ಲಿಂಗಾಯತ ಎಂದು ನಮೂದಾಗಿರುವುದರಿಂದ ಸರ್ಕಾರದ ಯೋಜನೆಗಳು ಲಭಿಸುತ್ತಿಲ್ಲ. ಕುಂಬಾರಿಕೆ ಮೂಲೆಗುಂಪಾಗಿದೆ. ಸರ್ಕಾರ ಕುಂಬಾರ ಎಂಬ ಪ್ರಮಾಣಪತ್ರ ನೀಡಬೇಕು. ಸಂಘಟನಾತ್ಮಕ ಹೋರಾಟ ಕೈಗೊಳ್ಳುವುದು ನಮಗೆ ಅನಿವಾರ್ಯವಾಗಿದೆ ಎಂದರು.
ತಹಸೀಲ್ದಾರ್ ಎಂ.ಗಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಬಸವರಾಜ ಬೂದಿಹಾಳ, ಕುಂಬಾರ ಸಂಘದ ತಾಲೂಕು ಅಧ್ಯಕ್ಷ ಮಹೇಶ ಮತ್ತಿಹಳ್ಳಿ, ಬಸವರಾಜ ಚಕ್ರಸಾಲಿ, ವೀರೇಶ ಕುಂಬಾರ ಇತರರು ಪಾಲ್ಗೊಂಡಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಆನಂದ ಸ್ವಾಗತಿಸಿದರು. ಆರ್.ಜಯಲಕ್ಷ್ಮೀ ನಿರೂಪಿಸಿದರು.