ಚಳ್ಳಕೆರೆ
ಎಲ್ಲಾ ಸಮುದಾಯಗಳಿಗೂ ಸಮಾನತೆಯನ್ನು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಆಯಾ ಸಮುದಾಯಕ್ಕೆ ಶ್ರಮಿಸಿದ ಸ್ವಾಮೀಜಿಯವರ ಸಾಧನೆಗಳ ಸ್ಮರಣೆಗಾಗಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶೋಷಿತ ಸಮುದಾಯದಲ್ಲಿ ಒಂದಾದ ಸವಿತಾ ಸಮಾಜದ ಏಳಿಗೆಗಾಗಿ ಸುಧೀರ್ಘ ಕಾಲ ಶ್ರಮಿಸಿದ ಸವಿತಾ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸುವ ನಾವು ಅವರ ಆದರ್ಶಗಳ ಪಾಲನೆಗೆ ಶ್ರಮಿಸೋಣವೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಕವಿತಾ ರಾಮಣ್ಣ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸವಿತಾ ಸಮಾಜದ ಸಹಯೋಗದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಜಾಗೃತಿಯನ್ನು ಮೂಡಿಸಿದ ಅನೇಕ ಮಹಾನೀಯರ ಬಗ್ಗೆ ಚಿತಂನೆ ನಡೆಸಿದ ಸರ್ಕಾರ ಸವಿತಾ ಮಹರ್ಷಿಗಳ ಕೊಡುಗೆಯನ್ನು ಸಹ ಸದಾ ಸ್ಮರಿಸುವ ದೃಷ್ಠಿಯಲ್ಲಿ ಈ ಕಾರ್ಯಕ್ರಮ ರೂಪಿಸಿದೆ ಎಂದರು. .
ಪ್ರಾಸ್ತಾವಿಕವಾ ಮಾತನಾಡಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲ್ಲೂಕು ಅಧ್ಯಕ್ಷ ಎಂ.ಮಲ್ಲಿಕಾರ್ಜುನ ರಾಜ್ಯ ಸರ್ಕಾರ ಇದೇ ಮೊಟ್ಟ ಮೊದಲ ಬಾರಿಗೆ ಸವಿತಾ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ಈ ಶ್ರೇಷ್ಠ ಮಹರ್ಷಿಗಳ ಸಾಧನೆಯನ್ನು ಎಲ್ಲರೂ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಿದೆ. ಸಮಾಜದ ಶೋಷಿತ ವರ್ಗಗಳ ಕೇಂದ್ರ ಬಿಂದುವಾಗಿರುವ ಸವಿತಾ ಸಮಾಜದ ಬಂಧುಗಳು ಈ ಮಹಾನ್ ಶ್ರೇಷ್ಠರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಯೋಜನೆ ಹೊಂದಿದೆ ಎಂದರು.
ಸವಿತಾ ಸಮಾಜದ ಜಿಲ್ಲಾ ಸಂಚಾಲಕ ಸಂಪಿಗೆ ಟಿ.ತಿಪ್ಪೇಸ್ವಾಮಿ ಉಪನ್ಯಾಸದಲ್ಲಿ ಸವಿತಾ ಸಮಾಜದ ಬಗ್ಗೆ ಇರುವ ಕೀಳಿರಿಮೆ ಇನ್ನೂ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲಾ ನಡೆಯುವ ಶುಭ ಮಂಗಳ ಕಾರ್ಯಗಳಿಗೆ ಸವಿತಾ ಸಮಾಜದ ಬಂಧುಗಳು ಬೇಕು. ಕಳೆದ ನೂರಾರು ವರ್ಷಗಳಿಂದ ಸವಿತಾ ಸಮಾಜದ ಬಂಧುಗಳು ಮಂಗಳವಾದ್ಯ ಮತ್ತು ಮಂಗಳ ಕಾರ್ಯಗಳಲ್ಲಿ ಇಡೀ ಸಮುದಾಯಕ್ಕೆ ನೆರವಾಗುತ್ತಾ ಬಂದಿದ್ಧಾರೆ.
ಆದರೆ, ನೆರವನ್ನು ಪಡೆದ ಬಹುತೇಕ ಸಮುದಾಯಗಳು ಈ ಸಮಾಜದ ಉನ್ನತ್ತಿಗಾಗಿ ಯಾವುದೇ ರೂಪುರೇಷಗಳನ್ನು ರೂಪಸಲಿಲ್ಲ, ಸರ್ಕಾರವೂ ಸಹ ಈ ನಿಟ್ಟಿನಲ್ಲಿ ನಿರೀಕ್ಷಿತ ಯೋಜನೆಗಳನ್ನು ಜಾರಿಗೆ ತರಲಿಲ್ಲ, ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತ ಎಂ.ಎಲ್‍ಸಿಯಾಗಿರುವ ವೇಣುಗೋಪಾಲ್ ಮಾತ್ರ ಆ ಸ್ಥಾನ ಪಡೆದಿದ್ದು, ಈ ಸಮುದಾಯಕ್ಕೆ ಇನ್ನೂ ಹೆಚ್ಚಿನ ಪ್ರಾದಾನ್ಯತೆ ನೀಡಬೇಕೆಂದರು.
ಸಮುದಾಯದ ಮಾಜಿ ಮುಖ್ಯಂಮಂತ್ರಿ ಕರ್ಪೂರಿ ಠಾಗೂರ್‍ರವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣಸೂರಯ್ಯ, ಗದ್ದಿಗೆ ತಿಪ್ಪೇಸ್ವಾಮಿ, ಪಿ.ತಿಮ್ಮಾರೆಡ್ಡಿ, ಕೆ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಎಸ್.ಸಿ.ವಿರೂಪಾಕ್ಷಪ್ಪ, ಟಿ.ಮಲ್ಲಿಕಾರ್ಜುನ, ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಪತ್ರಕರ್ತ ಟಿ.ಜೆ.ತಿಪ್ಪೇಸ್ವಾಮಿ, ಸಮಾಜದ ಅಧ್ಯಕ್ಷ ಎಸ್.ರಾಜು, ಶ್ರೀನಿವಾಸ್‍ಮೂರ್ತಿ,ಎಚ್.ಪ್ರಕಾಶ್, ಶಿವರಾಮ್, ಚಿಕ್ಕಮ್ಮನಹಳ್ಳಿ ತಿಪ್ಪೇಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.