ಶಿಕ್ಷಣದಿಂದ ಮಾತ್ರ ಸ್ವಾವಲಂಬನೆಯ ಬದುಕು ಸಾದ್ಯ

ಚಿತ್ರದುರ್ಗ:

        ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್, ಹನ್ನೆರಡನೆ ಶತಮಾನದ ಬಸವಣ್ಣ ಹಾಗೂ ಸ್ವಾತಂತ್ರಕ್ಕಾಗಿ ಹೋರಾಡಿ ತ್ಯಾಗ ಬಲಿದಾನಗಳನ್ನು ಮಾಡಿದ ಹಿರಿಯರ ಉದ್ದೇಶಗಳನ್ನು ಅರ್ಥಮಾಡಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿದ್ಯಾರ್ಥಿಗಳಿಗೆ ತಿಳಿಸಿದರು.

        2017-18 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮಾದಿಗ ಯುವಸೇನೆಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.

         ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರು ಸ್ವಾವಲಂಭಿಯಾಗಲು ಸಾಧ್ಯ. ಹೆಚ್ಚಿನ ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರೋತ್ಸಾಹಿಸುವುದು ಬಹಳ ಮುಖ್ಯ. ಪ್ರತಿಭೆ ಒಂದು ಜಾತಿಗೆ ಸೀಮಿತವಲ್ಲ. ಸಾಕಷ್ಟು ಮಕ್ಕಳಲ್ಲಿ ಪ್ರತಿ ಇರುತ್ತದೆ. ಕೆಲವೊಮ್ಮೆ ಅವಕಾಶದಿಂದ ವಂಚಿತರಾಗುತ್ತಾರೆ. ಆರು ಬಾರಿ ನಾನು ಶಾಸಕನಾಗಿದ್ದೇನೆ. ಸಾಕಷ್ಟು ಮನಕಲುವ ಸಮಸ್ಯೆಗಳನ್ನು ಹೊತ್ತು ನನ್ನ ಬಳಿ ಬರುವ ಜನರ ಕಷ್ಟ ನೋಡಲು ಆಗುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೆ ಬಡವರಾಗಿರಲಿ ಉನ್ನತ ಶಿಕ್ಷಣಕ್ಕೆ ಬ್ಯಾಂಕ್‍ಗಳಲ್ಲಿ ಸಾಲ ಸಿಗುವ ವ್ಯವಸ್ಥೆಯಿದೆ.

         ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್. ಪರೀಕ್ಷೆಗಾಗಿ ತರಬೇತಿ ಪಡೆಯಲು ಹಣದ ನೆರವು ಸಿಗುತ್ತದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವವರಿಗೆ ಮೂವತ್ತರಿಂದ ನಲವತ್ತು ಲಕ್ಷ ರೂ.ಗಳವರೆಗೆ ಲೋನ್ ಕೊಡಬೇಕು. ಬ್ಯಾಂಕ್‍ನವರು ಯಾವುದೇ ಕಾರಣಕ್ಕೂ ಇಲ್ಲ ಎನ್ನುವಂತಿಲ್ಲ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

         ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದರೆ, ವಿಶ್ವಗುರು ಬಸವಣ್ಣನವರನ್ನು ಮತ್ತೊಂದು ಜಾತಿಯವರು ಹಿಡಿದಿಟ್ಟುಕೊಂಡಿದ್ದಾರೆ. ಹಾಗಾಗಿ ದಾರ್ಶನಿಕರು, ಶರಣರನ್ನು ಯಾವುದೇ ಒಂದು ಜಾತಿಗೆ ಮೀಸಲಿಡಬಾರದು. ಅಂಬೇಡ್ಕರ್‍ರವರು ಸಂವಿಧಾನ ನೀಡಿದ ಫಲವಾಗಿ ಎಲ್ಲರೂ ಅಧಿಕಾರ ಚಲಾಯಿಸುವಂತಾಗಿದೆ. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಭಗತ್‍ಸಿಂಗ್, ವೀರಸಾರ್ವಕರ್, ಚಂದ್ರಶೇಖರ್ ಆಜಾದ್, ಸುಭಾಷ್‍ಚಂದ್ರಬೋಸ್ ಇವರುಗಳನ್ನು ಯಾರು ಲೆಕ್ಕಕ್ಕಿಟ್ಟುಕೊಂಡಿಲ್ಲ. ಸಂವಿಧಾನವನ್ನು ನೀಡಿದ ಅಂಬೇಡ್ಕರ್‍ರವರನ್ನು ಎರಡು ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್‍ನವರು.

         ಶಿಕ್ಷಣದ ಮೂಲಕ ಸಾಧನೆ ಮಾಡಿ ದೇಶಾಭಿಮಾನಕ್ಕೆ ಮೊದಲ ಆದ್ಯತೆ ನೀಡಿ. ಓದಿ ನೀವುಗಳು ದೊಡ್ಡವರಾಗಿ ಉನ್ನತ ಸ್ಥಾನಕ್ಕೆ ಏರಿದ ಮೇಲೆ ತಂದೆ-ತಾಯಿಗಳನ್ನು ನಿರ್ಲಕ್ಷಿಸಬೇಡಿ ಎಂದು ತಿಳಿಸಿದರು.

        ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ ಶಿಕ್ಷಣವೇ ನಿಮ್ಮ ನಿಜವಾದ ಶಕ್ತಿ. ಇಲ್ಲವಾದರೆ ನಿಮ್ಮನ್ನು ಯಾರು ಗುರುತಿಸುವುದಿಲ್ಲ. ವಿದ್ಯೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಕೊನೆಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಜೀವನದಲ್ಲಿ ಏನಾದರೂ ಗುರಿ ಇರಬೇಕು. ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಪಠ್ಯದ ಜೊತೆ ಕ್ರೀಡೆಗೂ ಗಮನ ಕೊಡಿ. ಯಾವುದೇ ಕಾರಣಕ್ಕೂ ಜಾತಿಯ ಕೀಳರಿಮೆ ಬೇಡ. ವಿಶ್ವ ಮೆಚ್ಚುವ ಸಂವಿಧಾನವನ್ನು ಭಾರತಕ್ಕೆ ನೀಡಿರುವ ಅಂಬೇಡ್ಕರ್ ಪರಿಶಿಷ್ಟ ಜಾತಿಯವರು ಎಂಬುದನ್ನು ಯಾರು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

        ಕೆ.ಪಿ.ಸಿ.ಸಿ.ಸದಸ್ಯ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ ಶಿಕ್ಷಣದಿಂದ ಸಮಾಜದಲ್ಲಿ ಏನಾದರೂ ಕ್ರಾಂತಿಯಾಗಲು ಸಾಧ್ಯ. ಓದಿನಿಂದ ಮುಂದೆ ಬಂದು ನಾಡಿಗೆ, ದೇಶಕ್ಕೆ ಗುರು-ಹಿರಿಯರು, ತಂದೆ ತಾಯಿಗಳಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು.
ಮಾದಿಗ ಸಮಾಜದ ಮುಖಂಡ ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತೂರಾಂ ಅಧ್ಯಕ್ಷತೆ ವಹಿಸಿದ್ದರು.

         ಕಾಂಗ್ರೆಸ್ ಮುಖಂಡ ಎಂ.ಕೆ.ತಾಜ್‍ಪೀರ್, ನಗರಸಭೆ ಸದಸ್ಯರುಗಳಾದ ತಾರಕೇಶ್ವರಿ, ಜೈನುಲ್ಲಾಬ್ದಿನ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎಂ.ಮಲ್ಲಣ್ಣ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕಾಲ್ಕೆರೆ ಚಂದ್ರಪ್ಪ, ಮಾದಿಗ ಸಮಾಜದ ಮುಖಂಡರುಗಳಾದ ಪಾಂಡುರಂಗಸ್ವಾಮಿ, ಎಂ.ಶಿವಮೂರ್ತಿ ವೇದಿಕೆಯಲ್ಲಿದ್ದರು.ಚಿನ್ಮಯಿ ಪ್ರಾರ್ಥಿಸಿದರು. ವಕೀಲ ಜೆ.ಪ್ರಸನ್ನ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link