ಬೆಂಗಳೂರು
ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವ ಮೂಲಕ ವ್ಯಸನಿಗಳು ಸಾವನ್ನಪುವುದನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ವಾರದಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ವ್ಯಸನಿಗಳು ಸಾವನ್ನಪ್ಪುವುದನ್ನು ತಪ್ಪಿಸಬಹುದು. ಅಲ್ಲದೆ ಕಾಳ ಸಂತೆಯಲ್ಲಿ ಮದ್ಯ ಮಾರಾಟ ಆಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.ವಾರದಲ್ಲಿ ಎರಡು ದಿನ ಎಲ್ಲ ವೈನ್ ಶಾಪ್, ಎಂಎಸ್ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ಈಗ ಬಾರ್ ಮಾಲೀಕರೇ ತಮ್ಮ ಬಾರ್ ಗಳಲ್ಲಿ ಕಳ್ಳತನ ಮಾಡಿಸುವ ಸ್ಥಿತಿ ಬಂದಿದೆ. ಈ ಸ್ಥಿತಿ ತಪ್ಪಿಸಿ ಎಂದು ಹೇಳಿದ್ದಾರೆ.
ಮದ್ಯ ವ್ಯಸನಿಗಳ ಆತ್ಮಹತ್ಯೆ ತಪ್ಪಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು. ಎಲ್ಲ ಎಂಎಸ್ಐಎಲ್ ಹಾಗೂ ವೈನ್ ಸ್ಟೋರ್ ತೆರೆಯಬೇಕು. ವಾರದಲ್ಲಿ 2 ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ. ನಿಯಮ ಪಾಲಿಸದಿದ್ದರೆ ಲೈಸನ್ಸ್ ರದ್ದು ಮಾಡಿ. ಬಾರ್ ಮತ್ತು ರೆಸ್ಟೋರೆಂಟ್ ತೆರೆದರೆ ಗಲಾಟೆ ಆಗುತ್ತದೆ. ಆದರೆ ಎಂಎಸ್ಐಎಲ್ ಹಾಗೂ ಬಾರ್ಗಳ ಮೂಲಕ ಪಾರ್ಸಲ್ ಕೊಟ್ಟರೆ ಸಮಸ್ಯೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾರ್ ಮಾಲೀಕರು ಜಾಸ್ತಿ ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ವ್ಯಸನ ಎನ್ನುವುದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅವರ ಜೀವ ಉಳಿಸುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಗಮನಕ್ಕೆ ತರುತ್ತೇನೆ. ಎಲ್ಲರಿಗೂ ಮದ್ಯ ಮಾರಾಟ ಮಾಡಬೇಕು ಎಂಬ ಅಭಿಪ್ರಾಯವಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ, ನಾನು ಹೇಳುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಕರ್ನಾಟಕ ತಬ್ಬಲಿ
ಪಾದರಾಯನಪುರದಲ್ಲಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮಾಜಿ ಸಚಿವ ಜಮೀರ್ ಅಹಮದ್ ಅವರನ್ನು ಕಾಂಗ್ರೆಸ್ ಪಕ್ಷವೇ ಹೊರ ಹಾಕಬೇಕು. ಈಗೇನಾದರೂ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಕರ್ನಾಟಕ ಮತ್ತೊಂದು ಅಮೆರಿಕಾ ಆಗುತ್ತಿತ್ತು. ಸಾಲು ಸಾಲು ಸಾವುಗಳು ಆಗುತ್ತಿದ್ದವು. ಕುಮಾರಸ್ವಾಮಿ, ಸಿದ್ದರಾಮಯ್ಯ ಟ್ರಂಪ್ಗಳಾಗುತ್ತಿದ್ದರು. ತಬ್ಲಿಘಿಗಳ ಪರವಾಗಿ ಇವರೆಲ್ಲ ನಿಂತು ಕರ್ನಾಟಕವನ್ನು ತಬ್ಬಲಿ ಮಾಡುತ್ತಿದ್ದರು. ಕರ್ನಾಟಕದಲ್ಲಿ ಮುಸ್ಲಿಮರ ಓಲೈಕೆಗೆ ನಿಂತು ಇಡೀ ರಾಜ್ಯದಲ್ಲಿ ಸೋಂಕು ತಾಂಡವಾಡುವಂತೆ ಮಾಡುತ್ತಿದ್ದರು ಎಂದು ಆರೋಪಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಸಹ ಮಂತ್ರಿಯಾಗಿರುತ್ತಿದ್ದರು. ಅವರನ್ನು ತಡೆಯಲು ಆಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿದ್ದವರೆಲ್ಲ ಉಡಾಫೆ ಜನ. ಸಿದ್ದರಾಮಯ್ಯ ಕೊರೊನಾ ಅಂದರೆ ನಂಗೇ ಗೊತ್ತಿಲ್ವಾ ಅಂತಿದ್ದರು ಇನ್ನು ಕುಮಾರಸ್ವಾಮಿಯವರು ಬ್ರದರ್ ಕೊರೊನಾ ಮೊನ್ನೆ ಸಿಕ್ಕಿದ್ರು ನಡೆಯಿರಿ ಎನ್ನುತ್ತಿದ್ದರು ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಶೈಲಿಯಲ್ಲೇ ಎಚ್.ವಿಶ್ವನಾಥ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








