ಬೆಂಗಳೂರು
ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಮತ್ತೊಮ್ಮೆ ಧರ್ಮ ಸಂಕಟ ಆರಂಭಗೊಂಡಿದೆ. ಲಿಂಗಾಯಿತ – ವೀರಶೈವ ಪ್ರತ್ಯೇಕ ಧರ್ಮ ವಿಚಾರ ಇದೀಗ ಹಿರಿಯ ಕಾಂಗ್ರೆಸ್ ನಾಯಕರ ಕಚ್ಚಾಟಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗಬೇಕು ಎಂದು ಕೆಲ ಶಾಸಕರು ಒತ್ತಡ ಹಾಕಿದ್ದರೆ, ಇನ್ನೂ ಕೆಲವರು ತಮಗೆ ನಿರ್ದಿಷ್ಟ ನಿಗಮ ಮಂಡಳಿ ಸ್ಥಾನ ದೊರಕಿಸಿಕೊಡದಿದ್ದರೆ ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಕಾಂಗ್ರೆಸ್‍ನ ಈ ಆಂತರಿಕ ಸಂಘರ್ಷ ಇದೀಗ ಪ್ರತಿಷ್ಠಿತ ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮುಖಂಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ.
ಕಳೆದ ಮೂರು ದಿನಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕಾಂಗ್ರೆಸ್‍ನಲ್ಲಿ ಕಾವೇರಿಸಿದೆ. ಹಾಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಮತ್ತು ಶಾಮನೂರು ಶಿವಶಂಕರಪ್ಪ ನಡುವೆ ಮಾತಿನ ಸಮರ ಮುಂದುವರೆಯುತ್ತಿದೆ.
ಪ್ರತ್ಯೇಕ ಧರ್ಮದ ವಿಚಾರದಲ್ಲಿ ಹಿಂದಿನ ಸರ್ಕಾರ ಕೈಗೊಂಡ ನಿರ್ಧಾರದಿಂದ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳ್ಳುವಂತಾಯಿತು ಎಂದು ಸಚಿವ ಶಿವಕುಮಾರ್ ಹಚ್ಚಿದ ಕಿಡಿ ಬೆಂಕಿಯಾಗಿ ಪರಿವರ್ತನೆಯಾಗಿದೆ. ಇದರಿಂದ ಕಾಂಗ್ರೆಸ್‍ನಲ್ಲಿ ಎರಡು ಬಣಗಳಾಗಿ ಪರಿವರ್ತನೆಯಾಗಿದೆ. ಮಾತಿಗೆ ಮಾತು ಬೆಳೆಯುವಂತಾಗಿದೆ. ವೀರಶೈವರು ಹೆಚ್ಚಾಗಿರುವ ಜಮುಖಂಡಿ ವಿಧಾನಸಸಭಾ ಹಾಗೂ ನಿರ್ಣಾಯಕವಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಯಾಗುವಂತಾಗಿದೆ.
ಚುನಾವಣಾ ಸಂದರ್ಭದಲ್ಲಿ ತಾವು ನೀಡರುವ ಹೇಳಿಕೆಗೆ ಕ್ಷಮೆ ಕೇಳುವ ಪ್ರಮೇಯ ಬರುವುದಿಲ್ಲ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿಯೇ ಮಾತನಾಡಿದ್ದೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ. ಪಾಟೀಲ್ ನನ್ನ ಸ್ನೇಹಿತರು. ಅವರು ಧರ್ಮದ ಬಗ್ಗೆ ಹೋರಾಟ ಮಾಡುತ್ತಿರುವವರು. ಅವರ ಬಗ್ಗೆ ನಾನು ಏನು ಹೇಳಲಾರೆ. ನಾನು ಹೇಳಿರುವುದು ರಾಜಕೀಯ ನಾಯಕರು ಧರ್ಮದ ವಿಚಾರಕ್ಕೆ ಹೋಗಬಾರದು ಎಂದು, ಅದು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಮಾತನಾಡಿದ್ದೇನೆ. ಒಕ್ಕಲಿಗರ ಸಂಘದ ವಿಚಾರ ಬಂದಾಗಲೂ ನಾನು ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ. ಸಹಾಯ ಬೇಕಿದ್ದಲ್ಲಿ ಮಾಡಲು ಸಿದ್ಧ, ಆದರೆ ಸಮಾಜದ ವಿಚಾರಕ್ಕೆ ನಾನು ಹೋಗುವದಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.
ಎಂ.ಬಿ. ಪಾಟೀಲ್ ದೊಡ್ಡವರು. ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ನನಗೆ ನನ್ನ ಓಟು ಬಿಟ್ಟು ಇನ್ಯಾರ ಓಟು ಹಾಕಿಸೋ ಧೈರ್ಯವಿಲ್ಲ. ನನ್ನ ಕ್ಷೇತ್ರ ಬಿಟ್ಟು ಬೇರೆ ಕ್ಚೇತ್ರದಲ್ಲಿ ಯಾರನ್ನು ಗೆಲ್ಲಿಸುವುದಕ್ಕೂ ಶಕ್ತಿ ಇಲ್ಲ. ಅಷ್ಟು ಪ್ರಭಾವಿಯೂ ನಾನಲ್ಲ. ನನ್ನ ಪತ್ನಿಯ ಓಟ್ ಕೂಡಾ ನಾನು ಹಾಕಿಸೋಕೆ ಧೈರ್ಯ ಇಲ್ಲ. ಅವಳು ಯಾರಿಗೆ ಬೇಕಾದರೂ ಓಟ್ ಹಾಕಬಹುದು. ಇದು ಪ್ರಜಾ ಪ್ರಭುತ್ವದ, ಸಂವಿಧಾನದ ವ್ಯವಸ್ಥೆ. ನಾನು ಕಾಂಗ್ರೆಸ್‍ನ ಸಾಮಾನ್ಯ ಕಾರ್ಯಕರ್ತ. ಯಾರು ಏನೇ ಶಿಕ್ಷೆ ಕೊಡಲಿ. ನಾನು ಏನು ಮಾತನಾಡುವುದಿಲ್ಲ. ನನ್ನ ಮನಸ್ಸಿನಲ್ಲಿರುವುದನ್ನು ಹೇಳಿದ್ದು, ಇದನ್ನು ಬದಲಾಯಿಸುವುದಿಲ್ಲ ಎಂದರು.
ಇದಕ್ಕೆ ತುಪ್ಪ ಸುರಿಯುವಂತೆ ದಾವಣಗೆರೆಯಲ್ಲಿ ಮಾತನಾಡಿರುವ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ವಿನಯ್ ಕುಲಕರ್ಣಿ ನಮ್ಮ ಸಮುದಾಯದ ಪರಮೋಚ್ಚ ನಾಯಕರೇನಲ್ಲ. ಇವರಿಬ್ಬರ ಮಾತು ಕೇಳಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದರು. ಅವರು ಲಿಂಗಾಯತ ಸಮಾಜ ಒಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಲಿಂಗಾಯತ ಧರ್ಮ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ಕೊಡುತ್ತೇವೆ ಎಂದಿದ್ದಾರೆ. ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ವಿರುದ್ಧ ನಾವೂ ಪಕ್ಷಕ್ಕೆ ದೂರು ಕೊಡುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದರು.
ಇದರ ಜತೆಗೆ ಕೆಲ ಶಾಸಕರು ತಾವು ಚುನಾವಣೆಯಲ್ಲಿ ಪ್ರಚಾರ ಮಾಡಬೇಕೆಂದರೆ ತಮಗೆ ಸಚಿವ ಸ್ಥಾನ ನೀಡಬೇಕು. ನಿಗಮ ಮಂಡಳಿಗೆ ನೇಮಿಸಬೇಕೆಂದು ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‍ನ ಹಿರಿಯ ಮುಖಂಡರೊಬ್ಬರು ಈ ವಿಷಯ ತಿಳಿಸಿದ್ದು, ಶಾಸಕರನ್ನು ಚುನಾವಣಾ ಪ್ರಚಾರಕ್ಕೆ ಕರೆಸಿಕೊಳ್ಳಲು ಹಿರಿಯ ನಾಯಕರು ತೀವ್ರ ಪ್ರಯಾಸಪಡುವಂತಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಸಮಿ ಫೈನಲ್ಸ್ ಎಂದೇ ಕರೆಯಲಾಗಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರದಿದ್ದರೆ ಅದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಸಹ ಕಾಂಗ್ರೆಸ್ ವಲಯದಲ್ಲಿ ಆವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
