ಬೆಂಗಳೂರು
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಅಂತ ದೂಷಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಕೋರಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿಂದು ಭಾರೀ ವಾಗ್ಯುದ್ದ,ಗದ್ದಲ ನಡೆದು ಕಲಾಪವನ್ನು ಮುಂದೂಡಿದ ಬೆಳವಣಿಗೆ ನಡೆದಿದೆ.
ನಿಯಮ 363 ರಡಿ ಅರ್ಜಿ ಸಲ್ಲಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಮಾಡಿದ ಮನವಿಯನ್ನು ಸ್ಪೀಕರ್ ಕಾಗೇರಿ ತಿರಸ್ಕರಿಸಿದ್ದೇ ತಡ,ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿದರು.
ಸೋಮವಾರ ಈ ಸೂಚನೆಯನ್ನು ಮಂಡಿಸಿ ಸಿದ್ಧರಾಮಯ್ಯ ಮಾತನಾಡಿದ ಹಿನ್ನೆಲೆಯಲ್ಲಿ ಸದನ ಮಂಗಳವಾರಕ್ಕೆ ಮುಂದೂಡಲ್ಪಟ್ಟಿತ್ತು.ಇಂದು ಈ ವಿಷಯವನ್ನು ಲಂಬಿಸದಂತೆ ಸ್ಪೀಕರ್ ಮನವಿ ಮಾಡಿಕೊಂಡಿದ್ದರಾದರೂ ಅದು ಫಲ ನೀಡಲಿಲ್ಲ.
ಹೀಗಾಗಿ ಇಂದು ಬೆಳಿಗ್ಗೆ ಆರಂಭವಾಗಬೇಕಿದ್ದ ಸದನ ಎರಡೂವರೆ ಗಂಟೆಗಳ ಕಾಲ ತಡವಾಗಿ ಆರಂಭವಾದಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಕೋರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸ್ಪೀಕರ್ ತಿರಸ್ಕರಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಸದನದ ಸದಸ್ಯರು.ಅವರ ವಿರುದ್ಧ ಹಾಗೆ ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.ಇದಕ್ಕಾಗಿ ಅವರಿಗೆ ಮುಂಚಿತವಾಗಿ ನೋಟೀಸ್ ನೀಡಬೇಕು.ಆದರೆ ಅವರಿಗೆ ನೋಟೀಸ್ ನೀಡದೆ ಕ್ರಮ ಸಾಧ್ಯವಿಲ್ಲ.
ಹೀಗಾಗಿ ಸಿದ್ಧರಾಮಯ್ಯ ಅವರು ನಿಯಮ 363 ರಡಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದಾಗ ಧರಣಿ ನಿರತ ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿದರು.ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಕರೆದು ಅವಮಾನಿಸಿದ್ದಾರೆ.ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಇಲ್ಲವೇ ಅವರ ಹೇಳಿಕೆಯ ಹಿಂದೆ ಸರ್ಕಾರವೇ ಇದೆ ಎಂದು ಬಾವಿಸಬೇಕಾಗುತ್ತದೆ ಎಂದು ಸಿದ್ಧರಾಮಯ್ಯ ಆರೋಪ ಮಾಡಿದರು.
ಈ ಹಂತದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ,ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಹೇಡಿ ಎಂದು ಕರೆದಿದ್ದಾರೆ.ಇದು ಸರಿಯಲ್ಲ ಎಂದರು.
ಅವರು ತಮಗೆ ಇಚ್ಚೆ ಬಂದಂತೆ ಮಾತನಾಡುವುದು,ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಅಮೂಲ್ಯ ಅವರ ಮನೆಗೆ ಹೋಗಿ ಬರುವುದು ಏನನ್ನು ಸೂಚಿಸುತ್ತದೆ?ಎಂದು ಅವರು ಪ್ರಶ್ನಿಸಿದರು.ಈ ಹಂತದಲ್ಲಿ ಮಾತನಾಡಿದ ಜೆಡಿಎಸ್‍ನ ಹೆಚ್.ಡಿ.ರೇವಣ್ಣ ಅವರು:ದೊರೆಸ್ವಾಮಿ ಅವರು ನೂರು ವರ್ಷ ತುಂಬಿದ ಪ್ರಾಮಾಣಿಕ ರಾಜಕಾರಣಿ ಎಂದಾಗ ಸದನದಲ್ಲಿ ಬಿಜೆಪಿ ಸದಸ್ಯರು ಹರ್ಷೋದ್ಗಾರ ಮಾಡಿ ಮೇಜು ಕುಟ್ಟಿ ಅವರ ಹೇಳಿಕೆಯನ್ನು ಸ್ವಾಗತಿಸಿದರು.
ಮುಂದುವರಿದು ಮಾತನಾಡಿದ ಹೆಚ್.ಡಿ.ರೇವಣ್ಣ,ನಾನು ದೊರೆಸ್ವಾಮಿ ಅವರು ರಾಜಕಾರಣಿ ಅಲ್ಲ ಎಂದು ಹೇಳಲು ನಾನು ಹೊರಟಿದ್ದೆ.ಆದರೆ ನನ್ನ ಮಾತು ಪೂರ್ಣವಾಗುವ ಮುನ್ನವೇ ಈ ರೀತಿ ಹರ್ಷೋದ್ಗಾರ ಮಾಡಲಾಗುತ್ತದೆ ಎಂದರು.
ಇವತ್ತು ಕಾಂಗ್ರೆಸ್ ಹಾಗೂ ಬಿಜೆಪಿಯವರಿಬ್ಬರೂ ಸೇರಿ ಈ ವಿಷಯವನ್ನು ಲಂಬಿಸಿ ಸದನದ ಕಲಾಪವನ್ನು ಹಾಳು ಮಾಡುತ್ತಿದ್ದಾರೆ.ಇದು ಸರಿಯಲ್ಲ ಎಂದು ಅವರು ಆರೋಪಿಸಿದಾಗ ವಿಧಾನಸಭೆಯಲ್ಲಿ ಮೌನ ನೆಲೆಸಿತು.
ಆದರೆ ಸಭಾಧ್ಯಕ್ಷರು ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ನಿರಂತರವಾಗಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸತೊಡಗಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಕ್ರಮ ಕೈಗೊಳ್ಳದೆ ಇದ್ದರೆ ಯಾವ ಕಾರಣಕ್ಕೂ ಸದನ ನಡೆಯಲು ಬಿಡುವುದಿಲ್ಲ ಎಂದು ಪುನ: ಸಿದ್ಧರಾಮಯ್ಯ ಹೇಳಿದಾಗ ಬೇರೆ ದಾರಿ ಕಾಣದ ಸ್ಪೀಕರ್ ಸದನ ಕಲಾಪವನ್ನು ಮುಂದೂಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ