ಬೆಂಗಳೂರು
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಜನವರಿ 20 ರಿಂದ 30ರ ವರೆಗೆ ಕರೆಯಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಜನವರಿ 20 ರಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣಮಾಡಲಿದ್ದಾರೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಮನವಿಮಾಡುತ್ತಿದ್ದು, ಈ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.ಬಾಗಲಕೋಟೆ ಜಿಲ್ಲೆಯಲ್ಲಿ ಸುಪ್ರಸಿದ್ಧ ಪಟ್ಟದ ಕಲ್ಲು ಪ್ರವಾಸಿ ತಾಣವನ್ನು 29.25 ಕೋಟಿ ರೂ ಮೊತ್ತದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ. ಜತೆಗೆ ಪಟ್ಟದಕಲ್ಲು ಪ್ರವಾಸಿ ತಾಣವನ್ನು ವಿಶ್ಪಪಾರಂಪರಿಕ ತಾಣ ಮಾಡಲು ಪ್ರಯತ್ನಿಸಲಾಗುವುದು.
ಇಲ್ಲಿನ ಮಲಪ್ರಭಾ ದಂಡೆಯಲ್ಲಿ 24 ಎಕರೆ ಭೂಮಿ ಖರೀದಿಸಿ ಒಂದೆ ಸೂರಿನಡಿ ಎಲ್ಲಾ ರೀತಿಯ ಸೌಲಭ್ಯ ಇರುವ ಟೂರಿಸಂ ಪ್ಲಾಜಾ ನಿರ್ಮಿಸಲಾಗುವುದು. ಪ್ರವಾಸಿಗರಿಗೆ ಅಗತ್ಯ ಹೋಟೆಲ್, ಬಯಲು ರಂಗಮಂದಿರ ನಿರ್ಮಾಣ, ಸ್ಥಳೀಯ ಕಲೆಗಳ ಪ್ರದರ್ಶನ ಮತ್ತು ವಿಶ್ರಾಂತಿ ಕೇಂದ್ರಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದರು.
ಕುಲಬುರಗಿ ಜಿಲ್ಲೆಯ ಕಮಲಾಪುರ ಮತ್ತು ಬಿಜಾಪುರ ಜಿಲ್ಲೆ ತಿಕೋಟಾ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಗಳಾಗಿ ಮೇಲ್ದರ್ಜೆಗೇರಿಸಲು ಹಾಗೂ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಬಾದಿತ ಗ್ರಾಮಗಳಿಗೆ ತುಂಗಭದ್ರ ನದಿಯಿಂದ ಕುಡಿಯುವ ನೀರು ಪೂರೈಸುವ 242.3 ಕೋಟಿ ರೂ ಮೊತ್ತದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.
ರಾಜ್ಯದ 62, 580 ಅಂಗನವಾಡಿ ಕಾರ್ಯಕರ್ತೆಯರು, 3300 ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 400 ರೂ ಮೊತ್ತದಲ್ಲಿ ಸೀರೆ ಖರೀದಿಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಇವರಿಗೆ ಸಮವಸ್ತ್ರದ ರೂಪದಲ್ಲಿ ಸೀರೆ ವಿತರಿಸಬೇಕಿತ್ತು. ಈ ಬಾರಿ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದಿಂದ ಸೀರೆ ಖರೀದಿ ವಿತರಿಸಲಾಗುವುದು. ಇದಕ್ಕಾಗಿ 10.20 ಕೋಟಿ ರೂ ಹಣ ಮೀಸಲಿರಿಸಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಖರಿದಿಸಲು 15 ಕೋಟಿ ರೂ ಅನುದಾನ ಒದಗಿಸಲಾಗುವುದು. ಜತೆಗೆ ಬಡ ಕುಟುಂಬದಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ಬಾಂಡ್ ನೀಡುವ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ವಿತರಿಸಲು ಬರುವ ಮಾರ್ಚ್ ವರೆಗೆ ಎಲ್.ಐ.ಸಿ ಜತೆ ಒಪ್ಪಂದ ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.
ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು ಮಂಡ್ಯ, ಚಾಮರಾಜ ನಗರ, ಕಲಬುರಗಿ, ಕೊಲಾರ, ಹಾಸನ, ಧಾರವಾಡದಲ್ಲಿ ಮಹಿಳಾ ಕ್ರೀಡಾ ಪಟುಗಳಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ನಿರ್ಮಿಸಲು 15 ಕೋಟಿ ರೂ ಮೊತ್ತದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ. ಕಲಬುರ್ಗಿ ಜಿಲ್ಲೆಯ ಅಫಜಲ್ ಪುರ ತಾಲೂಕಿನ ಭಿಮಾ ನದಿಗೆ ಸೇತುವೆ ಮತ್ತು ಬಾಂದಾರ ನಿರ್ಮಿಸಲು 79 ಕೋಟಿ ರೂ, ಬಿಜಾಪುರ ಜಿಲ್ಲೆಯ ಕೊಲ್ಹಾರ ಮೂಲ ಸೌಲಭ್ಯ ಅಭಿವೃದ್ಧಿ ಗೆ 5 ಕೋಟಿ ರೂ ಹಣವನ್ನು ಕೃಷ್ಣಾ ಜಲ ಭಾಗ್ಯ ನಿಗಮದಿಂದ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಅಂತಿಮ ವರ್ಷದ ಐಟಿಐ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು 16.98 ಕೋಟಿ ರೂ ಒದಗಿಸಲು, ದ.ಕ ಬೆಳ್ತಂಗಡಿ ತಾಲುಕಿನ ಧರ್ಮಸ್ಥಳ ಬಳಿ ನೆರಿಯಾ ಹೊಳೆಗೆ ಕಿಂಡಿ ಅಣೆಕಟ್ಟೆ ಕಟ್ಟಲು 14.97 ಕೋಟಿ ರೂ ಬಿಡುಗಡೆ ಮಾಡಲು ಸಂಪುಟ ಸಮ್ಮತಿಸಿದೆ.
ಆರ್ಯ ವೈಶ್ಯ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವ, ಸಹಕಾರ ಇಲಾಖೆಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಗೆ 1550 ಕೋಟಿ ರೂ ಸಾಲಕ್ಕೆ ಖಾತರಿ ಒದಗಿಸಲು ನಿರ್ಧರಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ 525 ಕೋಟಿ ರೂ ಮೊತ್ತದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪರಿಶಿಷ್ಟ ಜಾತಿ ಪಂಗಡ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಿದ್ದು, ಕರ್ನಾಟಕ ಲೋಕಾಯುಕ್ತರು ತಮಗೆ ತನಿಖೆ ಮಾಡಲು ಸಾಧ್ಯವಾಗದೇ ಇರುವ ಪ್ರಕರಣಗಳನ್ನು ಉಪ ಲೋಕಾಯುಕ್ತಗೆ ವರ್ಗಾಯಿಸಲು ಕಾನೂನು ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ