ಸೇವಾಭಾವನೆ ಇದ್ದರೆ ಎಂತಹ ಸಮಸ್ಯೆಗಳಿಗೂ ಪರಿಹಾರ

ಚಿತ್ರದುರ್ಗ:

    ಅಧಿಕಾರಿಗಳು ಸೇವಾಮನೋಭಾವನೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು.

     ಕಾನೂನು ಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪ್ಯಾನಲ್ ಅಡ್ವೊಕೇಟ್ ಹಾಗೂ ಸಂಧಾನಕಾರರಿಂದ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ಬೆಂಚು ಬಿಟ್ಟು ಕೆಳಗೆ ಇಳಿದಾಗ ನ್ಯಾಯಾಧೀಶ ಎನ್ನುವುದನ್ನು ಮರೆತು ಕೈಲಾದಷ್ಟು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.

      ಸಮಾಜದಲ್ಲಿ ಸಾಕಷ್ಟು ನೊಂದವರು, ಅಸಹಾಯಕರು ನ್ಯಾಯ ಬಯಸಿ ನ್ಯಾಯಾಲಯಕ್ಕೆ ಬರುತ್ತಾರೆ. ಸರ್ಕಾರಿ ಅಧಿಕಾರಿಗಳಿಗೂ ಕಾಳಜಿಯಿರಬೇಕು. ನ್ಯಾಯಾಧೀಶರು ಬೆಂಚು ಬಿಟ್ಟು ಹೊರಗೆ ಬಂದಾಗ ಅನೇಕ ಸಮಾಜ ಸೇವಾ ಕೆಲಸಗಳನ್ನು ಮಾಡಬಹುದು. ಸಮಾಜವನ್ನು ಬಿಟ್ಟು ನ್ಯಾಯಾಧೀಶರು, ಅಧಿಕಾರಿಗಳು, ವಕೀಲರು ಇರಲು ಆಗುವುದಿಲ್ಲ. ಒಳ್ಳೆಯ ಮನಸ್ಸಿನಿಂದ ಯಾವ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ.

     ಕೆಟ್ಟ ಮನಸ್ಸಿನಿಂದ ಮಾಡಿದರೆ ಕೆಟ್ಟದಾಗುತ್ತದೆ. ನನ್ನ ಮೂರು ವರ್ಷದ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ವಕೀಲರು ಸಹಕಾರ ಕೊಟ್ಟಿದ್ದರಿಂದ ಅನೇಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ ಕಕ್ಷಿದಾರರಿಗೆ ನ್ಯಾಯ ನೀಡಿದ್ದೇನೆಂಬ ತೃಪ್ತಿಯಿದೆ ಎಂದರು.
ಜೀವನದಲ್ಲಿ ಸಾಕಷ್ಟು ಕಷ್ಟ-ಸುಖ ಅನುಭವಿಸಿದ್ದೇನೆ. ವೃತ್ತಿಯಲ್ಲಿ ರಜೆ ಬಳಸಿಕೊಂಡಿರುವುದು ತುಂಬಾ ಅಪರೂಪ. ಬಡವರಿಗೆ ಸಹಾಯ ಮಾಡಿ. ಮನಸ್ಸು ತಿಳಿಯಾಗಿದ್ದರೆ ಎಲ್ಲವೂ ಒಳ್ಳೆಯದೆ ಆಗುತ್ತದೆ ಎಂದು ತಿಳಿಸಿದರು.

     ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ದಿಂಡಲಕೊಪ್ಪ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ನ್ಯಾಯಾಧೀಶರು, ವಕೀಲರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಪ್ರಕರಣಗಳನ್ನು ಬೇಗನೆ ಇತ್ಯರ್ಥಪಡಿಸಿ ಕಕ್ಷಿದಾರರಿಗೆ ನ್ಯಾಯ ದೊರಕಿಸಬಹುದು. ಈ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಎಲ್ಲಾ ವಕೀಲರು ಸಹಕರಿಸಿದ್ದಾರೆ ಎಂದು ಸ್ಮರಿಸಿಕೊಂಡರು.

      ವಕೀಲರ ಪರಿಶ್ರಮದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಯಿತು ಎಂದು ವಕೀಲರ ಕೊಡುಗೆಯನ್ನು ಕೊಂಡಾಡಿದರು.

      ಹಿರಿಯ ನ್ಯಾಯವಾದಿ ಆರ್.ಉದಯಶಂಕರ್ ಮಾತನಾಡಿ ಮೂರು ವರ್ಷಗಳ ಕಾಲ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಎಸ್.ಬಿ.ವಸ್ತ್ರಮಠರವರು ನ್ಯಾಯಾಲಯದ ಸಿಬ್ಬಂದಿಗೆ, ವಕೀಲರಿಗೆ, ಕಕ್ಷಿದಾರರಿಗೆ ಏನು ಸೌಲಭ್ಯ ಬೇಕು ಎನ್ನುವುದನ್ನು ಅರಿತುಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದರು. ನೀರಿನ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ನಿರ್ಮಾಣಕ್ಕೆ ಎಸ್.ಬಿ.ವಸ್ತ್ರಮಠರವರು ಮೊದಲ ಆದ್ಯತೆ ನೀಡಿದರು ಎಂದು ಗುಣಗಾನ ಮಾಡಿದರು.

      ಯುವ ನ್ಯಾಯವಾದಿ ಪ್ರತಾಪ್‍ಜೋಗಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತ ಎಸ್.ಬಿ.ವಸ್ತ್ರಮಠರವರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಬರೀ ನ್ಯಾಯಾಲಯಕ್ಕೆ ಮಾತ್ರ ಸೀಮಿತವಾಗಿರದೆ. ಸಾಮಾಜಿಕ ಕಳಕಳಿಯೊಂದಿಗೆ ಸಮಾಜದಲ್ಲಿ ಬೆರೆತು ನಾಗರೀಕರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದರು ಎಂದರು.

        ಕರ್ತವ್ಯದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದ ಎಸ್.ಬಿ.ವಸ್ತ್ರಮಠರವರು ಸಾಮಾಜಿಕ ಕಳಕಳಿಯೊಂದಿಗೆ ವಕೀಲರ, ಕಕ್ಷಿದಾರರ ಹಿತವನ್ನು ಗಮನದಲ್ಲಿಟ್ಟುಕೊಳ್ಳುತ್ತಿದ್ದರು. ಅವರದು ಅಂತಹ ದೊಡ್ಡ ಗುಣ ಎಂದು ಗುಣಗಾನ ಮಾಡಿದರು.ಮತ್ತೊಬ್ಬ ಹಿರಿಯ ವಕೀಲ ಎಂ.ವಿ.ರುದ್ರಯ್ಯ ಮಾತನಾಡುತ್ತ ಎಸ್.ಬಿ.ವಸ್ತ್ರಮಠರವರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೆಂಬ ಗತ್ತು ಬಿಟ್ಟು ಸರಳ ಮತ್ತು ಸಂಯಮದಿಂದ ವಕೀಲರು ಹಾಗೂ ಕಕ್ಷಿದಾರರಿಗೆ ಸಮಾಧಾನವಾಗುವ ರೀತಿಯಲ್ಲಿ ನ್ಯಾಯ ನೀಡುತ್ತಿದ್ದರು. ಕಾನೂನು ಇರುವುದೇ ಜನಸಾಮಾನ್ಯರಿಗಾಗಿ ಎಂದು ತಿಳಿದು ಕೆಲಸ ಮಾಡುತ್ತಿದ್ದರು. ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಮೂರು ವರ್ಷದಲ್ಲಿ ಶಕ್ತಿ ಮೀರಿ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನ್ಯಾಯವಾದಿಗಳಾದ ಹನುಮಂತಪ್ಪ, ರಾಜಣ್ಣ, ಸಾವಿತ್ರಮ್ಮ, ಮಹೇಶ್ವರಪ್ಪ ಮಾತನಾಡಿದರು.

      ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಶಮೀರ್ ನಂದ್ಯಾಳ್, ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಸುದೇಶ್ ಭಂಡಾರಿ ವೇದಿಕೆಯಲ್ಲಿದ್ದರು. ಪ್ಯಾನೆಲ್ ಅಡ್ವೊಕೇಟ್‍ಗಳು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap