ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ

ಬ್ಯಾಡಗಿ:

        ಭಾರತದ ಸೇನಾಪಡೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಪಕ್ಷಗಳು ಮುಸ್ಲಿಂ ಮತಗಳ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ, ಅಲ್ಪಸಂಖ್ಯಾತರಲ್ಲೂ ದೇಶ ಭಕ್ತರಿದ್ದಾರೆ ಎಂಬುದನ್ನು ಮರತಂತೆ ಕಾಣುತ್ತಿರುವ ಅವುಗಳ ಮುಖಂಡರು, ಶತಾಯಗತಾಯ ಅಧಿಕಾರ ಹಿಡಿಯುವುದಕ್ಕಾಗಿ ಏನು ಬೇಕಾದರೂ ಹೇಳಬಹುದು ಅಥವಾ ಘೋಷಿಸಬಹುದು, ದೇಶದ ಆರ್ಥಿಕ ಸ್ಥಿತಿಗತಿ ಪರಿವೆಯೇ ಇಲ್ಲದ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ ನೀಡುವುದಾಗಿ ಹೇಳುತ್ತಿರುವುದು ಇದಕ್ಕೊಂದು ಉತ್ತಮ ನಿದರ್ಶನ, ಯಾರಿಂದಲೂ ಇದು ಸಾಧ್ಯವಾಗದ ಮಾತು ಇಂತಹ ಹೇಳಿಕೆಗಳಿಗೆ ಕಿವಿಗೊಡದೇ ದೇಶದ ಹಿತದೃಷ್ಟಿಯಿಂದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

         ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸೇರಿದಂತೆ ಅದರ ಇನ್ನಿತರ ಮಿತ್ರ ಪಕ್ಷಗಳು ಚುನಾವಣೆ ಹೊಸ್ತಿಲಲ್ಲಿ ಪುಕ್ಕಟೆ ಯೋಜನೆಗಳನ್ನು ಘೋಷಿಸುವ ಪ್ರಯತ್ನ ಮಾಡುತ್ತಿವೆ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಷ್ಟ್ರ ಕಾಂಗ್ರೆಸ್ ಮುಕ್ತವಾಗಲಿದ್ದು ರಾಜ್ಯದಲ್ಲಿಯೂ ಕನಿಷ್ಟ 22 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆಯಲ್ಲದೇ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಬಹುಶಃ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

         ರಾಜ್ಯದಲ್ಲಿರುವುದು ಅಳುಬುರಕರ ಸರ್ಕಾರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್ ಪಕ್ಷವು ತಂದೆ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಪಕ್ಷವಾಗಿ ಹೊರ ಹೊಮ್ಮಿದೆ, ಅಧಿಕಾರ ಹಿಡಿಯುವ ಸಲುವಾಗಿ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಗೆಲ್ಲಿಸುವಂತೆ ಮತಗಳನ್ನು ಕೇಳುವ ಬದಲಾಗಿ ಸಾರ್ವಜನಿಕ ವೇದಿಕೆಯಲ್ಲಿ ಅಳುವುದನ್ನು ರೂಢಿಸಿಕೊಂಡಿದ್ದಾರೆ, ನಮಗೆ ಕಣ್ಣೀರಿಡುವ ಸರ್ಕಾರ ಬೇಡ ಬಡವರ ಕಣ್ಣೀರನ್ನು ಒರೆಸುವಂತಹ ಸರ್ಕಾರದ ಅವಶ್ಯವಿದೆ ಎಂದರು.

        ವಿಶ್ವದ ಇತರೆ ರಾಷ್ಟ್ರಗಳಿಗಿಂತ ದೇಶದ ಮುಸ್ಲಿಮರು ಸೇಫ್: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಮೋದಿ ಅಧಿಕಾರಕ್ಕೆ ಬಂದ ತಕ್ಷಣ ದೇಶದ ಮುಸ್ಲಿಂರಿಗೆ ತೊಂದರೆಯಾಗುತ್ತದೆ ಎಂಬುದಾಗಿ ಬೊಬ್ಬೆ ಹೊಡೆದುಕೊಳ್ಳುತ್ತಿದ್ದ ಕಾಂಗ್ರೆಸ್‍ಗೆ ಕಳೆದ ಲೋಕಸಭೆಯ ಫಲಿತಾಂಶದ ಬಳಿಕ ವಿರೋಧಪಕ್ಷದ ಸ್ಥಾನವೂ ಸಿಗಲಿಲ್ಲ, ಸ್ವಾಭಿಮಾನದಿಂದ ಬದಕುತ್ತಿರುವ ಮುಸ್ಲಿಂರನ್ನು ತಮ್ಮ ಜೀತದಾಳುವಿನಂತೆ ಬಳಕೆ ಮಾಡುತ್ತಿರುವ ಕಾಂಗ್ರೆಸ್ ಅವರ ಶ್ರೇಯೋಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳಲಿಲ್ಲ, ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಪಾನಾ ಪಕ್ಕಡ್ ಹಿಡಿದುಕೊಳ್ಳುವ ಮುಸ್ಲಿಂ ಮಕ್ಕಳ ಕೈಗೆ ಕಂಪ್ಯೂಟರ್ ಕೊಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದ ಅವರು, ಮುಸ್ಲಿಂ ಮಹಿಳೆಯರ ಸುರಕ್ಷತೆಗಾಗಿ ತ್ರಿವಳಿ ತಲ್ಲಾಖ್ ಕಾನೂನು ಜಾರಿಗೊಳಿಸಿದ್ದಾಗಿ ತಿಳಿಸಿದರು.

          ಪ್ರಸಕ್ತ ಚುನಾವಣೆ ಜನಾಂಧೋಲನ: ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದಿಂದಾಗಿ ಕಳೆದ 55 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ 55 ತಿಂಗಳಲ್ಲಿ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದು ವಿಶ್ವದಲ್ಲಿ ಮೂರನೇ ಸ್ಥಾನ ತಲುಪಿದೆ, ಬಡವರ ಆರೋಗ್ಯಕ್ಕಾಗಿ ಜನೌಷಧಿ ಮಳಿಗೆ ಸೇರಿದಂತೆ ರೂ.5 ಲಕ್ಷದವರೆಗಿನ ವೈದ್ಯಕೀಯ ವೆಚ್ಚ, ಉಚಿತ ಆರೋಗ್ಯ ಚಿಕಿತ್ಸೆ, ಉಜ್ವಲ್ ಯೋಜನೆಯಡಿ ಸಿಲೆಂಡರ್ ಸೇರಿದಂತೆ ಹಾವೇರಿ ಲೋಕಸಭಾ ಕ್ಷೇತ್ರವೊಂದರಲ್ಲೇ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 77 ಸಾವಿರ ಫಲಾನುಭವಿಗಳನ್ನು ಗುರ್ತಿಸಲಾಗಿದೆ ಎಂದ ಅವರು 2019 ಅಂತ್ಯಕ್ಕೆ ದೇಶವಿಡೀ ವಿದ್ಯುಚ್ಚಕ್ತಿ ಸೇವೆಯನ್ನು ಆರಂಭಿಸಲಾಗುವುದು ಎಂದರು.

         ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ಮಾಜಿ ಶಾಸಕ ಸುರೇಶಗೌಡ ಪಾಟೀಳ, ಬಿಜೆಪಿ ಮುಖಂಡರಾದ ಶಂಕ್ರಣ್ಣ ಮಾತನವರ, ಸಿದ್ಧರಾಜು ಕಲಕೋಟಿ, ಮುರಿಗೆಪ್ಪ ಶೆಟ್ಟರ, ಚಂದ್ರಣ್ಣ ಮುಚ್ಚಟ್ಟಿ, ರಾಮಣ್ಣ ಕೋಡಿಹಳ್ಳಿ, ಶೇಖರಗೌಡ ಗೌಡ್ರ, ಸುರೇಶ್ ಅಸಾದಿ, ಸುರೇಶ ಯತ್ನಳ್ಳಿ, ವಿರೇಂದ್ರ ಶೆಟ್ಟರ, ಎಸ್.ಎನ್.ಯಮನಕ್ಕನವರ, ಜೆ.ಸಿ.ಚಿಲ್ಲೂರಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link