ಕೊಟ್ಟೂರು
ಪಟ್ಟಣದಲ್ಲಿ ಡಿ.25ರಂದು ಜರುಗುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶಾಂತಿ, ಸುವ್ಯವಸ್ಥೆ ಹಾಗೂ ರಕ್ಷಣೆಯ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಹಸೀಲ್ದಾರ ಕೆ.ಮಂಜುನಾಥ ಹೇಳಿದರು.
ಇಲ್ಲಿನ ದೇವಸ್ಥಾನದ ಹಿಂಬದಿಯ ಆವರಣದಲ್ಲಿ ಶುಕ್ರವಾರ ನಡೆದ ಪೊಲೀಸ್ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸ್ವಾಮಿಯ ಕಾರ್ತಿಕೋತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ನೂಕಾಟ, ಅಪರಾಧ ಪ್ರಕರಣಗಳು ಭಾಧಿಸದಂತೆ ಎಚ್ಚರ ವಹಿಸಲಾಗುತ್ತಿದೆ. ದೇವಸ್ಥಾನದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸೇರಿ ಯಾವುದೇ ವಾಹನಕ್ಕೆ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದರು.
ಕೂಡ್ಲಿಗಿ ಡಿವೈಎಸ್‍ಪಿ ಬಸವೇಶ್ವರ ಹೀರಾ ಮಾತನಾಡಿ, ಭಾನುವಾರ ಸಂಜೆಯಿಂದಲೇ ದೇವಸ್ಥಾನಕ್ಕೆ ಪೊಲೀಸರನ್ನು ನಿಯೋಜಿಸಲಾಗುವುದು. ಯಾವುದೇ ಕಳ್ಳತನ ಅಥವಾ ಇತರೆ ಅಪರಾಧ ಪ್ರಕರಣಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಅಪರಾಧ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದರು.
ಪರವೂರಿನಿಂದ ಬರುವ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ. ಡಿ.24ರ ಮಧ್ಯರಾತ್ರಿ ಹೊರಡುವ ಸ್ವಾಮಿಯ ಬೆಳ್ಳಿ ರಥೋತ್ಸವ ಸಂದರ್ಭದಲ್ಲಿ ನೂಕು ನುಗ್ಗಲು ಆಗದಂತೆ ಹೆಚ್ಚಿನ ಸಿಬ್ಬಂದಿ ಹಾಕಲಾಗುತ್ತದೆ. ದೇವಸ್ಥಾನದೊಳಗೆ ಪಿಎಸ್‍ಐಗಳನ್ನು ಮತ್ತು ಇತರೆ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತುಗೆ ಹಾಕಲಾಗುವುದು ಎಂದು ಮಾಹಿತಿ ನೀಡಿದರು.
ವೈದ್ಯಾಧಿಕಾರಿ ಡಾ.ಬದ್ಯಾನಾಯ್ಕ ಮಾತನಾಡಿ, ಕಾರ್ತಿಕೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನಾರೋಗ್ಯ ಸಮಸ್ಯೆ ಕಂಡು ಬರದಂತೆ ಎಚ್ಚರಿಕೆ ವ್ಯವಸ್ಥ ಮಾಡಲಾಗುವುದು ಎಂದರು.
ಜೆಸ್ಕಾಂ ಎಇ ಚೇತನ್ ಎರಡು ದಿನಗಳ ಕಾಲ ವಿದ್ಯುತ್ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ವಿದ್ಯುತ್ ಪರಿಕರ, ತಂತಿಗಳ ದುರಸ್ತಿ ನಡೆದಿದೆ. ವಿದ್ಯುತ್ ತೊಂದರೆ ತಪ್ಪಿಸಲು ಆದಿನ 10 ಲೈನ್ ಮೆನ್‍ಗಳನ್ನು ನಿಯೋಜಿಸುತ್ತೇವೆ ಎಂದರು.
ಕಾರ್ತಿಕೋತ್ಸವದ ಸಿದ್ದತೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಕುರಿತು ದೇವಸ್ಥಾನದ ಇಒ ಪ್ರಕಾಶ್‍ರಾವ್, ಅಗ್ನಿ ಶಾಮಕ ಠಾಣೆಯ ವಾಸುದೇವಪ್ಪ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಫ್ ಬಿದರಿ, ಸಿಪಿಐ ರವೀಂದ್ರ ಕುರುಬಗಟ್ಟಿ ಪ್ರಾಸ್ತಾವಿಕ ಮಾನತಾಡಿದರು.ಪಿಎಸ್‍ಐ ಕಾಳಿಂಗ ನಿರ್ವಹಿಸಿದರು. ಧರ್ಮಕರ್ತ ಸಿಎಚ್‍ಎಂ ಗಂಗಾಧರಯ್ಯ, ಕಾಂಗ್ರೆಸ್ ಮುಖಂಡ ಪಿ.ಎಚ್.ದೊಡ್ಡರಾಮಣ್ಣ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
