ಹಾವೇರಿ
ಇಂದಿನಿಂದ ಮಾರ್ಚ್ 23ರವರೆಗೆ ನಡೆಯಲಿರುವ ಹೋಳಿ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಿಸುವುದಾಗಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ವಿವಿಧ ಸಮಾಜ ಹಾಗೂ ಧರ್ಮದ ಮುಖಂಡರು ಹೇಳಿದರು.
ಹಾವೇರಿ ನಗರ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ನಡೆಸ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ವಿವಿಧ ಧರ್ಮದ ಮುಖಂಡರು, ಹಿರಿಯ ನಾಗರಿಕರು, ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
ಪೊಲೀಸ್ ಉಪಾಧೀಕ್ಷಕರಾದ ಎಲ್.ಕುಮಾರಪ್ಪ ಅವರು ಮಾತನಾಡಿ, ಹಾವೇರಿ ನಗರದಲ್ಲಿ ಮಾರ್ಚ್ 18 ರಿಂದ 23ರವರೆಗೆ ಹೋಳಿ ಹಬ್ಬದ ಆಚರಣೆ ನಡೆಯುತ್ತದೆ. ಈ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ಹಾಗೂ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗಳು ಬಂದಿವೆ. ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಹಾಗೂ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಹೋಳಿ ಆಚರಿಸೋಣ ಎಂದು ಮನವಿ ಮಾಡಿಕೊಂಡರು.
ಹೋಳಿಯ ಸಂಭ್ರಮದಲ್ಲಿ ಬಳಸುವ ಬಣ್ಣಗಳು ಪರಿಸರಸ್ನೇಹಿಯಾಗಿರಲಿ. ರಾಸಾಯನಿಕ ಯುಕ್ತಬಣ್ಣಗಳನ್ನು ಬಳಸಬೇಡಿ. ಇದರಿಂದ ಆರೋಗ್ಯದಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ ಮನವಿ ಮಾಡಿಕೊಂಡರು.
ಹಬ್ಬದ ಸಂಭ್ರಮದಲ್ಲಿ ಬೇರೆಯವರಿಗೆ ಯಾವುದೇ ತರದ ತೊಂದರೆಮಾಡುವುದು ಬೇಡ. ಬೇರೆ ಧರ್ಮ ಹಾಗೂ ಭಾವನೆಗಳಿಗೆ ಧಕ್ಕೆ ತರುವುದು ಬೇಡ. ಭಾವೈಕ್ಯತೆಯಿಂದ, ಸೌಹಾರ್ದತೆಯಿಂದ ಶಾಂತಿಯಿಂದ ನಮ್ಮ ಸಂಭ್ರಮವನ್ನು ವ್ಯಕ್ತಪಡಿಸೋಣ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.
ಪೌರಾಯುಕ್ತ ಬಸವರಾಜ ಜಿದ್ದಿ ಅವರು ಮಾತನಾಡಿ, ಕಾಮಣ್ಣನ ಮೆರವಣಿಗೆ ಹೊರಡುವ ನಗರದ ಬೀದಿಗಳಲ್ಲಿ ಸ್ಥಳಪರಿಶೀಲಿಸಿ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡುವುದಾಗಿ ಸಭೆಯಲ್ಲಿ ಭಾಗವಹಿಸಿದ ಹಿರಿಯರಿಗೆ ತಿಳಿಸಿದರು.
ತಹಶೀಲ್ದಾರ ಶಿವಕುಮಾರ ಅವರು ಮಾತನಾಡಿ, ಎಲ್ಲ ಧರ್ಮಿರೂ ಹಾಗೂ ಜನಾಂಗ ಹೋಳಿಯನ್ನು ಅತ್ಯಂತ ಶಾಂತಿಯುತವಾಗಿ ಆಚರಿಸೋಣ. ಯಾವುದೇ ಸಮಸ್ಯೆಗಳು ಸೃಷ್ಟಿಸುವುದು ಬೇಡ, ಗೊಂದಲಗಳಿಗೆ ಎಡೆಮಾಡಿಕೊಡುವುದು ಬೇಡ. ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಸೌಹಾರ್ದಯುತವಾಗಿ ಹೋಳಿ ಆಚರಿಸಲು ಮನವಿ ಮಾಡಿಕೊಂಡರು.
ಪಿ.ಎಸ್.ಐ. ಗೌಡಪ್ಪಗೌಡ್ರ ಮಾತನಾಡಿ, ಹೋಳಿ ಹಬ್ಬದ ಆಚರಣೆ ಅಂಗವಾಗಿ ಮಾ.19 ರಂದು ಪುರಸಿದ್ದೇಶ್ವರ ದೇವಸ್ಥಾನದಿಂದ ಬೈಕ್ ರ್ಯಾಲಿ, ಮಾ.20 ರಂದು ಕಂಕಣಕಟ್ಟುವುದು ಹಾಗೂ ಜೀವಂತ ಕಾಮರತಿ ಕಾರ್ಯಕ್ರಮ ನಡೆಯಲಿದೆ. ಮಾ.21 ರಂದು ರಾತ್ರಿ ಕಾಮನ ಹಾಸ್ಯಹೊನಲು, ಮಾ.22 ರಂದು ಅಡ್ಡಸೋಗಿನ ಸ್ಪರ್ಧೆ, ಮಾ.23 ರಂದು ಗಡಿಗೆ ಒಡೆಯುವ ಸ್ಪರ್ಧೆಗಳನ್ನು ನಡೆಸುವುದಾಗಿ ಹೋಳಿ ಸಮಿತಿ ಹೇಳಿದೆ ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ವಿವಿಧ ಸಮಾಜದ ಮುಖಂಡರು, ಸೌಹಾರ್ದಯುತ ಹೋಳಿ ಆಚರಣೆಗೆ ಎಲ್ಲರೂ ಸಹಕರಿಸುವುದಾಗಿ ಹೇಳಿದರು. ಹಾಗೂ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಹಾಗೆ ಶಾಂತಿಯುತವಾಗಿ ಹೋಳಿ ಆಚರಣೆಗೆ ನಾವೆಲ್ಲ ಬದ್ಧವಾಗಿದ್ದೇವೆ. ಹೋಳಿ ಮೆರವಣಿಗೆ ಸಾಗುವ ದಾರಿಯಲ್ಲಿ ರಸ್ತೆಗಳನ್ನು ಸರಿಪಡಿಸಿ ಹೋಳಿ ಸಂಭ್ರಮದ ಪ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ಅಳವಡಿಸಲು ಸಹಕರಿಸಿ. ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.