ಚಿತ್ರದುರ್ಗ
ಶರಣರ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದಿಂದ ಆಯೋಜಿಸಿದ್ದ ಶ್ರೀ ಶಿವದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿ, ಮೌಢ್ಯ ತೊರೆದರೆ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು ದೈವಿ ಮಾರ್ಗಕ್ಕೂ ಹಾಗೂ ಶರಣರ ಹಾದಿಗೂ ತುಂಬಾ ವ್ಯತ್ಯಾಸವಿದೆ. ಅಂತರಂಗ-ಬಹಿರಂಗದಲ್ಲಿನ ಮೂಢನಂಬಿಕೆಯನ್ನು ಶರಣರ ಜ್ಞಾನದ ಜ್ಯೋತಿ ಬೆಳಗಿಸಿ ಹೊಡೆದೊಡಿಸಬೇಕು ಎಂದು ತಿಳಿಸಿದರು.
ಸಣ್ಣ ಕಾಯಕದ ಮೂಲಕ ದೊಡ್ಡ ಆದರ್ಶಗಳನ್ನು ತೋರಿಸಿದ ಸಮಾಜ ಶಿವಶಿಂಪಿ ಸಮಾಜವಾಗಿದೆ. ಶಿವಯೋಗ ಮಾರ್ಗ, ಧ್ಯಾನ ಮಾರ್ಗ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವವರು ಬಡವರಲ್ಲ ಎಂದರು.ಸಂಘಟನೆ ಒಂದು ದಿನ ಒಂದು ವೇದಿಕೆಗೆ ಸೀಮಿವಾಗಬಾರದು. ಯಾರು ಆದರ್ಶಗಳನ್ನು ಪಾಲಿಸುತ್ತಾರೋ ಅವರು ಇತಿಹಾಸದಲ್ಲಿ ಉಳಿಯುತ್ತಾರೆ. ಇಂತಹ ದಿನಗಳಲ್ಲಿ ಮುರುಘಾ ಮಠವು ಶರಣರ ತತ್ವದಂತೆ ಸಮಾಜ ಪರಿವರ್ತನೆಗೆ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದರು.
ಶಿವಶಿಂಪಿ ಸಮಾಜಕ್ಕೆ ಎಕರೆ ಜಮೀನು: ಶಿವಶಿಂಪಿ ಸಮಾಜ ಕಳೆದ 10 ವರ್ಷಗಳಿಂದ ಸಂಘಟನೆ ಆಗುತ್ತಿದೆ. ಧಾರ್ಮಿಕ ಪುರುಷ ಶಿವದಾಸಿಮಯ್ಯನವರ ಭಾವಚಿತ್ರ ಒಂದು ಸಮಾಜವನ್ನು ಪರಿವರ್ತನಾ ದಾರಿಯಲ್ಲಿ ಸಾಗಲು ಪ್ರೇರೇಪಿಸಿದೆ. ಆದ್ದರಿಂದ ಸಮುದಾಯದ ಪ್ರಗತಿಗೆ ಶ್ರೀಮಠದಿಂದ ದಾವಣಗೆರೆಯ ಬಾತಿಯಲ್ಲಿ 1 ಎಕರೆ ಭೂಮಿ ನೀಡಲಾಗುವುದು ಎಂದು ಮುರುಘಾ ಶರಣರು ಘೋಷಿಸಿದರು.
ಕುಲ ಕಸುಬು ಮೂಲೆಗುಂಪು:
ದಾಸಿಮಯ್ಯನವರು ಕುಲ ಕಸುಬು, ಕರ್ತವ್ಯ ಮತ್ತು ಕಾಯಕ ನಿಷ್ಠೆಯನ್ನು ಸಮಾಜಕ್ಕೆ ಕಲಿಸಿದರು. ಜಾಗತಿಕ ದಿನಮಾನದಲ್ಲಿ ಕುಲ ಕಸುಬು ಮೂಲೆಗುಂಪಾಗಿದ್ದು, ಆರ್ಥಿಕ, ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಹಿನ್ನಡೆಯಾಗಿದೆ. ಸಮುದಾಯಕ್ಕೆ ಒಬಿಸಿ ಮಾನ್ಯತೆ ಸಿಕ್ಕರೂ ತಾಂತ್ರಿಕ ಸಮಸ್ಯೆಗಳಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಮಾಜದ ಮುಖಂಡ ಪ್ರೊ.ಮಲ್ಲಿಕಾರ್ಜನ ಜವಳಿ ವಿಷಾದಿಸಿದರು.
ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷ ಎಸ್.ವಿ.ಕೊಟ್ರೇಶ್, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಸುರೇಶ್, ಟ್ರಸ್ಟ್‍ನ ಅಧ್ಯಕ್ಷ ಶಂಭುಲಿಂಗಪ್ಪ, ಪ್ರಭಾಕರ ಮೋಳೆದ, ವಸಂತ ಕುಮಾರ್ ಹೆಗಡಾಳ್, ಸಂತೋಷ್ ಕುಮಾರ್, ಸುರೇಶ್ ಪಟ್ಟಣ್, ನಿರ್ಮಲಾ ಬಸವರಾಜ್ ಉಪಸ್ಥಿತರಿದ್ದರು.