ಬೆಂಗಳೂರು:
ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2022 ರಿಂದ ಪ್ರಾಣಿ ದತ್ತು ಸ್ವೀಕರಿಸುವವರ ಸಂಖ್ಯೆ ಇಳಿಮುಖವಾಗಿದ್ದು, ಯೋಜನೆಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಲಭ್ಯವಿಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಿದೆ ಬಿಬಿಪಿಯ ವ್ಯವಸ್ಥೆ
ಬೆಂಗಳೂರಿನಲ್ಲಿ ಹೆಚ್ಚಿನ ಆದಾಯ ಹೊಂದಿರುವ ಜನರಿದ್ದಾರೆ ಹಾಗೂ ವರ್ಷದಿಂದ ವರ್ಷಕ್ಕೆ ಬಿಬಿಪಿಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸುವುದಕ್ಕೆ ಅಥವಾ ಅವುಗಳಿಗೆ ಆಹಾರ ನೀಡುವುದಕ್ಕೆ ಮುಂದಾಗುತ್ತಿರುವ ಜನರ ಸಂಖ್ಯೆ ಇನ್ನೂ ಕಡಿಮೆ ಇದೆ, ಇದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳಬೇಕೆಂಬುದರ ಬಗ್ಗೆ ನಾವೂ ಯೋಚಿಸುತ್ತೇವೆ, ಪ್ರತಿ ಬಾರಿ ಯಾವುದೇ ವ್ಯಕ್ತಿ ಅಥವಾ ಗ್ರೂಪ್ ಬುಕಿಂಗ್ ಗಳಾದಾಗ ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೆವೆ ಎಂದು ಮೃಗಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಾಣಿ ದತ್ತು ಯೋಜನೆಯಿಂದ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. ದತ್ತು ಪಡೆದವರಿಗೆ ಕೊಡುಗೆಗಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ದತ್ತು ತೆಗೆದುಕೊಳ್ಳುವವರ ಹೆಸರನ್ನು ಆವರಣದ ಮೇಲೆ ದತ್ತು ಅವಧಿಯವರೆಗೆ ಪ್ರದರ್ಶಿಸಲಾಗುತ್ತದೆ. ವ್ಯಕ್ತಿಗೆ ಆರೋಗ್ಯ ಮತ್ತು ಆಹಾರದ ಬಗ್ಗೆ ನಿಯಮಿತ ನವೀಕರಣಗಳನ್ನು ನೀಡಲಾಗುತ್ತದೆ ಮತ್ತು ನಿಯಮಿತ ಮಧ್ಯಂತರದಲ್ಲಿ ಪ್ರಾಣಿಗಳನ್ನು ಭೇಟಿ ಮಾಡಲು ಅವಕಾಶವನ್ನು ನೀಡಲಾಗುತ್ತದೆ.
BBP ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಮಾತನಾಡಿ, “ನಾವು ಜಾಗೃತಿ ಅಭಿಯಾನಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು. ದತ್ತು ಮತ್ತು ಆಹಾರಕ್ಕಾಗಿ ಹೆಚ್ಚು ಬೇಡಿಕೆಯಿರುವ ಪ್ರಾಣಿಗಳೆಂದರೆ ಅದು ಆನೆಗಳು, ಹುಲಿಗಳು ಮತ್ತು ಪಕ್ಷಿಗಳು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.