
ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಧ ಗಜಾನನಭಟ್ ಇಂದು 16 ಮಂದಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.
ಓರ್ವ ಆರೋಪಿ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಕರಿಕರ್ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಚನ್ನಕೇಶವ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೆ ಭ್ರಷ್ಟಾಚಾರ ಎಸಗಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಹತ್ಯೆಗೀಡಾದ ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ. 2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು.
ಈ ಬಗ್ಗೆ ಸಮಗ್ರ ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು. 10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿತ್ತು.
ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯನ್ನ ಕೋರ್ಟ್ ಖುಲಾಸೆಗೊಳಿತ್ತು. ಇನ್ನು ಇಬ್ಬರು ನಿರ್ದೋಷಿಗಳನ್ನ ಬಿಟ್ಟು ಉಳಿದವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ 17 ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಲಾಗಿತ್ತು.
ನಿನ್ನೆ ಶಿಕ್ಷೆಯ ಪ್ರಮಾಣ ಕುರಿತಂತೆ ಎರಡೂ ಕಡೆ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿದ್ದರು.








