ಚಿತ್ರದುರ್ಗ;
2019ನೇ ಸಾಲಿನ ಶರಣಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ 2ರಿಂದ 11ರವರೆಗೆ ನಡೆಸಲಾಗುವುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಮುರುಘಾಮಠದಲ್ಲಿ ನಡೆದ ಶರಣಸಂಸ್ಕೃತಿ ಉತ್ಸವ-2019ರ ಪೂರ್ವಸಿದ್ಧತ ಸಭೆಯಲ್ಲಿ ಶ್ರೀಗಳು ಮಾತನಾಡುತ್ತ, ಶರಣಸಂಸ್ಕೃತಿ ಉತ್ಸವ ವಿಚಾರಗಳ ಹಬ್ಬ ಎಂದು ಹೇಳಲು ನಮಗೆ ಖುಷಿಯಾಗುತ್ತದೆ. ಮಾನವೀಯತೆಯನ್ನು ಕ್ರಿಯಾಶೀಲಗೊಳಿಸುವ, ಬಸವಣ್ಣನವರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಮಾಜಮುಖಿ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶ್ರೀಗಳು ಮಾಹಿತಿ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಮಧ್ಯಕರ್ನಾಟಕ ಭಾಗದಲ್ಲಿ ಮಳೆಇಲ್ಲದೆ ಅನಾವೃಷ್ಟಿಯಾಗಿದೆ. ಆದ ಕಾರಣ ಸರ್ಕಾರ ಈ ಭಾಗದಲ್ಲಿ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಬೇಕು. ಈ ಭಾಗದ ನೀರಾವರಿ ಯೋಜನೆಗಳ ಕುರಿತು ಉತ್ಸವದಲ್ಲಿ ಚರ್ಚಿಸಲಾಗುವುದು. ಅರ್ಥಪೂರ್ಣವಾಗಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ಸವವಾಗಿ ಇದು ನಡೆಯಲಿದೆ ಎಂದು ನುಡಿದರು.
ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ, ಹಿಂದಿನಿಂದಲೂ ಶ್ರೀಮಠದ ಈ ಉತ್ಸವವು ಮಧ್ಯಕರ್ನಾಟಕದ ಮಹೋತ್ಸವವಾಗಿದೆ. ಪ್ರಗತಿಪರ ವಿಚಾರಗಳಿಂದ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುತ್ತಿದೆ. ಪಕ್ಷಾತೀತವಾಗಿ ನಿಸ್ವಾರ್ಥ ಮನೋಭಾವದಿಂದ ಉತ್ಸವವನ್ನು ಎಲ್ಲರೂ ಕೂಡಿಕೊಂಡು ಯಶಸ್ವಿಗೊಳಿಸೋಣ ಎಂದರು
ಪ್ರತಿವರ್ಷ ಉತ್ಸವದಲ್ಲಿ ಕುಸ್ತಿಯ ಜೊತೆಗೆ ಮತ್ತೊಂದು ಕ್ರೀಡೆಯನ್ನು ನಡೆಸುತ್ತ ಬರಲಾಗಿದೆ. ಈ ಬಾರಿ ಬಾಸ್ಕೆಟ್‍ಬಾಲ್ ಕ್ರೀಡಾಕೂಟವನ್ನು ನಡೆಸುತ್ತಿರುವುದು ಸಂತಸ ತಂದಿದೆ ಎಂದರು. ಈ ಕ್ರೀಡಾಕೂಟದ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಬೇಕು ಎಂಬ ಶ್ರೀಗಳ ಮಾತಿಗೆ, ಪೂರಕವಾಗಿ ಪ್ರತಿಕ್ರಿಯಿಸಿದ ಶಾಸಕರು ಉತ್ಸವವನ್ನು ನಮ್ಮದೇ ಎಂಬ ಮನೋಭಾವದೊಂದಿಗೆ ಆಚರಿಸೋಣ. ಮುಖ್ಯಮಂತ್ರಿಗಳನ್ನು, ಸಚಿವರನ್ನು ಕರೆಸಿ ನಮ್ಮ ಜಿಲ್ಲೆಯ ಅಗತ್ಯತೆಗಳನ್ನು ಚರ್ಚಿಸಿ ಕಾರ್ಯಗತವಾಗುವಂತೆ ನೋಡಿಕೊಳ್ಳೋಣ ಎಂದರು.
ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ ಮಾತನಾಡಿ, ಈ ಉತ್ಸವವನ್ನು ಸರ್ವಜನಾಂಗದ ಹಬ್ಬವಾಗಿ ಆಚರಿಸುತ್ತ ಎಲ್ಲ ಸಮಾಜದ ಜನರನ್ನು ಒಳಗೊಳ್ಳುತ್ತ ಈ ಭಾಗದ ನೀರಾವರಿ ಕುರಿತು ಚಿಂತನ ಮಂಥನ ನಡೆಸುತ್ತ ಬಸವಣ್ಣನವರ ವಿಚಾರಗಳನ್ನು ಸಮಾಜದಲ್ಲಿ ಅನುಷ್ಠಾನವಾಗುವಂತೆ ಉತ್ಸವವನ್ನು ನಡೆಸೋಣ ಎಂದರು. ಉತ್ಸವದ ಯಶಸ್ಸಿಗಾಗಿ ಎಲ್ಲರೂ ತನುಮನದನವನ್ನು ಅರ್ಪಿಸುವುದರೊಂದಿಗೆ ಕೈಜೋಡಿಸುವಂತೆ ಕೋರಿದರು.
ಜಿ.ಪಂ. ಸಿಇಓ ಶ್ರೀಮತಿ ಸತ್ಯಭಾಮ ಮಾತನಾಡಿ, ಚಿತ್ರದುರ್ಗ ಎಂದರೆ ನೆನಪಾಗುವುದೇ ಈ ಮಠ. ಜಿ.ಪಂ. ಕಾರ್ಯವ್ಯಾಪ್ತಿಯಲ್ಲಿ ಉತ್ಸವಕ್ಕೆ ಹೇಗೆ ನೆರವಾಗಬಹುದೋ ಅದೆಲ್ಲವನ್ನು ನೀಡುತ್ತೇವೆ. ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿದ್ದ ಫಾದರ್ ರಾಜು, ಶಿವಕುಮಾರ್ ಉತ್ಸವಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಹನುಮಲಿ ಷಣ್ಮುಖಪ್ಪ, ತಾಜ್‍ಪೀರ್, ದಾವಣಗೆರೆಯ ಬಸವಪ್ರಭು ಸ್ವಾಮಿಗಳು, ಎಂ.ಎನ್. ಜಯಕುಮಾರ್, ದಯಾನಂದ್ ಕಡೂರು, ಮಾವಿನಹಳ್ಳಿ ಬಸವೇಶ್ವರ ದೇವಸ್ಥಾನ ಸಮಿತಿ, ಹೊಸದುರ್ಗ ಒಪ್ಪತ್ತಿನಸ್ವಾಮಿ ವಿರಕ್ತಮಠ ಸಮಿತಿ, ತುಮಕೂರು ಜಯದೇವ ಹಾಸ್ಟೆಲ್, ಅಥಣಿಯ ಶಿವಬಸವ ಸ್ವಾಮಿಗಳು, ಪಟೇಲ್ ಶಿವಕುಮಾರ್, ತಾ.ಪಂ. ಅಧ್ಯಕ್ಷ ಲಿಂಗರಾಜ್, ಚನ್ನಗಿರಿ ವಿರಕ್ತಮಠ, ಹೆಬ್ಬಾಳು ರುದ್ರೇಶ್ವರ ಮಠ, ಎಲ್.ಬಿ.ರಾಜಶೇಖರ್, ಹೊಳಲ್ಕೆರೆಯ ಮುರುಘೇಶ್, ರಾಮಗಿರಿಯ ರಾಮಣ್ಣ, ಕಸವನಹಳ್ಳಿ ಶಿವಣ್ಣ, ಲೋಕೇಶಪ್ಪ, ಕವಾಡಿಗರಹಟ್ಟಿ ಮುರುಘೇಶ್, ತುಮಕೂರು ಸಿದ್ಧಗಂಗಮ್ಮ, ಬುಕ್ಕಾಂಬೂದಿ ಅಕ್ಕನಾಗಮ್ಮ ಮುಂತಾದವರು ಹೆಚ್ಚಿನ ರೀತಿಯಲ್ಲಿ ಕಾಣಿಕೆಯನ್ನು ಸಲ್ಲಿಸುವುದಾಗಿ ಇದೇ ಸಂದರ್ಭಲ್ಲಿ ವಾಗ್ದಾನ ಮಾಡಿದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
