ಬೆಂಗಳೂರು:
ವೀರಶೈವರಾಗಲೀ ಲಿಂಗಾಯತರಾಗಲೀ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಶರಣ ಸಂಸ್ಕತಿಯ ಮಾನವರಾಗಿ ಬಾಳಿ ಎಂದು ಕರೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು, ತುಳಿತಕ್ಕೊಳಗಾಗಿರುವ ಶರಣ ಸಮುದಾಯದ ವರ್ಗಗಳು ಪುಟಿದೇಳಬೇಕಾಗಿದೆ ಎಂದು ಹೇಳಿದರು.
ಭಾನುವಾರ ವಿಜಯನಗರದಲ್ಲಿನ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ `ಶರಣ ವಕೀಲರ ವೇದಿಕೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನ ಕೊರತೆಯಿಂದಾಗಿ ಶರಣ ಸಮುದಾಯದ ವರ್ಗಗಳಿಗೆ ರಾಜಕೀಯವೂ ಸೇರಿದಂತೆ ವಿವಿಧ ರಂಗಗಳಲ್ಲಿ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ವಿಶ್ವ ಮಾನ್ಯನಾಗಬೇಕಾದ ಬಸವಣ್ಣನವರನ್ನು ಒಂದು ಜೇಬಿನಲ್ಲಿಟ್ಟುಕೊಂಡು ಯಾರ್ಯಾರನ್ನೋ ವಿಶ್ವಮಾನ್ಯರನ್ನಾಗಿ ಗುರುತಿಸಿದ್ದೇವೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಮ್ಮವರನ್ನು ನಮ್ಮವರೆಂದು ಹೇಳಿಕೊಳ್ಳುತ್ತಾ ಮತ್ತೊಬ್ಬರಿಗೆ ಅನ್ಯಾಯ ಮಾಡದೇ ಬಲಿಷ್ಠ ಸಮಾಜವನ್ನು ನಿರ್ಮಿಸೋಣ ಎಂದರು.
ಶರಣ ವಕೀಲರ ವೇದಿಕೆ ಈ ನಿಟ್ಟಿನಲ್ಲಿ ಒಂದು ಸಾಧನವಾಗಿ ಬೆಳೆದು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸಲಹೆ ಮಾಡಿದ ಶಿವರಾಜ ಪಾಟೀಲರು, ಬದಲಾವಣೆ ಕಾಲ ಸನ್ನಿಹಿತವಾದಾಗ ಅದನ್ನು ಯಾವ ಶಕ್ತಿಯಿಂದಲೂ ತಡೆಯಲಿಕ್ಕಾಗದು ಎಂದು ಮಾರ್ಮಿಕವಾಗಿ ಹೇಳಿದರು.
ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ, ಬಿಬಿಎಮ್‍ಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ನಿವೃತ್ತ ನ್ಯಾಯಮೂರ್ತಿಗಳಾದ ಶೈಲೆಂದ್ರಕುಮಾರ್, ಬಿ.ಎಸ್. ಪಾಟೀಲ, ನಿವೃತ್ತ ಉಪ ಲೋಕಾಯುಕ್ತರಾದ ಸುಭಾಷ್ ಆದಿ, ಎಸ್.ಬಿ. ಮಜಗೆ, ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಕರ್ನಾಟಕ ವಕೀಲ ಪರಿಷತ್ ಅಧ್ಯಕ್ಷ ಕೆ.ಬಿ. ನಾಯಕ್ ಅವರು ಮಾತನಾಡಿ ಒಗ್ಗಟ್ಟಿನಿಂದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದಾಗಿದೆ ಎಂದರಲ್ಲದೇ ಶರಣ ವಕೀಲರ ವೇದಿಕೆ ಸಂಸ್ಥಾಪನೆ ಎಲ್ಲ ಸಮುದಾಯಗಳ ಏಳ್ಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ದೇಶ್ವರಮಠದ ಕರವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯ ನ್ಯಾಯವಾದಿ ರಾಜಣ್ಣ ಅವರು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬರುವ ಯುವ ಕಾನೂನು ಪದವಿಧರರು ಸೇರಿದಂತೆ ಇತರೆ ವೃತ್ತಿಪರಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದು ವೇದಿಕೆಯ ಪ್ರಥಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿಗಳಾದ ಪ್ರಮೀಳಾ ನೇಸರ್ಗಿ, ಎಮ್. ಶಿವಪ್ಪ, ಆರ್.ಬಿ. ಸದಾಶಿವಪ್ಪ, ಆರ್. ರಾಜಣ್ಣ, ಕಾಶಿನಾಥ ಮೋಟಕಪಲ್ಲಿ ಎಸ್. ಬಸವರಾಜ್ ಮತ್ತಿತರರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ರವಿ ಬಿ ನಾಯಕ್ ಮಾತನಾಡಿದರು.
ನ್ಯಾಯವಾದಿ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರೆ ಚಾಮರಾಜ್ ವಂದನಾರ್ಪಣೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ