ಬೆಂಗಳೂರು
ರಾಜಕಾರಣದಲ್ಲಿ ಐದು ದಶಕಗಳ ಕಾಲ ಮೆರೆದ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್, ಆರ್,ಎಸ್.ಎಸ್ ಸಂಘಟನೆ ಮತ್ತು ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಗರದ ನಾಗವಾರದಲ್ಲಿ ನಡೆದ ಆರ್.ಎಸ್.ಎಸ್. ಸಮಾವೇಶದಲ್ಲಿ ಜಾಫರ್ ಷರೀಫ್ ಪಾಲ್ಗೊಂಡಿದ್ದರು.
ಅಲ್ಪ ಸಂಖ್ಯಾತ ಸಮುದಾಯದ ಪ್ರಬಲ ಮುಖಂಡರಾಗಿದ್ದ ಷರೀಫ್, ತಮ್ಮನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದರು . ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪಕ್ಷ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ಇದೇ ಸಂದರ್ಭದಲ್ಲಿ ನಾಗವಾರದಲ್ಲಿ ನಡೆದಿದ್ದ ಆರ್.ಎಸ್.ಎಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆರ್.ಎಸ್.ಎಸ್ ಬಗ್ಗೆ ಷರೀಫ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ಕಾಂಗ್ರೆಸ್‍ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ನಂತರ ಪರಿವಾರದ ಹಿರಿಯ ಮುಖಂಡ ಮೋಹನ್ ಬಾಗ್ವತ್ ಅವರನ್ನು ಷರೀಫ್ ಹಾಡಿ ಹೊಗಳಿದ್ದರು. ಬಾಗ್ವತ್ ಅವರ ದೇಶ ಭಕ್ತಿಯ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ದೇಶದ ಜನರನ್ನು ಪ್ರೀತಿಸುತ್ತಾರೆ ಎಂದಿದ್ದರು. ಜತೆಗೆ ಬಾಗ್ವತ್ ಅವರು ರಾಷ್ಟ್ರಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಹೊಗಳಿದ್ದರು.
ಇನ್ನು ನಾಗ್ಪುರದ ಆರ್.ಎಸ್.ಎಸ್ ಸಮಾವೇಶಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೆರಳುವುದಾಗಿ ಘೋಷಿಸಿದ್ದಾಗ, ಇದನ್ನು ಷರೀಫ್ ವಿರೋಧಿಸಿದ್ದರು. ಪ್ರಣಬ್ ಮುಖರ್ಜಿ ಅವರು ತಮ್ಮ ಬದುಕಿನುದ್ದಕ್ಕೂ ಕಾಂಗ್ರೆಸ್ ಪಕ್ಷದಲ್ಲಿದ್ದರು. ಜತೆಗೆ ರಾಷ್ಟ್ರಪತಿ ಹುದ್ದೆಗೇರಿದ್ದ ಮುಖರ್ಜಿ ಅವರು ಅಲ್ಲಿಗೆ ತೆರಳುವ ಮುನ್ನ ಸಮಗ್ರವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಹೇಳಿದ್ದರು.ತಮ್ಮ ಬದುಕಿನ ಕೊನೆಯ ಹಂತದಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಹಲವು ಪತ್ರಗಳನ್ನು ಬರೆದು ಮುಜುಗರ ಉಂಟು ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ