ಶಿರಾ : ಕುರಿ,ಮೇಕೆಗಳಲ್ಲಿ ಹೆಚ್ಚುತ್ತಿರುವ ನೀಲಿ ನಾಲಗೆ ರೋಗ..!

ಶಿರಾ:

ವಿಶೇಷ ವರದಿ:ಬರಗೂರು ವಿರೂಪಾಕ್ಷ

    ತಾಲ್ಲೂಕಿನ ಕುರಿಗಾಯಿಗಳ ಆರ್ಥಿಕ ಸಂಕಷ್ಟವನ್ನು ಕಿಂಚಿತ್ತಾದರೂ ಈಡೇರಿಸುತ್ತಿರುವ ಕುರಿಗಳಲ್ಲಿ ಇದೀಗ ನೀಲಿ ನಾಲಗೆ ರೋಗ ಕಾಣ ಬರುತ್ತಿದ್ದು ಇದರಿಂದ ಕುರಿಗಾಯಿಗಳಲ್ಲಿ ಆತಂಕ ಹೆಚ್ಚಾಗಿದೆ.

    ತುಮಕೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕುರಿ ಸಾಕಾಣಿಕೆದಾರರಿರುವುದು ಶಿರಾ ತಾಲ್ಲೂಕಿನಲ್ಲಿ. ಬರದ ದವಡೆಗೆ ಸಿಲುಕಿದ್ದರೂ ಕುರಿ ಸಾಕಾಣಿಕೆಯನ್ನೇ ಮೂಲ ಉದ್ಯೋಗವನ್ನಾಗಿಸಿಕೊಂಡ ಸಾವಿರಾರು ಮಂದಿ ಕುರಿಗಾಯಿಗಳಿಗೆ ಕುರಿ ಸಾಕಾಣಿಕೆಯು ಅವರ ಆರ್ಥಿಕ ಸಂಕಷ್ಟವನ್ನು ಈಡೇರಿಸುತ್ತಿದೆ.

    ಕುರಿಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಸಬಲರಾಗುವುದಷ್ಟೇ ಅಲ್ಲದೆ. ಕುರಿಗಾಯಿಗಳು ಕುರಿ ಸಾಕಾಣಿಕೆಯಿಂದ ಜೀವನದ ಜಟಕಾ ಬಂಡಿಯನ್ನು ಕೊಂಡೊಯ್ಯಲು ಉತ್ತಮ ದಾರಿಯೂ ಇದಾಗಿದೆ. ಕುರಿಗಳ ಮಾಂಸ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಪಡೆಯುತ್ತಿದ್ದು ಕುರಿಗಳ ಉತ್ಪನ್ನದಿಂದಲೂ ಕುರಿಗಾಯಿಗಳು ಆರ್ಥಿಕ ಸದೃಡತೆ ಕಾಣಬಹುದಾಗಿದೆ.

     ಮಳೆ-ಬೆಳೆಯ ವೈಫಲ್ಯವನ್ನೇ ಕಾಣುತ್ತಿರುವ ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕುರಿಗಾಯಿಗಳಿದ್ದು ಕುರಿಗಳಿಗೆ ನಾಟಬಹುದಾದ ರೋಗಗಳಿಂದ ದೂರವಿರಲು ಕುರಿಗಾಯಿಗಳು ಕುರಿಗಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹುತ್ತಾರೆ. ಸಲಹಿದ ಕುರಿಗಳು ಕೊಂಚ ಕೆಮ್ಮಿದರೂ ಪಶು ಆಸ್ಪತ್ರೆಯ ಕದ ತಟ್ಟುತ್ತಾರೆ. ಉತ್ತಮ ವೈದ್ಯರನ್ನು ಕಂಡು ನಾನಾ ರೀತಿಯ ಚಿಕಿತ್ಸೆಗೂ ಮುಂದಾಗುತ್ತಾರೆ.

    ಇಂತಹ ಸಂದಿಗ್ದತೆಯಲ್ಲಿ ಕುರಿಗಾಯಿಗಳಿಗೆ ಆತಂಕದ ವಾತಾವರಣ ಇದೀಗ ಸೃಷ್ಠಿಯಾಗಿದೆ. ತಾಲ್ಲೂಕಿನ ಕೆಲವೆಡೆ ಕುರಿಗಳಿಗೆ ನೀಲಿ ನಾಲಗೆ ರೋಗ ಕಾಣಿಸಿಕೊಂಡು ಕುರಿಗಾಯಿಗಳು ಆತಂಕಗೊಳ್ಳಲು ಕಾರಣವಾಗುತ್ತಿದೆ.ಇದು ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗ ವೈರಸ್‍ನಿಂದ ಉಂಟಾಗುವುದರಿಂದ ಈ ರೋಗಕ್ಕೆ ಯಾವುದೇ ನಿರ್ಧಿಷ್ಟ ಚಕಿತ್ಸೆಯೂ ಇಲ್ಲ .

     ಕ್ಯೂಲಿಕಾಯ್ಡ್ಸ್(ಕುರುಡು ನೊಣ) ಎಂಬ ಕೀಟಗಳಿಂದ ಈ ರೋಗ ಹರಡುತ್ತದೆ. ಒಂದು ವರ್ಷಕ್ಕೆ ಮೇಲ್ಪಟ್ಟ ಕುರಿಗಳಲ್ಲಿ ನೀಲಿ ನಾಲಗೆ ರೋಗ ಕಾಣಿಸಿಕೊಳ್ಳುತ್ತಿದ್ದು ಈಗಾಗಲೇ ತಾಲ್ಲೂಕಿನ ಕೆಲ ಕುರಿಗಳಲ್ಲಿ ಈ ರೋಗದ ಲಕ್ಷಣಗಳು ಕಂಡು ಬಂದಿವೆ ಎನ್ನಲಾಗಿದೆ.

    ಈ ರೋಗವು ಕುರಿಗಳಿಗೆ ಕಾಣಿಸಿಕೊಂಡಲ್ಲಿ ಅಂತಹ ಕುರಿಗಳ ಮಾಂಸ ಮತ್ತು ಉಣ್ಣೆ ಉತ್ಪಾದನೆ ಸಾಕಷ್ಟು ಕ್ಷೀಣಿಸಿಯೇ ಬಿಡುತ್ತದೆ ಎಂಬುದು ಪಶುಪಾಲನಾ ಇಲಾಖೆಯ ಸ್ಪಷ್ಟ ಹೇಳಿಕೆಯೂ ಆಗಿದೆ.ವಿಪರೀತ ಜ್ವರ ಬರುವುದು. ಕುರಿಗಳ ಬಾಯಿ, ಮೂಗಿನ ಪದರ ಕೆಂಪಾಗಿ ಕುರಿಗಳ ತುಟಿ, ನಾಲಗೆ ಮತ್ತು ವಸಡುಗಳು ಊದಿಕೊಂಡ ಲಕ್ಷಣಗಳು ಕಂಡಲ್ಲಿ ಅದು ನೀಲಿ ನಾಲಗೆ ರೋಗ ಎಂಬುದನ್ನು ಪಶು ವೈದ್ಯರೇ ಖಾತರಿಪಡಿಸುತ್ತಾರೆ.

     ತಾಲ್ಲೂಕಿನ ಪಟ್ಟನಾಯಕನಹಳ್ಳಿ, ಬರಗೂರು, ಮದ್ದಕ್ಕನಹಳ್ಳಿಯ ಗೊಲ್ಲರಹಟ್ಟಿಯಲ್ಲಿನ ಕುರಿಗಳಿಗೆ ಈ ರೋಗ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷದ ಹಿಂದೆಯೂ ಇದೇ ನೀಲಿ ನಾಲಗೆ ರೋಗಗವು ಕುರಿ ಮತ್ತು ಮೇಕೆಗಳಲ್ಲಿ ಕಾಣಿಸಿಕೊಂಡಾಗ ಪಶುಪಾಲನಾ ಇಲಾಖೆಯು ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಂಡಿತ್ತು. ಮಳೆ ಬಂದು ನಿಂತ ನೀರಿನಲ್ಲಿ ವೈರಾಣುಗಳು ಕಾಣಿಸಿಕೊಂಡು ಈ ರೋಗ ಹೆಚ್ಚಲು ಅವಕಾಶವಾಗುತ್ತದೆ. ಈ ವರ್ಷವೂ ಕೆಲವೆಡೆ ಮಳೆ ಬಂದು ನೀರು ಜೌಗು ಪ್ರದೇಶಗಳಲ್ಲಿ ನಿಂತ ಪರಿಣಾಮ ಈ ರೋಗದ ವೈರಾಣುಗಳು ಹೆಚ್ಚಾಗಲು ಕಾರಣವಾಗಿದೆ.

     ಕುರಿ ಇಲ್ಲವೇ ಮೇಕೆಗಳ ಬಾಯಿಯಲ್ಲಿ ಜೊಲ್ಲು ಸುರಿಯುವುದು, ಮೂಗಿನಲ್ಲಿ ಹಳದಿ ಮಿಶ್ರಿತ ಗೊಣ್ಣೆ ಕಾಣಿಸಿಕೊಳ್ಳುವುದು, ಕೆಲವೊಮ್ಮೆ ನಾಲಗೆಯು ಹಳದಿ ಬಣ್ಣಕ್ಕೆ ತಿರುಗಿದಲ್ಲಿ ಈ ರೋಗದ ಲಕ್ಷಣ ಸಾಬೀತಾಗುತ್ತದೆ. ಇಂತಹ ಲಕ್ಷಣಗಳು ಕಂಡರೆ ಸಮೀಪದ ಪಶುವೈದ್ಯ ಇಲಾಖೆಗೆ ಕೂಡಲೇ ಕುರಿಗಳನ್ನು ಕರೆದೊಯ್ಯುವುದು ಇಲ್ಲವೇ ವೈದ್ಯರನ್ನೇ ಕುರಿ/ಮೇಕೆಗಳ ಸ್ಥಳವಿರುವ ಕಡೆ ಕರೆಸಿಕೊಳ್ಳುವುದನ್ನು ರೈತರು ಮೊದಲು ಮಾಡಬೇಕಿದೆ.

      ಕುರಿ ಮತ್ತು ಮೇಕೆಗಳಲ್ಲಿ ಕಾಣಿಸಿಕೊಳ್ಳುವ ಈ ರೋಗದ ಬಗ್ಗೆ ಜಿಲ್ಲೆಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ನಾಗಣ್ಣ ಪತ್ರಿಕೆಯೊಮದಿಗೆ ಮಾತನಾಡಿ ಶಿರಾ ಭಾಗದ ಕೆಲವೆಡೆ ಈ ರೋಗದ ಲಕ್ಷಣ ಕಾಣಿಸಿಕೊಂಡ ಬಗ್ಗೆ ಮಾಹಿತಿ ಇದ್ದು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ.

      ಕುರಿಗಳಲ್ಲಿ ಈ ರೋಗದ ಲಕ್ಷಣವು ಕುರಿಗಳಲ್ಲಿ ಕಂಡು ಬಂದ ಕೂಡಲೇ ಅಂತಹ ಕುರಿಯ ಮೂಗು, ವಸಡು ಹಾಗೂ ಬಾಯಿಯನ್ನು ಅಡುಗೆ ಸೋಡದಿಂದ ಶುಚಿಗೊಳಿಸಬೇಕು. ಅಂತಹ ಕುರಿಗಳ ಹಾಗೂ ರಾಸುಗಳ ಬಾಯಿಗೆ ಬೋರಾಕ್ಸ್ ಪುಡಿ ಮಿಶ್ರಿತ ಗ್ಲಿಸರಿನ್ ಅಥವ ಜೇನು ತುಪ್ಪ ಸವರಬೇಕು. ರೋಗಗ್ರಸ್ಥ ರಾಸುಗಳನ್ನು ಕಡ್ಡಾಯವಾಗಿ ಬೇರ್ಪಡಿಸಿ ಆರೈಕೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

      ಕ್ಯೂಲಿಕಾಯ್ಡ್ಸ್(ಕುರುಡು ನೊಣ) ಎಂಬ ಸೊಳ್ಳೆ ಕುರಿಗಳ ರಕ್ಷವನ್ನು ಹೀರುವುದರಿಂದ ಬೆಳಿಗ್ಗೆ ಮತ್ತು ಸಂಜೆ ಬೇವಿನ ಚೆಕ್ಕೆಯ ಹೊಗೆಯನ್ನು ಕುರಿಹಟ್ಟಿಗಳಲ್ಲಿ ಹಾಕಿ ಅಂತಹ ಕೀಟಗಳು ಬಾರದಂತೆ ಎಚ್ಚರಿಕೆ ವಹಿಸಬೇಕಲ್ಲದೆ ಯಾವುದೇ ಕಾರಣಕ್ಕೂ ರೋಗಗ್ರಸ್ಥ ಕುರಿಯನ್ನು ಹೊರಗೆ ಮೇವಿಗೆ ಕರೆದೊಯ್ಯದೇ ಹಟ್ಟಿಯಲ್ಲಿಯೇ ಮೆತ್ತನೆಯ ಆಹಾರ ನೀಡಬೇಕು ಎಂದು ತಿಳಿಸಿರುವ ಡಾ.ನಾಗಣ್ಣ ಕೂಡಲೇ ಕುರಿಗಾಯಿಗಳು ಸಮೀಪದ ಪಶು ವೈದ್ಯರ ಸಲಹೆ ಪಡೆಯುವಂತೆಯೂ ತಿಳಿಸಿದ್ದಾರೆ.

      ಒಟ್ಟಾರೆ ಶಿರಾ ಭಾಗದ ಗೌಡಗೆರೆ ಹೋಬಳಿ, ಹುಲಿಕುಂಟೆ ಹೋಬಳಿಯ ವಿವಿದೆಡೆ ನೀಲಿ ಲಾಲಿಗೆ ರೋಗವು ಕೆಲವು ರಾಸುಗಳಿಗೆ ಕಾಣಿಸಿಕೊಳ್ಳತೊಡಗಿದ್ದು ಪಶುಪಾಲನಾ ಇಲಾಖೆಯು ರೈತರಿಗೆ ಹಾಗೂ ಕುರಿಗಾಯಿಗಳಿಗೆ ಕೂಡಲೇ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕಿದೆ.

      ಶಿರಾ ತಾಲ್ಲೂಕಿನ ಪಶುಪಾಲನಾ ಇಲಾಖೆಯು ಈ ನಿಟ್ಟಿನಲ್ಲಿ ವ್ಯವಸ್ಥಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ರೋಗವು ಹೆಚ್ಚು ಉಲ್ಪಣಗೊಳ್ಳುವ ಸಾದ್ಯತೆಯೂ ಇದೆ. ಕಳೆದ ಒಂದು ವರ್ಷದ ಹಿಂದೆ ಪಶುಪಾಲನಾ ಇಲಾಖೆಯು ಮೇಲ್ದರ್ಜೆಗೇರಿದ್ದು ವಿವಿಧ ರೀತಿಯ ಹೆಚ್ಚಿನ ಸೌಲಭ್ಯ ಹಾಗೂ ಮಾಹಿತಿಗಳು ಈಗ ಲಭ್ಯವಿವೆ. ಇಂತಹ ಸಂದರ್ಬದಲ್ಲಿ ಸದರಿ ಇಲಾಖೆ ಕೈಚೆಲ್ಲಿ ಕೂತರೆ ರೈತರು ಹಾಗೂ ಕುರಿಗಾಯಿಗಳ ಸ್ಥಿತಿಯೂ ಚಿಂತಾಜನಕವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link