ಹಾನಗಲ್ಲ :
ಕೇಂದ್ರ ಸರಕಾರದ “ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ” ಯೋಜನೆಯಡಿ ದೇಶದ ಸಣ್ಣ ಅತಿಸಣ್ಣ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ ನೀಡಲಾಗುತ್ತಿದ್ದು, ದೇಶದ 12 ಕೋಟಿ ರೈತರು ಇದರ ಲಾಭ ಪಡೆಯಲಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.
ಮಂಗಳವಾರ ಹಾನಗಲ್ಲಿನಲ್ಲಿ ಸುದ್ಧಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸರ್ವೆ ಜನಾಃ ಸುಖಿನೋಭವಂತು ಎಂಬ ತತ್ವದಡಿ ದೇಶದ ಎಲ್ಲ ಪ್ರಜೆಗಳು ನೆಮ್ಮದಿಯಿಂದ ಬದುಕಲು ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ವಿಶೇಷವಾಗಿ ರೈತ ಸಮುದಾಯವನ್ನು ಅತಂಕದಿಂದ ದೂರ ಮಾಡಲು ಸಹಾಯ ನೀಡುತ್ತ ಆರ್ಥಿಕವಾಗಿ ಸಬಲಗೊಳಿಸುತ್ತಿದೆ.
“ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ” ಯೋಜನೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ 3 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಹಾವೇರಿ ಜಿಲ್ಲೆಯ 1.68 ಲಕ್ಷ ಹಾಗೂ ಹಾನಗಲ್ಲ ತಾಲೂಕಿನ 22 ಸಾವಿರ ರೈತರು ಇದರ ಲಾಭ ಪಡೆಯುವರು. ಇದು ಪ್ರತಿ ವರ್ಷ ರೈತರಿಗೆ ದೊರೆಯುವ ಸಹಾಯ ಧನವಾಗಿದೆ ಎಂದರು.
ದೇಶದ 21 ಕೋಟಿ ಜನತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಒಂದಿಲ್ಲೊಂದು ಯೋಜನೆ ಲಾಭ ಪಡೆದಿದ್ದಾರೆ. 8 ಲಕ್ಷ ಕೋಟಿಗೂ ಅಧಿಕ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ.
ಪಡಿತರ ಚೀಟಿ ಅರ್ಹರಲ್ಲದ ಫಲಾನುಭವಿಗಳ ದುರುಪಯೋಗ ಹಾಗೂ ಅರ್ಹರಲ್ಲದವರು ಅಡುಗೆ ಅನೀಲ ರಿಯಾಯತಿ ಪಡೆಯುತ್ತಿರುವುದನ್ನು ಪರಿಶೀಲಿಸಿ ತಡೆ ಹಿಡಿಯುವುದರ ಮೂಲಕ ಕೇಂದ್ರ ಸರಕಾರ 80 ಸಾವಿರ ಕೋಟಿ ಹಣದ ಅಪವ್ಯಯವನ್ನು ತಡೆದಿದೆ ಎಂದ ಅವರು, ಇನ್ನು ಮುಂದೆ ಬೆಳೆ ವಿಮೆ ಕಟ್ಟುವ ದಿನಾಂಕವನ್ನು ರೈತರಿಗೆ ನಿಗದಿ ಪಡಿಸುವಂತೆ, ಸರಕಾರಗಳು ಬೆಳೆವಿಮೆ ಪರಿಹಾರವನ್ನು ನೀಡುವ ದಿನಾಂಕವನ್ನು ಕೂಡ ಮೊದಲೇ ನಿಗದಿಪಡಿಸಿ ಸಕಾಲಿಕವಾಗಿ ನೀಡಬೇಕು ಎಂಬ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. ತಡವಾದರೆ ಸರಕಾರ ಬೆಳೆವಿಮಾ ಹಣಕ್ಕೆ ಬಡ್ಡಿ ಸಮೇತ ನೀಡುವ ಯೋಜನೆ ಜಾರಿಯಾಗಿದೆ ಎಂದರು.
ಶಾಸಕ ಸಿ.ಎಂ.ಉದಾಸಿ ಮಾತನಾಡಿ, “ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ” ಯೋಜನೆ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ನೀಡುವ ಪ್ರಕ್ರಿಯೆ ಆರಂಭವಾಗಿದೆ ಫೆ.25 ರೊಳಗಾಗಿ ಎಲ್ಲ ಅರ್ಹ ರೈತರು ಮಾಹಿತಿ ನೀಡಿ ಕೇಂದ್ರ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಬಂದು ಮಾಹಿತಿ ಪಡೆಯುತ್ತಾರೆ. ಒಂದೆರಡು ದಿನಗಳಲ್ಲಿ ಈ ಅಧಿಕಾರಿಗಳು ನಿಮ್ಮಿಂದ ಮಾಹಿತಿ ಪಡೆಯದಿದ್ದರೆ ಖುದ್ದಾಗಿ ಈ ಕಛೇರಿಗೆ ಹೋಗಿ ಮಾಹಿತಿ ನೀಡಿ ಫಲಾನುಭವಿಗಳಾಗಬೇಕು ಎಂದರು.