ಬ್ಯಾಡಗಿ:
ಶಾಲಾ ಪಠ್ಯಪುಸ್ತಕಗಳಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ, ಇತಿಹಾಸದ ಬಗ್ಗೆ ಹಾಗೂ ಅವರ ವಚನಗಳ ಮೇಲೆ ಬೆಳಕು ಚೆಲ್ಲುವಂತ ಕಾರ್ಯವನ್ನು ಸರಕಾರ ಮಾಡುವಂತೆ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಆಗ್ರಹಿಸಿದರು.
ಅವರು ಮಂಗಳವಾರ ಸ್ಥಳೀಯ ತಹಶೀಲದಾರರ ಕಾರ್ಯಾಲಯದ ಸಭಾಂಗಣದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಶರಣ ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲಿಸುತ್ತ ತಮ್ಮ ಕಾಯಕವನ್ನು ಮಾಡುತ್ತಿದ್ದರು. ಶಿವಶರಣ ಹಡಪದ ಅಪ್ಪಣ್ಣನವರು ಸಮಾಜ ಸುಧಾರಣೆಗಾಗಿ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡ ಮಹಾ ಮಾನವಾತವಾದಿಯಾಗಿದ್ದರು.
ಅವರು ಸಮಾಜದಲ್ಲಿ ಸರ್ವ ಜನಾಂಗಗಳನ್ನು ತಮ್ಮೊಟ್ಟಿಗೆ ಕರೆದುಕೊಂಡು ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಜನರಲ್ಲಿ ಇತ್ತೀಚಿಗೆ ಧಾರ್ಮಿಕ ಭಾವನೆಗಳು ಹಾಗೂ ಮಾನವೀಯ ಮೌಲ್ಯಗಳು ಇನ್ನಿಲ್ಲದಂತಾಗಿದೆ. ಸ್ವಾರ್ಥಕ್ಕಾಗಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ತಾವು ಬದುಕಿರುವ ಸಮಾಜಕ್ಕೆ ಏನು ಕೊಡಬಲ್ಲರು ಎಂಬುದನ್ನು ತಿಳಿಯುವುದು ಕಷ್ಟವಾಗಿದೆ. ಸಮಾಜದಲ್ಲಿ ಹತ್ತು ಹಲವು ಸಂಘರ್ಷಗಳು ನಡೆಯುತ್ತಿದ್ದು ಧರ್ಮ ಪರಿಪಾಲನೆಯಿಂದ ಮಾತ್ರ ಜನರಲ್ಲಿ ಸಾಮರಸ್ಯ ಮೂಡಲು ಸಾಧ್ಯವೆಂದರು.
ಮಾಜಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ ಸರ್ವಧರ್ಮಗಳ ಗುರಿಯೂ ಒಂದೇ ಆಗಿದ್ದು ಅದು ಕೇವಲ ‘ಮಾನವನ ಕಲ್ಯಾಣ’ವಾಗಿದೆ, ಇಂತಹ ಸಾರ್ವತ್ರಿಕ ಸತ್ಯವನ್ನು 12 ಶತಮಾನಗಳ ಹಿಂದೆಯೇ ಹಡಪದ ಅಪ್ಪಣ್ಣನವರು ಸಾರಿದ್ದರು. ಹಡಪದ ಸಮಾಜದ ಪ್ರತಿಯೊಬ್ಬರೂ ಶಿವಶರಣ ಹಡಪದ ಅಪ್ಪಣ್ಣನವರ ಪೋಟೋಗಳನ್ನು ತಮ್ಮ ಮನೆಗಳಲ್ಲಿ ಪೂಜಿಸುವಂತ ಕಾರ್ಯವನ್ನು ಮಾಡಬೇಕು.
ಅಂದಾಗ ಮಾತ್ರ ಅವರ ಸಮಾಜದ ಗುರುಗಳನ್ನು ಗೌರವಿಸಿದಂತಾಗುತ್ತದೆ. ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರು ಸಮಾಜದಲ್ಲಿ ಸಾಮರಸ್ಯದ ಬದುಕು ನಡೆಸಿದವರು. ಧರ್ಮದ ತಿರುಳನ್ನು ಜನತೆಗೆ ತಿಳಿಸಲು ಅಂದು ಬಹಳ ಪ್ರಯತ್ನ ಮಾಡಿದವರು. ಸಮಾಜದಲ್ಲಿ ವ್ಯಕ್ತಿ ಎಷ್ಟೇ ಅತ್ಯುನ್ನತ ಶಿಕ್ಷಣ ಹಾಗೂ ಉತ್ತಮ ಸ್ಥಾನವನ್ನು ಹೊಂದಿದ್ದರೂ ಸಹ ವ್ಯಕ್ತಿಯೂ ಸಹ ಧರ್ಮ ದೀಕ್ಷೆಯಿಲ್ಲದೇ ಜೀವನದಲ್ಲಿ ಶಾಂತಿ ನೆಮ್ಮದಿ ಹಾಗೂ ಮುಕ್ತಿ ಪಡೆಯಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಬೆಳೆಸುವಂತಾ ಗಬೇಕೆಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ವಿಜಯ ಮಲ್ಲೂರ ಮಾತನಾಡಿ ಜನತೆ ನಿತ್ಯವೂ ಒತ್ತಡದ ಬದುಕು ನಡೆಸುತ್ತಿರುವ ಇಂದಿನ ಯುವಪೀಳಿಗೆಯಲ್ಲಿ ಅಂಧಶ್ರದ್ಧೆ ಮಾತ್ರ ಬೆಳೆಯುತ್ತಿದ್ದು ಸನಾತನ ಧರ್ಮ ಹಾಗೂ ಆದರ್ಶ ಸಂಸ್ಕೃತಿಯನ್ನು ಪರಿಪಾಲನೆ ಮಾಡುತ್ತಿಲ್ಲ, ಇದರಿಂದಾಗಿ ಮಾನಸಿಕ ತೊಳ ಲಾಟದಲ್ಲಿರುವ ಯುವಕರು ಸತ್ಯಶುದ್ಧ ಧರ್ಮ ಪರಿಪಾಲನೆಯಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯವೆಂದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಮುಪ್ಪಿನೇಶ್ವರ ವಿರಕ್ತಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರೂ ಅವರ ಧರ್ಮದ ಬಗ್ಗೆ ಹಾಗೂ ಅವರ ಸಮಾಜದ ಗುರುಗಳ ಬಗ್ಗೆ ಅಭಿಮಾನವುಳ್ಳವರಾಗಿರಬೇಕು. ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜದವರು ತಾವು ಮಾಡುವ ಕಾಯಕವನ್ನು ಗೌರವಿಸಬೇಕು. ಆದರೇ ಇತೀಚೆಗೆ ಶಿವಶರಣ ಹಡಪದ ಅಪ್ಪಣ್ಣ ಸಮಾಜದವರು ತಮ್ಮ ಕಾಯಕದಲ್ಲಿ ಕೀಳರಿಮೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಇದು ಸಲ್ಲದು ತಮ್ಮ ಕಾಯಕದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕಲ್ಲದೇ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ಬೀರೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ವೇದಿಕೆಯವರೆಗೆ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೇರವಣಿಗೆಯು ಜರುಗಿತು. ಕಾರ್ಯಕ್ರಮದಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಮೊಟೆಬೆನ್ನೂರ ಗ್ರಾ.ಪಂ.ಅಧ್ಯಕ್ಷೆ ನೀಲಮ್ಮ ಬ್ಯಾಟೆಪ್ಪನವರ, ಸದಸ್ಯೆ ರೇಣವ್ವ ಕಟ್ಟಿಮನಿ, ಸೋಮಣ್ಣ ಕರ್ನೂಲ, ಸಂಘದ ಅಧ್ಯಕ್ಷ ದುಂಡೆಪ್ಪ ಕಾಯಕದ, ಬಸಲಿಂಗಪ್ಪ ಕಾಯಕದ. ಶಿವಾನಂದ ಕಟ್ಟಿಮನಿ, ಫಕ್ಕೀರಪ್ಪ ಕಟ್ಟಿಮನಿ, ಹಾಲೇಶ ಕಾಯಕದ, ರವೀಂದ್ರ ಪಟ್ಟಣಶೆಟ್ಟಿ, ಫಕ್ಕೀರಮ್ಮ ಚಲವಾದಿ, ಧನಂಜಯಕುಮಾರ. ಆರ್.ಎಂ.ಹುಬ್ಬಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








