ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ

ತುಮಕೂರು
     ಅಂದುಕೊಂಡಂತೆ ಎಲ್ಲವೂ ಮುಗಿದಿದ್ದರೆ ಈ ವೇಳೆಗಾಗಲೆ ನಗರದಲ್ಲಿ ಹಲವಾರು ಸ್ಮಾರ್ಟ್‍ಸಿಟಿ ಕಾಮಗಾರಿಗಳು ಮುಗಿದು ಹೋಗಬೇಕಿತ್ತು. ಲಾಕ್‍ಡೌನ್ ಪರಿಣಾಮದಿಂದಾಗಿ ಸುಮಾರು ಒಂದೂವರೆ ತಿಂಗಳ ಕಾಲ ಎಲ್ಲವೂ ಸ್ಥಗಿತಗೊಂಡು ಇತ್ತೀಚೆಗಷ್ಟೇ ಕಾಮಗಾರಿಗಳು ಆರಂಭವಾಗಿವೆ. ಅದೂ ನಿಧಾನ ಗತಿಯಲ್ಲಿ.
     ಲಾಕ್‍ಡೌನ್ ಶುರುವಾಗಿ ಕೂಲಿ ಕಳೆದುಕೊಂಡ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿರುವ ಕಾರಣ, ಬಾಕಿ ಉಳಿದಿರುವ ನಗರದ ವಿವಿಧ ಕಾಮಗಾರಿಗಳನ್ನು ಆರಂಭಿಸಲು ಕಾರ್ಮಿಕರ ಕೊರತೆ ಎದುರಾಗಿದೆ. ಕೆಲವೆಡೆ ಸ್ಮಾರ್ಟ್‍ಸಿಟಿ ಯೋಜನೆಗಳ ಗುತ್ತಿಗೆದಾರರು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿ.ಎಚ್. ರಸ್ತೆ, ಅಶೋಕ ರಸ್ತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಅಭಿವೃದ್ಧಿ ಕೆಲಸಗಳನ್ನು ತುರ್ತಾಗಿ ಮುಗಿಸಬೇಕಾಗಿರುವುದರಿಂದ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ.
     ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು 3.63 ಕೋಟಿ ರೂ.ಗಳ ವೆಚ್ಚದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಕಾಮಗಾರಿಯನ್ನು 5-12-2018ರಲ್ಲಿ ಆರಂಭಿಸಿ 12 ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಒಂದೂವರೆ  ವರ್ಷವಾದರೂ ಮುಗಿದಿಲ್ಲ. ಫುಟ್‍ಪಾತ್ ಹಾಗೂ ವಾಹನ ಪಾರ್ಕಿಂಗ್‍ನ ಟೈಲ್ಸ್ ಹಾಕುವ ಬಾಕಿ ಕೆಲಸ ಆರಂಭವಾಗಿದೆ. ಇದಾಗಿ ರಸ್ತೆಗೆ ಡಾಂಬರು ಹಾಕಿದರೆ, ರಸ್ತೆ ಸಂಚಾರಕ್ಕೆ ಮುಕ್ತವಾಗುತ್ತದೆ. ಈ ಕೆಲಸ ಇನ್ನೆರಡು ವಾರಗಳಲ್ಲಿ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ.
     ಶ್ರೀನಿವಾಸ ಕನ್‍ಸ್ಟ್ರಕ್ಷನ್ಸ್‍ರವರು ಈ ರಸ್ತೆ ಕಾಮಗಾರಿ ವಹಿಸಿಕೊಂಡಿದ್ದಾರೆ. ಇದರ ಡಾಂಬರೀಕರಣವನ್ನು ಗುತ್ತಿಗೆದಾರ ಸಿ.ಆರ್. ಹರೀಶ್‍ರವರು ಮಾಡಲಿದ್ದಾರೆ. ಕಾರ್ಮಿಕರ ಕೊರತೆ ಕಾರಣದಿಂದಾಗಿ ಡಾಂಬರೀಕರಣ ವಿಳಂಬವಾಗಿದೆ. ಮುಂದಿನ ಸೋಮವಾರ, ಇಲ್ಲವೆ ಮಂಗಳವಾರ ಆರಂಭಿಸಿ ಎರಡು ದಿನದಲ್ಲಿ ಮುಗಿಸುವುದಾಗಿ ಸಿ.ಆರ್.ಹರೀಶ್ ಹೇಳಿದರು.
       ಪ್ರಮುಖ ವಾಣಿಜ್ಯ ಪ್ರದೇಶವಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ವಾಹನ ಸಾಂದ್ರತೆ ಹೆಚ್ಚು. ಇದಕ್ಕೆ ಪೂರಕವಾಗಿ ರಸ್ತೆ ವಿಸ್ತಾರಗೊಂಡಿಲ್ಲ. ಬಿ.ಎಚ್. ರಸ್ತೆಯಿಂದ ಗ್ರಾಮಾಂತರ ಪೊಲೀಸ್ ಸ್ಟೇಷನ್‍ವರೆಗೆ 0.53 ಕಿ.ಮೀ. ಉದ್ದದ ಈ ರಸ್ತೆಯನ್ನು 7.4 ಮೀಟರ್ ಅಗಲದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ವಾಹನ ದಟ್ಟಣೆ ಹೆಚ್ಚಾದರೆ, ಇಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತದೆ. ಇದು ವಾಣಿಜ್ಯ ಪ್ರದೇಶವಾಗಿರುವುದರಿಂದ ವಾಹನಗಳ ಪಾರ್ಕಿಂಗ್‍ಗೆ ಆದ್ಯತೆ ನೀಡಲಾಗಿದೆ. ರಸ್ತೆಯ ಎರಡೂ ಬದಿ, ಫುಟ್‍ಪಾತ್ ಜೊತೆಗೆ ವಾಹನ ಪಾರ್ಕಿಂಗ್‍ಗೆ ಸ್ಥಳಾವಕಾಶ ಮಾಡಲಾಗಿದೆ.
       ಎರಡು ಬದಿಯಲ್ಲಿ ಡಕ್ಟ್ ನಿರ್ಮಾಣ ಬಹುತೇಕ ಮುಗಿದಿದೆ, ಚಿಲುಮೆ ಸಮುದಾಯ ಭವನದ ಎದುರು ಬಾಕಿ ಇದೆ. ಉಳಿದಂತೆ ಬೀದಿ ದೀಪ ಅಳವಡಿಕೆ, ಗಿಡ ನೆಟ್ಟು ಹಸುರೀಕರಣ ಕೆಲಸಗಳು ಆಗಬೇಕಾಗಿದೆ.ಕಾರ್ಯಪ್ಪ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಈ ರಸ್ತೆಯ ಅಂಗಡಿ ಮಾಲೀಕರು ಈ ಹಿಂದೆಯೇ ಅಪಸ್ವರ ಎತ್ತಿದ್ದರು. ಸಮರ್ಪಕವಾಗಿ ಕಾಮಗಾರಿ ನಡೆಯುತ್ತಿಲ್ಲ, ನಿಗದಿತ ಅವಧಿಯೊಳಗೆ ಮುಗಿಸುವ ಪ್ರಕ್ರಿಯೆಗಳೆ ಗೋಚರಿಸುತ್ತಿಲ್ಲ ಎಂದಿದ್ದರು.
 
       ಅವರ ಮಾತುಗಳು ನಿಜ ಎನ್ನಿಸುತ್ತಿವೆ. ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎರಡು ವರ್ಷಗಳನ್ನು ತೆಗೆದುಕೊಳ್ಳುವ ಹಂತಕ್ಕೆ ಬಂದಿದೆ ಎಂದರೆ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಕಾರ್ಯವೈಖರಿ ಹೇಗಿದೆ ಎಂಬುದು ಅರ್ಥವಾಗುತ್ತದೆ. ಇದೀಗ ತಾನೆ ಜನ ಲಾಕ್‍ಡೌನ್‍ನಿಂದ ಹೊರಬರುತ್ತಿದ್ದಾರೆ. ಇಷ್ಟು ದಿನಗಳ ಅವಧಿಯಲ್ಲಿ ಕೊರೊನಾ ಒಂದನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಗೌಣವಾಗಿದ್ದವು. ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೇಳುವವರು ಮತ್ತು ಪ್ರಶ್ನೆ ಮಾಡುವವರೆ ಇಲ್ಲವಾಗಿದ್ದಾರೆ.
      ಲಾಕ್‍ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತಿದ್ದಂತೆಯೇ ಕಾಮಗಾರಿಗಳನ್ನು ಆರಂಭಿಸಲು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಸೂಚಿಸಿದ್ದರು. ಕಾಮಗಾರಿಗಳನ್ನು ಪುನರಾರಂಭಿಸುವಂತೆ ಕಂಪನಿಯು ಗುತ್ತಿಗೆದಾರರಿಗೆ ನೋಟೀಸ್ ನೀಡಿದ ಪರಿಣಾಮ ಆರಂಭಿಸಲಾಗಿದೆಯಾದರೂ ಆಮೆ ಗತಿಯಲ್ಲಿ ನಡೆಯುತ್ತಿವೆ. 
      ಒಂದು ಕಡೆ ಕಾರ್ಮಿಕರ ಕೊರತೆ. ಮತ್ತೊಂದು ಕಡೆ ಕೊರೊನಾ ಭಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಮಗಾರಿಗಳು ಪುನರರಾಂಭವಾಗಿವೆ. ಆದರೆ ಇದನ್ನೆ ನೆಪ ಮಾಡಿಕೊಂಡು ಯೋಜನೆ ಅವೈಜ್ಞಾನಿಕ ಮತ್ತು ಅಸಮರ್ಪಕತೆಗೆ ದಾರಿ ಮಾಡಿಕೊಡದಿರಲಿ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ನಿಗಾ ವಹಿಸುವ ಅಗತ್ಯವಿದೆ. ಇಲ್ಲದೆ ಹೋದರೆ ಎಲ್ಲರೂ ಮೌನವಾಗಿರುವಾಗ ಈ ಕಾಮಗಾರಿಗಳು ಬೇಕೆಂದ ಹಾಗೆ ಪೂರ್ಣಗೊಂಡರೆ ಆ ನಂತರದ ದಿನಗಳಲ್ಲಿ ಯಾರೂ ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap