ಸಿದ್ಧಲಿಂಗೇಶ್ವರಸ್ವಾಮಿಯ ವೈಭವದ ರಥೋತ್ಸವ

ತುಮಕೂರು

       ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಬಣೆಯಿಂದ ನೆರವೇರಿತು. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ರಥೋತ್ಸವ ಇದಾಗಿದ್ದು, ಮಧ್ಯಾಹ್ನ 12.10 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಂಪ್ರದಾಯದಂತೆ ರಥದ ಬಲಭಾಗದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

        ರಥೋತ್ಸವಕ್ಕೂ ಮುನ್ನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮೂರ್ತಿಯನ್ನು ಡಾ. ಶಿಮಕುಮಾರಸ್ವಾಮೀಜಿಗಳ ಗದ್ದುಗೆ ಬಳಿಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ನಂತರ ರಥದ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ನಂತರ ಸಿದ್ದಲಿಂಗಸ್ವಾಮೀಜಿಯವರು ಚಾಲನೆ ನೀಡುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸುಡು ಬಿಸಿಲನ್ನೂ ಲೆಕ್ಕಿಸದೆ ಭಕ್ತರು ರಥ ಎಳೆದರು. ರಥದ ಮೇಲೆ ದವನ ಸಿಕ್ಕಿಸಿದ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

        ಈ ವೇಳೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಅಮೂಲ್ಯ ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು. ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕೃತವಾದ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.

         ರಥ ಸಾಗಿದ ಮಾರ್ಗದುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಣೀಯ ಪ್ರದರ್ಶನ ನೀಡಿದವು.ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳು ಪಾನಕ, ನೀರು, ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಿ ಬಿಸಿಲ ಬೇಗೆಯಲ್ಲಿ ಭಕ್ತರ ಒಡಲು ತಂಪು ಮಾಡಿದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link