ಶಾಸಕಾಂಗ ಸಭೆಗೂ ಮುನ್ನ ಡಿಕೆಶಿ ಸಿದ್ದು ರಹಸ್ಯ ಚರ್ಚೆ..!

ಬೆಂಗಳೂರು

    ಕೆಪಿಸಿಸಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಯ್ಕೆಯಾಗುವುದು ಖಚಿತವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಶಾಸಕಾಂಗ ಸಭೆಗೂ ಮುನ್ನಾ ಡಿ.ಕೆ.ಶಿವಕುಮಾರ್ ಜೊತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ.

     ಡಿ.ಕೆ.ಶಿವಕುಮಾರ್ ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್‍ನ ಮೂಲಗಳ ಪ್ರಕಾರ ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಆದರೆ ಈ ಕುರಿತು ಯಾವಾಗ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂಬುದು ಖಚಿತವಾಗಿಲ್ಲ.

     ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಕಾರ್ಯಾಧ್ಯಕ್ಷರ ನೇಮಕ ಮತ್ತು ಸಮನ್ವಯ ಸಮಿತಿ ಕುರಿತು ಹೈಕಮಾಂಡ್ ಈವರೆಗೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ದೆಹಲಿಯಲ್ಲಿನ ಬೆಳವಣಿಗೆಗಳ ಮಾಹಿತಿ ಪಡೆದ ಸಿದ್ದರಾಮಯ್ಯ ಅವರು ಇಂದು ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕ ಚರ್ಚೆಗೆ ಆಹ್ವಾನಿಸಿದ್ದಾರೆ.

     ನಾಳೆಯಿಂದ ಆರಂಭವಾಗುವ ವಿಧಾನಮಂಡಲದಲ್ಲಿ ಚರ್ಚೆ ಮಾಡಬೇಕಿರುವ ವಿಷಯಗಳ ಕುರಿತು ಚರ್ಚೆ ನಡೆಸಲು ಸಂಜೆ ಖಾಸಗಿ ಹೊಟೇಲ್‍ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಆ ಸಭೆಗೂ ಮುನ್ನಾ ಚರ್ಚಿಸಲು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.ಇಂದು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ.

   ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ತಪ್ಪಿಸಬೇಕು, ಸಿದ್ದರಾಮಯ್ಯ ಅವರ ಅಧಿಕಾರವನ್ನು ಕಸಿಯಬೇಕು ಎಂದು ಕಾಂಗ್ರೆಸ್‍ನ ಹಿರಿಯ ನಾಯಕರು ಹರ ಸಾಹಸ ನಡೆಸಿದ್ದರು. ಅದಕ್ಕೆ ಹೈಕಮಾಂಡ್ ಮನ್ನಣೆ ನೀಡಿದಂತೆ ಕಾಣುತ್ತಿಲ್ಲ. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕೊನೆಯ ಕ್ಷಣದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

Recent Articles

spot_img

Related Stories

Share via
Copy link