ಬೆಂಗಳೂರು:
ಮುಂಬರುವ ಲೋಕಸಭೆ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಸತ್ವ ಪರೀಕ್ಷೆಯಾಗಿದೆ.
ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದಾರಮಯ್ಯ ಅವರಿಗೆ ವಹಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹೈಕಮಾಂಡ್ ನೇಮಿಸಿತ್ತು. ಬಳಿಕ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಅವರಿಗೆ ಮುಕ್ತ ಅವಕಾಶ ನೀಡಿತ್ತು.
ಅಹಿಂದ ನಾಯಕನೆಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಪಡೆದುಕೊಳ್ಳಲು ಒಕ್ಕಲಿಗ ಸಮುದಾಯದ ಮನ ವೊಲಿಸಬೇಕಾಗಿದೆ. ಒಕ್ಕಲಿಗರ ಮತಗಳನ್ನು ಕಾಂಗ್ರೆಸ್ ಪರ ಪಡೆಯಬೇಕೆಂದರೇ ಸಿದ್ದರಾಮಯ್ಯ ಅವರು ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒಟ್ಟಿಗೆ ಕರೆತಂದು ಒಗ್ಗಟ್ಟಿನ ಮಂತ್ರ ಜಪಿಸಬೇಕಾಗಿದೆ.
ಕಾಂಗ್ರೆಸ್ ನ ಹಾಗೂ ಜೆಡಿಎಸ್ ನ ಕೆಲವು ಉನ್ನತ ಮಟ್ಟದ ನಾಯಕರಲ್ಲಿ ಒಗ್ಗಟ್ಟಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಅದೇ ಹಳೇಯ ದ್ವೇಷ, ವೈಷಮ್ಯ ಮುಂದುವರಿದಿದೆ. ಕೆಲವು ಕ್ಷೇತ್ರಗಳಲ್ಲಿರುವ ಈ ವೈರತ್ವ ಸಮ್ಮಿಶ್ರ ಅಭ್ಯರ್ಥಿಗಳ ಗೆಲುವಿಗೆ ಮಾರಕವಾಗಬಹುದು.
ಕಾಂಗ್ರೆಸ್ ನ ನಾಯಕರಾದ ದಿನೇಶ್ ಗುಂಡೂರಾವ್, ಜಿ ಪರಮೇಶ್ವರ್, ಮತ್ತು ಸಿದ್ದರಾಮಯ್ಯ ಒಗ್ಗಟ್ಟಾಗಿ ಲೋಕಸಭೆ ಚುನಾವಣಾ ಪ್ರಚಾರ ಮಾಡಬೇಕಿದೆ, ಮೂಲಗಳ ಪ್ರಕಾರ ಇತ್ತೀಚೆಗೆ ಒಕ್ಕಲಿಗ ಸಮುದಾಯದ ಮುಖಂಡರು ಸಭೆ ಸೇರಿ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಗೆಲ್ಲಿಸಲು ಚರ್ಚೆ ನಡೆಸಿದ್ದಾರೆ, ಒಂದು ವೇಳೆ ಜೆಡಿಎಸ್ ಒಕ್ಕಲಿಗ ಮತಗಳನ್ನು ವರ್ಗಾಯಿಸಲು ವಿಫಲವಾದರೇ ಕಾಂಗ್ರೆಸ್ ಗೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಸಿದ್ದರಾಮಯ್ಯ ದೇವೇಗೌಡ ಹಾಗೂ ಕುಮಾರ ಸ್ವಾಮಿ ಅವರ ಜೊತೆ ಚರ್ಚಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಕ್ಕಲಿಗ ಸಮುದಾಯ ತಮ್ಮ ಪಕ್ಷಕ್ಕೆ ಬೆಂಬಲನೀಡುವಂತೆ ಅವರ ಮನವೊಲಿಸಬೇಕೆಂದು ಹಲವು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಹಲವು ಪ್ರಬಲ ಸಮುದಾಯಗಳು ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತಿದ್ದವು.
ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸ ಬೇಕಾಯಿತು,. ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಕುಮಾರಸ್ವಾಮಿಗೆ ಬೆಂಬಲ ನೀಡಿತು. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಲು ಇದೀಗ ಅಗತ್ಯ ಕಾರ್ಯತಂತ್ರ ರೂಪುಗೊಳ್ಳಬೇಕಾಗಿದೆ.
ಜಾತಿ ರಾಜಕೀಯವನ್ನು ಜೀವಂತವಾಗಿಸಿಕೊಂಡಿರುವ ಕೆಲವರು ಅದರ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ವಿಭಜಿಸಲು ಮುಂದಾಗಿದ್ದಾರೆ, ಇದರ ಲಾಭ ಬಿಜೆಪಿಗೆ ಸಿಗಲಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿ.ಎಚ್ ವಿಜಯ್ ಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುರಿ ಒಂದೇ, ಅದು ಬಿಜೆಪಿ ಸೋಲಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.ಆದರೆ ಸಿದ್ದರಾಮಯ್ಯ ಅವರಿಗೆ ವಕ್ಕಲಿಗ ಮತ್ತು ಲಿಂಗಾಯತ ಮತಗಳನ್ನು ಕ್ರೋಢೀಕರಿಸುವ ಸವಾಲು ಎದುರಾಗಿದೆ.