ಬಳ್ಳಾರಿ
ಲಕ್ಷಾಂತರ ಜನ-ಜಾನುವಾರುಗಳ ಜೀವಸಂಜೀವಿನಿ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ಮೇ 30 ರಿಂದ ಕಾರ್ಯಾರಂಭ ಮಾಡುವುದಾಗಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯಕ್ಕೆ ಇದೀಗ 75 ವಸಂತಗಳು ತುಂಬಿವೆ. ಕಳೆದ 20 ವರ್ಷಗಳಿಂದ 33 ಟಿಎಂಸಿ ಹೂಳು ತುಂಬಿಕೊಂಡಿದೆ. ಸಂಘದಿಂದ 2017ರಲ್ಲಿ 30 ದಿನ, 2018ರಲ್ಲಿ ಸಾಂಕೇತಿಕವಾಗಿ 1 ದಿನ ಹೂಳು ತೆಗೆಯಲಾಗಿತ್ತು. ಇದೀಗ 2019ರಲ್ಲಿ 5 ದಿನಗಳ ಕಾಲ ಹೂಳೆತ್ತುವ ಕಾರ್ಯಕ್ಕೆ ರೈತರು ಮುಂದಾಗಿದ್ದೇವೆ. ಇದರ ಉದ್ದೇಶ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಣು ತೆರೆಸುವುದಾಗಿದೆ. ಈಗಾಗಲೇ ಹೂಳಿನ ಜಾತ್ರೆಗೆ 2.75 ಸಾವಿರ ರೂ ಮತ್ತು 1 ಕ್ವಿಂಟಾಲ್ ಅಕ್ಕಿ ದೇಣಿಗೆ ರೂಪದಲ್ಲಿ ಸಂಗ್ರಹಗೊಂಡಿದೆ. ಜನಪ್ರತಿನಿಧಿಗಳು ಸೇರಿದಂತೆ ರೈತರ ಹಿತಾಸಕ್ತಿವುಳ್ಳವರು ದೇಣಿಗೆ ನೀಡಿದಲ್ಲಿ ಮಳೆಗಾಲ ಆರಂಭವಾಗುವವರೆಗೂ ಹೂಳು ತೆಗೆಯಲು ನಿರ್ಧರಿಸಿದ್ದೇವೆ ಎಂದರು.
ಕನಕದುರ್ಗಮ್ಮ ದೇವಾಲಯದಿಂದ ಗಂಗೆ ಪೂಜೆ, ದರೂರು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ವಿಶೇಷ ಪೂಜೆ ನೆರವೇರಿಸಿದ ಬಳಿಕ ಪೂಜ್ಯರಾದ ಕೂಡ್ಲಿಗಿ ಉಜ್ಜಿನಿ ಪೀಠದ ಸ್ವಾಮಿ, ಹೊಸಪೇಟೆಯ ಕೊಟ್ಟೂರು ಸ್ವಾಮಿ, ಕಮ್ಮರಚೇಡು ಸಂಸ್ಥಾನಮಠದ ಕಲ್ಯಾಣ ಶ್ರೀಗಳು, ಚಾನುಕೋಟಿ ಶ್ರೀಗಳು, ಎಮ್ಮಿಗನೂರು, ಕೊಂಚಿಗೇರಿ, ಹಡಗಲಿ, ಹಿರೇಹಡಗಲಿ ಸೇರಿದಂತೆ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಈ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಪ್ರತಿನಿತ್ಯ 3 ಜೆಸಿಬಿ ಯಂತ್ರಗಳು, 25 ಟ್ರಾಕ್ಟರ್‍ಗಳು ಕಾರ್ಯ ನಿರ್ವಹಿಸಲಿವೆ.
ಈ ಹೂಳನ್ನು ಕಣವಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ ಅಭಿವೃದ್ಧಿ ಮಾಡಿ ಸಸಿಗಳನ್ನು ನೆಡುತ್ತೇವೆ. ಹೆಚ್‍ಎಲ್‍ಸಿ ಕಾಲುವೆಯ ಎಡ ಮತ್ತು ಬಲ ಭಾಗದಲ್ಲಿನ ತೆಗ್ಗು ಪ್ರದೇಶದಲ್ಲಿ ಹೂಳು ಹಾಕಿ ರಸ್ತೆ ಅಭಿವೃದ್ಧಿ ಪಡಿಸುತ್ತೇವೆ. ಈ ಹೂಳಿನ ಜಾತ್ರೆಗೆ ಜನಪ್ರತಿನಿಧಿಗಳು, ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.ಸಂಘದ ವೀರೇಶ್ ಗಂಗಾವತಿ, ಜಾಲಿಹಾಳ ಶ್ರೀಧರಗೌಡ ಮತ್ತು ಟಿ.ರಂಜಾನ್ ಸಾಬ್ ಇನ್ನಿತರರು ಇದ್ದರು.