ದಾವಣಗೆರೆ:
ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿ, ನಿಜವಾದ ಬಡವರಿಗೆ ಅನುಕೂಲ ಮಾಡಿಕೊಡುವುದರ ಜತೆಗೆ ಅವಳಿ ನಗರ(ದಾವಣಗೆರೆ-ಹರಿಹರ)ಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಪೈಲ್ವಾನ್ ರಾಜನಹಳ್ಳಿ ಶಿವಕುಮಾರ್ ಭರವಸೆ ನೀಡಿದರು.
ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಚಿತ್ರಗಳಿಗೆ ನಮಸ್ಕರಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಉತ್ತಮ ಕೆಲಸಗಳನ್ನು ಮಾಡಿ, ಒಳ್ಳೆಯ ಹೆಸರು ಮಾಡಬೇಕೆಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ವೈಯಕ್ತಿಕ ಹಿತಾಸಕ್ತಿಗಳಿಲ್ಲ.
ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬೇಕೆಂದು ಮನವಿ ಮಾಡಿದರು.ನನ್ನ ರಾಜಕೀಯ ಗುರು ಯಶವಂತರಾವ್ ಅವರಂತೆ ನಾನು ಸಹ ಅರ್ಧ ಅಡಿ ನಿವೇಶನವನ್ನು ಪ್ರಾಧಿಕಾರದಿಂದ ತೆಗೆದುಕೊಳ್ಳದೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಶಯದಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿ ಪಕ್ಷದ ಹಿರಿಯರು, ಪಕ್ಷಕ್ಕೆ ಮತ್ತು ಸಮಾಜಕ್ಕೆ ಹೆಸರು ತರುವ ಪ್ರಯತ್ನ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.
ಅನುಭವಸ್ಥರಿಂದ ಸೂಕ್ತ ಮಾರ್ಗದರ್ಶನ ಪಡೆದು, ಪಕ್ಷದ ಹಿರಿಯರಿಗೆ ಧಕ್ಕೆ ತರದೆ, ಅವರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಪಕ್ಷದ, ಸಂಘಪರಿವಾರದ ಕಾರ್ಯಕರ್ತರನ್ನು ಮರೆಯಲ್ಲ. ನಾನು ಈ ಸ್ಥಾನದಲ್ಲಿ ಇರುವ ವರೆಗೂ ಅವರೆಲ್ಲರಿಗೂ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಅವರು, ನನ್ನನ್ನು ದೂಡಾ ಅಧ್ಯಕ್ಷರನ್ನಾಗಿ ಮಾಡಲು ಮುತುವರ್ಜಿ ವಹಿಸಿದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರು, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೂಡಾ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಕುಮಾರ್ ಟಿಕೆಟ್ ಕೇಳಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗೆಂದು ಬೇಸರಗೊಂಡು ಮನೆಯಲ್ಲಿ ಕೂರದೆ, ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡು ಕೆಲಸ ಮಾಡಿದರು. ಹೀಗಾಗಿಯೇ ದೂಡಾ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆಯಾಗಿದ್ದಾರೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವವರಿಗೆ ಎಂದಿಗೂ ಅನ್ಯಾಯವಾಗುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.
ಎಲ್ಲರೂ ಮೇಯರ್, ಶಾಸಕರು, ಧೂಡಾ ಅಧ್ಯಕ್ಷರಾಗುವುದು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಪಕ್ಷನಿಷ್ಠರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ. ನಿಜವಾಗಿಯೂ ಪಕ್ಷಕ್ಕಾಗಿ ಕಷ್ಟಪಟ್ಟು ದುಡಿಯುವವರಿಗೆ ಅನ್ಯಾಯ ಮಾಡುವುದಿಲ್ಲ. ಅದೇ ರೀತಿ ಬೆನ್ನಿಗೆ ಚೂರಿ ಹಾಕಿದ ಪಕ್ಷವಿರೋಧಿಗಳನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ದೂಡಾ ನೂತನ ಅಧ್ಯಕ್ಷ ಶಿವಕುಮಾರ್ ಅವಳಿ ನಗರಗಳಲ್ಲಿ ಒಳ್ಳೆಯ ಕೆಲಸ ಮಾಡಲಿ. ನಿಜವಾದ ಕಡುಬಡವರು ಯಾವುದೇ ಪಕ್ಷದವರಾಗಿದ್ದರೂ ನಿವೇಶನ ಸಿಗುವಂತಾಗಲಿ. ಪತ್ರಕರ್ತರಲ್ಲೂ ಸಾಕಷ್ಟು ಜನ ಬಡವರಿದ್ದು, ಅಂತಹವರಿಗೂ ನಿವೇಶನ ದೊರಕಲಿ. ನನ್ನ ಅವಧಿಯಲ್ಲಿ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ 504 ನಿವೇಶನ ವಿತರಿಸಿದ್ದು, ಕೆಲವರ ತಕರಾರಿನಿಂದ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಕ್ಕೆ ಇದೇ ವಾರದಲ್ಲಿ ಮುಕ್ತಿ ಸಿಗಬಹುದು. ನಾನು ಅಧ್ಯಕ್ಷನಾಗಿದ್ದಾಗ ಅರ್ಧ ಅಡಿ ಜಾಗ ಕೂಡ ಬರೆದುಕೊಂಡಿಲ್ಲ. ಸೈಟ್ ಇದ್ದವರೂ ಸಹ ನಿವೇಶನಕ್ಕೆ ಆಸೆಪಡುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಹರಿಹರ ಮಾಜಿ ಶಾಸಕ ಬಿ.ಪಿ.ಹರೀಶ, ಧೂಡಾ ನೂತನ ಸದಸ್ಯರಾದ ದೇವೀರಮ್ಮ, ರಾಜು ರೋಖಡೆ, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಪಾಲಿಕೆ ಸದಸ್ಯರಾದ ಎಸ್.ಟಿ.ವೀರೇಶ, ಸೋಗಿ ಶಾಂತಕುಮಾರ, ಎಲ್.ಡಿ.ಗೋಣೆಪ್ಪ, ಶಿವಪ್ರಕಾಶ, ರಾಕೇಶ ಜಾಧವ್, ಧೂಡಾ ಆಯುಕ್ತ ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಬಿ.ಎಂ.ಸತೀಶ, ಪಿ.ಸಿ.ಶ್ರೀನಿವಾಸ ಭಟ್, ಅಜಿತ್ ಸಾವಂತ್, ರಮೇಶ, ಶಿವನಗೌಡ ಪಾಟೀಲ್, ಶಂಕರಗೌಡ ಬಿರಾದಾರ್, ಗೌತಮ್ ಜೈನ್, ಧನುಷ್ ರೆಡ್ಡಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
