ದಾವಣಗೆರೆ :
ಸಿನಿಮಾಗಳ ಹಾವಳಿಯಿಂದ ರಂಗಕಲೆ ವಿನಾಶದ ಅಂಚಿಗೆ ತಲುಪಿವೆ ಎಂದು ರಂಗ ಕಲಾವಿದ ಡಿ.ಶಿವರುದ್ರಪ್ಪ ವಿಷಾಧಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಬಿಂಬ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಏರ್ಪಡಿಸಿದ್ದ ರಂಗ ಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾವಳಿ ಹೆಚ್ಚಾಗಿರುವ ಕಾರಣಕ್ಕೆ ರಂಗಕಲೆ ಹಾಗೂ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿ ತಾಲೂಕು ಕೇಂದ್ರಗಳಲ್ಲಿ ರಂಗ ಕ್ಷೇತ್ರಗಳನ್ನು ಸ್ಥಾಪಿಸಿ, ಅಲ್ಲಿ ರಂಗ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡಿದಾಗ ಮಾತ್ರ ರಂಗ ಕಲೆ ಹಾಗೂ ರಂಗ ಸಂಸ್ಥೆಗಳು ಸಹ ಉಳಿಯಲು ಸಾಧ್ಯವಾಗಲಿದೆ. ರಂಗ ಚಟುವಟಿಕೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ. ಕಲೆ ಮತ್ತು ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ರಂಗಕಲೆ ಹಾಗೂ ಜಾನಪದ ಕಲೆಗಳು ಸಹ ಬೆಳೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಡಾ.ಪಂಚಕ್ಷರಪ್ಪ ಮಾತನಾಡಿ, ರಂಗಭೂಮಿಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ನಗರ ಪ್ರದೇಶದಲ್ಲಿರುವ ಕಲಾವಿದರು ಬಾರದಿರುವುದು ವಿಷಾದದ ಸಂಗತಿಯಾಗಿದೆ. ಆದರೆ, ಇಲ್ಲಿ ಹಳ್ಳಿಗಳಿಂದ ಮಾತ್ರ ಕಲಾವಿದರು ಬಂದಿದ್ದು, ಇದು ಹಳ್ಳಿಗರಲ್ಲಿ ಮಾತ್ರ ಕಲಾಸಕ್ತಿ ಇದೆ ಎಂಬುದನ್ನು ತೋರಿಸುತ್ತದೆ ಎಂದರು.
ರಂಗಕಲೆ ಅಸಲಿ ಕಲೆಯಾಗಿದ್ದು, ಇವು ನಕಲಿ ಅಲ್ಲ. ರಂಗಕಲೆಯು ಇರುವ ವಾಸ್ತವ ಹಾಗೂ ನೈಜತೆಯನ್ನು ತೋರಿಸುವ ಮೂಲಕ ಜನರಿಗೆ ಉತ್ತಮ ಸಂದೇಶವನ್ನು ನೀಡಲಿವೆ. ಹಾಗೆಂದ ಮಾತ್ರಕ್ಕೆ ಟಿವಿ ಸಿನಿಮಾ ನೋಡಬೇಡಿ ಎಂದಲ್ಲ. ಜೀವನ ಮೌಲ್ಯ ಬಿತ್ತುವ ಕಲೆಯನ್ನು ಉಳಿಸುವುದರ ಕಡೆಗೆ ಗಮನ ಹರಿಸಬೇಕಾಗಿದೆ ಎಂದರು.
ಪ್ರಸ್ತುತ ಅವಿಭಕ್ತ ಕುಟುಂಬಗಳು ಹೋಗಿ ವಿಭಕ್ತ ಕುಟುಂಬಗಳಾಗಿರುವ ಪರಿಣಾಮ ಗಂಡ-ಹೆಂಡತಿ, ಮಕ್ಕಳು ಮಾತ್ರ ಆ ಕುಟುಂಬಕ್ಕೆ ಸೀಮಿತವಾಗಿದ್ದಾರೆ. ಆದರೆ, ಮಕ್ಕಳಿಗೆ ಕಥೆ ಹೇಳುವ ಅಜ್ಜ-ಅಜ್ಜಿ, ಬಂಧು-ಬಳಗದ ಪರಿಚಯವೇ ಮಕ್ಕಳಿಗೆ ಇಲ್ಲದ ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ಬಹುತೇಕರು ಹಣ ಗಳಿಕೆಯ ಹಿಂದೆ ದುಂಬಾಲು ಬಿದಿದ್ದಾರೆ. ದುಡ್ಡೇನೊ ಗಳಿಸುತ್ತಿರಬಹುದು. ಆದರೆ, ತಾಳ್ಮೆ, ನೆಮ್ಮದಿಯೇ ಇಲ್ಲವಾಗಿದೆ. ಇಂದಿನ ಬದುಕಿನಲ್ಲಿ ಆಡಂಬರವಿದೆ. ಆದರೆ, ವಿವೇಚನೆ ಸಂಸ್ಕಾರವೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಂಬ ಸಂಸ್ಥೆಯ ಕಾರ್ಯದರ್ಶಿ ಅಂಜನಮೂರ್ತಿ ಮಾತನಾಡಿ, ಪ್ರಸ್ತುತ ನಶಿಸುತ್ತಿರುವ ರಂಗ ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ಸದುದ್ದೇಶದಿಂದ ಬಿಂಬ ಸಾಂಸ್ಕೃತಿಕ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನಮ್ಮ ಈ ಪ್ರಯತ್ನಕ್ಕೆ ರಂಗಾಸಕ್ತರು, ಸಾರ್ವಜನಿಕರು ಸಹಕಾರ ನೀಡಿ, ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಕಲಾವಿದ ಷಣ್ಮುಖಪ್ಪ ಮಾತನಾಡಿ, ಸಿನಿಮಾ ಮತ್ತು ಟಿವಿ ಮಾಧ್ಯಮಗಳು ಬಂದಾದ ಮೇಲೆ ನಗರ ಪ್ರದೇಶಗಳಲ್ಲಿ ಹಳೇ ಕಲೆಗಳು ವಿರಳವಾಗುತ್ತಿವೆ. ಆದರೆ, ಹಳ್ಳಿಗಳಲ್ಲಿ ಇಂತಹ ಹಳೇ ಕಲೆಗಳು ಇನ್ನೂ ಉಳಿದುಕೊಂಡಿವೆ. ಕೆಟ್ಟು ಪಟ್ಟಣ ಸೇರು ಎಂಬ ಗಾದೆ ಮಾತಿನಂತೆ, ಪಟ್ಟಣಕ್ಕೆ ಬಂದ ಮೇಲೆ ಜನರು ಹಣಕ್ಕಾಗಿ ದುಡಿಮೆಯ ಹಿಂದೆ ಬಿದ್ದಿದ್ದಾರೆ. ಹೀಗಾಗಿ ದುಡ್ಡೇ ಜೀವನ ಎಂಬಂತಾಗಿದೆ. ಆದರೆ, ಇಂದಿಗೂ ಸಹ ಹಳ್ಳಿಗಳಲ್ಲಿ ನೈತಿಕ ಮೌಲ್ಯ ಉಳಿದು ಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಂಬ ಸಂಸ್ಥೆಯ ಅಧ್ಯಕ್ಷ ಟಿ.ನವೀನಕುಮಾರ್, ರಂಗ ನಿರ್ದೇಶಕ ಮಂಜುನಾಥ್ ಹೊಳೆಸಿರಗೆರೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
