ಶಿರಾ:
ಮಂಗಳವಾರ ರಾತ್ರಿ ತಾಲ್ಲೂಕಿನಾಧ್ಯಂತ ಉತ್ತಮ ಮಳೆ ಬಂದಿದ್ದು ಸದರಿ ಮಳೆಯು ರೈತರಲ್ಲಿ ಮಂದಹಾಸವನ್ನುಂಟು ಮಾಡಿದೆ.
ಮಂಗಳವಾರ ರಾತ್ರಿ 11.45ಕ್ಕೆ ಆರಂಭಗೊಂಡ ಮಳೆಯ ಜೊತೆಗೆ ಪ್ರಭಲವಾದ ಗಾಳಿಯೂ ಬೀಸಿದ ಪರಿಣಾಮ ನಗರವೂ ಸೇರಿದಂತೆ ಗ್ರಾಮಾಂತರ ಪ್ರದೇಶದ ಕೆಲ ಭಾಗಗಳಲ್ಲಿ ಸಣ್ಣ-ಪುಟ್ಟ ಗಿಡಮರಗಳು ನೆಲಕ್ಕುರುಳಿವೆ ಎನ್ನಲಾಗಿದೆ.
ತಾಲ್ಲೂಕಿನ ಹುಲಿಕುಂಟೆ ಹೋಬಳಿಯಲ್ಲಿ ಅತಿ ಹೆಚ್ಚು 84.1 ಮಿ.ಮೀ. ಮಳೆ ಬಂದಿದ್ದು ಸದರಿ ಹೋಬಳಿಯ ಬರಗೂರು, ಹಂದಿಕುಂಟೆ, ಬಡಮಾರನಹಳ್ಳಿ, ಕಲ್ಲಹಳ್ಳಿ, ರಾಗಲಹಳ್ಳಿಯ ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಶೇಖರಣೆಯಾಗಿದೆ. ಬರಗೂರು ಸಮೀಪದ ಕರೇತಿಮ್ಮನಹಳ್ಳಿಯ ಭಾಗದಲ್ಲಿ ಹೆಚ್ಚು ಮಳೆ ಬಂದ ಪರಿಣಾಮ ಹಳ್ಳದ ರಂಗನಾಥಸ್ವಾಮಿ ದೇವಸ್ಥಾನದ ಸಮೀಪದ ಹಳ್ಳ ತುಂಬಿ ಹರಿದಿದೆ ಎನ್ನಲಾಗಿದೆ.
ಹಂದಿಕುಂಟೆಯಲ್ಲಿ 74.9, ಹುಲಿಕುಂಟೆಯಲ್ಲಿ 70.5, ಹೊಸಹಳ್ಳಿಯಲ್ಲಿ 64.5 ಮಿ.ಮೀ. ಮಳೆಯಾಗಿದ್ದು ಶಿರಾ ನಗರವೂ ಸೇರಿದಂತೆ ತಾಲ್ಲೂಕಿನ ತಾವರೇಕೆರೆ, ಪ.ನಾ.ಹಳ್ಳಿ, ಕಸಬಾ ಹೋಬಳಿ, ಗೌಡಗೆರೆ ಹೋಬಳಿಯ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪ.ನಾ.ಹಳ್ಳಿ ಸಮೀಪದ ವೀರಗಾನಹಳ್ಳಿಯ ಚೆಕ್ ಡ್ಯಾಂ ತುಂಬಿದೆ. ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ.