ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ಶಿರಾ ಸೀಲ್‍ಡೌನ್ ಆದರೂ ಅಚ್ಚರಿ ಇಲ್ಲ

ಶಿರಾ

    ಶಿರಾ ತಾಲ್ಲೂಕಿನಲ್ಲಿ ಕೋವಿಡ್ -19 ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಒಬ್ಬರಿಗೆ ಪಾಸಿಟೀವ್ ಬಂದಿದ್ದು, ಪಾಸಿಟೀವ್ ಇರುವ ವ್ಯಕ್ತಿ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಂದಿಯ ಗಂಟಲು ದ್ರವ ಪರೀಕ್ಷೆಯ ಫಲಿತಾಂಶವು ಏ. 11 ರಂದು (ಇಂದು) ಆರೋಗ್ಯ ಇಲಾಖೆಗೆ ಲಭ್ಯವಾಗಲಿದ್ದು, ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ಶಿರಾ ನಗರ ಸೀಲ್‍ಡೌನ್ ಆದರೂ ಅಚ್ಚರಿ ಇಲ್ಲ. ತಾಲ್ಲೂಕಿನಲ್ಲಿ ಒಟ್ಟು 82 ಮಂದಿ ಕ್ವಾರಂಟೇನ್‍ನಲ್ಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

     ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಕೂಡಲೆ ಇಡೀ ತಾಲ್ಲೂಕಿನಲ್ಲಿ ಎಲ್ಲಾ ರೀತಿಯ ಬಂದೋಬಸ್ತಿನ ಕ್ರಮ ಕೈಗೊಳ್ಳಲಾಗಿದೆ. ಬಿಗಿ ಬಂದೋಬಸ್ತ್ ಇದ್ದರೂ ಕೂಡ ಹಾಲು, ತರಕಾರಿ, ಹಣ್ಣುಗಳು ಹಾಗೂ ದಿನಸಿ ಸೇರಿದಂತೆ ಔಷಧಿ ಕೊಳ್ಳುವ ಸಾರ್ವಜನಿಕರಿಗೆ ತೊಂದರೆ ಮಾಡಿಲ್ಲ ಎಂದು ಜಿಲ್ಲಾ ಸಚಿವರು ಹೇಳಿದರು.

     ಜಿಲ್ಲೆಯ ಶಿರಾ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕುಗಳು ಆಂಧ್ರದ ಗಡಿ ಪ್ರದೇಶಗಳನ್ನು ಹೊಂದಿಕೊಂಡಿರುವ ಪರಿಣಾಮ, ಅತಿ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯಲ್ಲಿ ರೈತರ ಬೆಳೆಗಳನ್ನು ಸರಬರಾಜು ಮಾಡಿಕೊಳ್ಳಲು ಯಾರೂ ಅಡ್ಡಿಪಡಿಸಿಲ್ಲ. ಕೃಷಿ ಚಟುವಟಿಕೆಗೆ ತೊಂದರೆ ನೀಡಿಲ್ಲವಾದರೂ, ಗೂಡ್ಸ್ ಲಾರಿಗಳಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

     ಮುಂದಿನ ಎರಡು ತಿಂಗಳ ಪಡಿತರವನ್ನು ಮುಂಚಿತವಾಗಿಯೆ ನೀಡಲು ಸರ್ಕಾರ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಪಡಿತರವನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೆ ಸರಬರಾಜು ಮಾಡಲಾಗಿದೆ. ಶಿರಾ ತಾಲ್ಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಿಗೆ ಗುತ್ತಿಗೆದಾರರು ಸರಿಯಾಗಿ ಸರಬರಾಜು ಮಾಡಿಲ್ಲವೆಂಬ ದೂರು ಆಹಾರ ಇಲಾಖೆಯ ಅಧಿಕಾರಿಗಳಿಂದಲೆ ಬಂದಿದ್ದು, ಶುಕ್ರವಾರ ಸಂಜೆಯೊಳಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಆಹಾರ ಪಡಿತರ ವಿತರಣೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಮಾಂಸ ಮಾರಾಟ ಇಲ್ಲ :

    ಶಿರಾದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಸೋಂಕು ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಶಿರಾ ತಾಲ್ಲೂಕಿನಲ್ಲಿ ಯಾವುದೇ ಕಾರಣಕ್ಕೂ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಮಾಂಸ ನೀಡಲೆ ಬೇಕಾದ ಪರಿಸ್ಥಿತಿ ಬಂದಲ್ಲಿ, ಅದನ್ನು ಪಾಕೆಟ್ ಮೂಲಕ ಅಗತ್ಯವಿರುವ ಸಾರ್ವಜನಿಕರಿಗೆ ಪೂರೈಸುವ ಕೆಲಸವನ್ನು ಮಾಡಲಾಗುವುದು ಎಂದರು.

   ಶಿರಾ ತಾಲ್ಲೂಕು RED ZONE  ನಲ್ಲಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಊಟವಿಲ್ಲದೆ ಸಂಕಷ್ಟಕ್ಕೊಳಗಾದ ನಿರಾಶ್ರಿತರನ್ನು ಒಂದೆಡೆ ಇಟ್ಟು, ಅವರಿಗೆ ಊಟ ವಸತಿ ನೀಡಲಾಗಿದೆ. ಜಿಲ್ಲೆಯಲ್ಲಿ ಯಾರೂ ಕೂತಿ ಹಸಿವಿನಿಂದ ಇರದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಸಚಿವರು ತಿಳಿಸಿದರು.

    ಅನಿವಾರ್ಯ ಪರಿಸ್ಥಿತಿ ಬಂದು ಶಿರಾ ತಾಲ್ಲೂಕು ಸೀಲ್‍ಡೌನ್ ಆದರೆ, ಎಲ್ಲಾ ಸಾರ್ವಜನಿಕರೂ ಸಹಕರಿಸಬೇಕು. ಸರ್ಕಾರದೊಂದಿಗೆ ಸ್ಪಂದಿಸಿದಾಗ ಮಾತ್ರ ಮದ್ದಿಲ್ಲದ ಈ ರೋಗವನ್ನು ದೂರಗೊಳಿಸಲು ಸಾಧ್ಯ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ಡಿ.ಎಸ್.ಪಿ. ಕುಮಾರಪ್ಪ, ಗ್ರಾಮಾಂತರ ಸಿ.ಪಿ.ಐ. ಶಿವಕುಮಾರ್, ತಾ.ಪಂ. ಇ.ಓ. ಮೋಹನ್, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap