ದಿಲ್ಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ…..!

ಹೊಸದಿಲ್ಲಿ:

    ಚಳಿಗಾಲ ಪ್ರಾರಂಭವಾಗುವ ಮೊದಲೇ ದಿಲ್ಲಿ  ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವಾಯುಮಾಲಿನ್ಯ ದಿಂದ ಕೂಡಿದ್ದು, ಶನಿವಾರ ಬೆಳಿಗ್ಗೆ ಸಂಪೂರ್ಣ ಹೊಗೆಯ ತೆಳುವಾದ ಪದರವು ಆವರಿಸಿತ್ತು . ಗಾಳಿಯ ಗುಣಮಟ್ಟ ಕಳಪೆ ವರ್ಗಕ್ಕೆ ಇಳಿದಿದೆ. ದಿಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು 273ರಷ್ಟಿದ್ದರೆ, ಗಾಜಿಯಾಬಾದ್  246 ಮತ್ತು ನೋಯ್ಡಾ 228 ಇತ್ತು. ದಿಲ್ಲಿ, ಅಕ್ಷರಧಾಮ ಮತ್ತು ಆನಂದ್ ವಿಹಾರ್ ಪ್ರದೇಶದಲ್ಲಿ ಅತ್ಯಧಿಕ ಎಕ್ಯೂಐ 334 ಇದ್ದು ‘ಅತ್ಯಂತ ಕಳಪೆ’ ಎಂದು ವರ್ಗೀಕರಿಸಲಾಗಿದೆ.

   ಮಾಲಿನ್ಯದ ಸಮಸ್ಯೆಗೆ ಸಂಬಂಧಿಸಿದಂತೆ ದಿಲ್ಲಿಯ  ಪರಿಸರ ಸಚಿವ ಗೋಪಾಲ್ ರೈ ಶುಕ್ರವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ನಂತರ ಮಾತನಾಡಿ, ʼʼಚಳಿಗಾಲ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಧಾನಿಯ ಹವಾಮಾನದ ಗುಣಮಟ್ಟ ಕ್ಷೀಣಿಸುತ್ತದೆ. ಹದಗೆಡುತ್ತಿರುವ ವಾತಾವರಣದ ಸ್ಥಳೀಯ ಮೂಲಗಳನ್ನು ಪತ್ತೆ ಹಚ್ಚಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆʼʼ ಎಂದರು.

   ʼʼದಿಲ್ಲಿಯಲ್ಲಿ 13 ಹಾಟ್‌ಸ್ಪಾಟ್‌ಗಳಿವೆ. ಅಲ್ಲಿ AQI 300 ದಾಟಿದೆ- ವಜೀರ್‌ಪುರ, ಮುಂಡ್ಕಾ, ರೋಹಿಣಿ, ಜಹಾಂಗೀರ್‌ಪುರಿ, ಆನಂದ್ ವಿಹಾರ್, ದ್ವಾರಕಾ ಸೆಕ್ಟರ್ -8, ಬವಾನಾ, ನರೇಲಾ, ವಿವೇಕ್ ವಿಹಾರ್, ಓಖ್ಲಾ ಹಂತ 2, ಪಂಜಾಬಿ ಬಾಗ್, ಅಶೋಕ್ ವಿಹಾರ್ ಮತ್ತು ಆರ್‌.ಕೆ.ಪುರಂನಲ್ಲಿ ಎಕ್ಯೂಐ ಮಟ್ಟವು ಅತ್ಯಧಿಕವಾಗಿದೆʼʼ ಎಂದು ತಿಳಿಸಿದರು.

   ದಿಲ್ಲಿಯ ವಾಯು ಮಾಲಿನ್ಯದ ನಿರ್ವಹಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಎಡವಿದೆ ಎಂದು ಬಿಜೆಪಿ ಟೀಕಿಸುತ್ತದೆ. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ನಿದ್ದೆ ಮಾಡುತ್ತಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿಗೆ ಹಕ್ಕಿಲ್ಲ ಎಂದು ಆಪ್‌ ತಿರುಗೇಟು ನೀಡಿದೆ.
    ದಿಲ್ಲಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದ್ದಂತೆ ವಿಷಕಾರಿ ನೊರೆಯು ಯಮುನಾ ನದಿಯನ್ನು ಆವರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಕಟುವಾದ ನೊರೆಯಲ್ಲಿ ಹೆಚ್ಚಿನ ಮಟ್ಟದ ಅಮೋನಿಯಾ ಮತ್ತು ಫಾಸ್ಫೇಟ್‌ಗಳಿವೆ, ಇದು ಉಸಿರಾಟ ಮತ್ತು ಚರ್ಮದ ಸಮಸ್ಯೆಗಳು ಸೇರಿದಂತೆ ಗಂಭೀರ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ ಹಾಗೂ ಯಮುನಾ ನದಿಯ ನೀರು ಕಾರ್ಖಾನೆಗಳ ತ್ಯಾಜ್ಯವನ್ನು ಸಂಸ್ಕರಿಸದ ಕಾರಣ ಮತ್ತು ಅದರೊಳಗೆ ಬಿಡುವ ಕೊಳಚೆಯಿಂದಾಗಿ ದುರ್ನಾತ ಬೀರುತ್ತಿದೆ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ. ನದಿಯಲ್ಲಿನ ಮಾಲಿನ್ಯದ ಮಟ್ಟವು ಆತಂಕಕಾರಿಯಾಗಿದೆ. ಛತ್ ಪೂಜೆಯಂತಹ ಪ್ರಮುಖ ಹಬ್ಬಗಳು ಸಮೀಪಿಸುತ್ತಿರುವ ಕಾರಣ ಸರಿಯಾದ ರೀತಿಯಲ್ಲಿ ಮಾಲಿನ್ಯವನ್ನು ನಿಯಂತ್ರಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಪ್ರಸ್ತುತ, ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಭಾಯಿಸಲು ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್-1 ಅಡಿಯಲ್ಲಿ ಕಟ್ಟುನಿಟ್ಟಾಗಿ ಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ದಿಲ್ಲಿ ಸರ್ಕಾರ ಹೇಳಿದೆ. ಪರಿಸರ ಸಚಿವ ಗೋಪಾಲ್ ರೈ ಮತ್ತು ಹಿರಿಯ ಅಧಿಕಾರಿಗಳು ಹಾಗೂ ದಿಲ್ಲಿ ಮುಖ್ಯಮಂತ್ರಿ ಅತಿಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಘೋಷಣೆಯನ್ನು ಮಾಡಲಾಗಿದೆ.

Recent Articles

spot_img

Related Stories

Share via
Copy link