ಬೆಂಗಳೂರು
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರ ವಿಚಾರಣೆಯನ್ನು ಶನಿವಾರ ಮುಂದುವರೆಸಿದ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು ಆರೋಪಿ ಮನ್ಸೂರ್ ಖಾನ್ ವಿಚಾರಣೆಯ ನಂತರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ.
ಸಿಐಡಿಯ ಕಾರ್ಲಟನ್ ಹೌಸ್‍ನಲ್ಲಿ ಐಎಂಎ ವಂಚನೆ ಪ್ರಕರಣದ ಸಂಬಂಧ ಅಜಯ್ ಹಿಲೋರಿ ಅವರನ್ನು ಶುಕ್ರವಾರ ಎರಡೂವರೆ ಗಂಟೆಗಳಿಗೂ ಹೆಚ್ಚುಕಾಲ ವಿಚಾರಣೆ ನಡೆಸಿದ್ದ ಎಸ್‍ಐಟಿ ಅಧಿಕಾರಿಗಳು ಶನಿವಾರ ಮತ್ತೆ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಸಂದರ್ಭದಲ್ಲಿ ಅಜಯ್ ಹಿಲೋರಿ ಅವರು, ವಂಚನೆ ನಡೆಸುತ್ತಿದ್ದ ಐಎಂಎ ಸಮೂಹ ಸಂಸ್ಥೆಯ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಸಂಬಂಧ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.ಐಎಂಎ ಹಣಕಾಸು ವ್ಯವಹಾರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ರಿಸರ್ವ್ ಬ್ಯಾಂಕ್ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆಗಿನ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಅವರು ಐಎಂಎ ಮಾಲೀಕ ಮಹಮದ್ ಮನ್ಸೂರ್ ಖಾನ್ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಆತನ ವಿರುದ್ಧ ರಾಜ್ಯ ಹಣಕಾಸು ಸಂಸ್ಥೆಗಳ ಠೇವಣಿದಾರರ ಸುರಕ್ಷತಾ ಕಾಯ್ದೆಯಡಿ ಕ್ರಮ ಜರುಗಿಸಲು ಅವಕಾಶವಿಲ್ಲ ಎಂದು ವರದಿ ಸಲ್ಲಿಸಿದ್ದರು.
ವಂಚನೆ ನಡೆಸುತ್ತಿದ್ದ ಕಂಪನಿಯ ಬಗ್ಗೆ ಈ ರೀತಿಯ ವರದಿ ಸಲ್ಲಿಸಲು ಕಾರಣಗಳೇನು? ಅದಕ್ಕಾಗಿ ಯಾವ ರೀತಿಯ ಅನುಕೂಲ ಪಡೆಯಲಾಗಿತ್ತು ಎನ್ನುವುದರ ಬಗ್ಗೆ ಎಸ್‍ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದರು .ತನಿಖಾಧಿಕಾರಿ ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಅಜಯ್ ಹಿಲೋರಿ ಅವರನ್ನು ವಿಚಾರಣೆಗೊಳಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುವ ಮನ್ಸೂರ್ ಖಾನ್‍ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ನಂತರ, ಮತ್ತೆ ವಿಚಾರಣೆಗೆ ಹಾಜರಾಗುವಂತೆ, ಅಜಯ್ ಹಿಲೋರಿ ಅವರಿಗೆ ಸೂಚಿಸಿ ಕಳುಹಿಸಲಾಗಿದೆ.
ಅಜಯ್ ಹಿಲೋರಿ ಅವರು ಈಗ ಒಂದನೇ ಸಶಸ್ತ್ರ ಬೆಟಾಲಿಯನ್‍ನ ಕಮಾಂಡೆಂಟ್ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧ ಅಜಯ್ ಹಿಲೋರಿ ಅಲ್ಲದೆ, ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಗೆ ಬರುವ ಹಿಂದಿನ ಎಸಿಪಿ ರಮೇಶ್ ಕುಮಾರ್ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಇನ್ಸ್‍ಪೆಕ್ಟರ್ ರಮೇಶ್ ಅವರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಇವರಿಬ್ಬರನ್ನೂ ಸದ್ಯದಲ್ಲೇ ನೋಟಿಸ್ ನೀಡಿ, ವಿಚಾರಣೆ ನಡೆಸಲು ಎಸ್‍ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.