ಕೇದಾರನಾಥ
ರುದ್ರಪ್ರಯಾಗ ಜಿಲ್ಲೆಯ ವಿಶ್ವವಿಖ್ಯಾತ ಶ್ರೀ ಕೇದಾರನಾಥ ಧಾಮದಲ್ಲಿ ಕಳೆದ ಮೂರು ದಿನಗಳಿಂದ ಹಿಮಪಾತವಾಗುತ್ತಿದ್ದು, ಸದ್ಯಕ್ಕೆ ಕೇದಾರನಾಥ ಧಾಮಕ್ಕೆ ಭೇಟಿ ನೀಡದಂತೆ ರುದ್ರಪ್ರಯಾಗ ಪೊಲೀಸರು ಎಲ್ಲಾ ಯಾತ್ರಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಕಳೆದ ರಾತ್ರಿ ಮತ್ತು ಇಂದು ಉತ್ತರಾಖಾಂಡದ ಕೇದಾರನಾಥದಲ್ಲಿ ತೀವ್ರ ಹಿಮಪಾತವಾಗಿದೆ. ಭೈರವೇಶ್ವರ ಮತ್ತು ಕುಬೇರ ಸ್ಥಾನದ ಮಧ್ಯೆ ತೀವ್ರ ಹಿಮಪಾತವಾಗಿದ್ದು, ಅಲ್ಲಿ ಸಿಲುಕಿರುವ ಯಾತ್ರಿಗಳನ್ನು ಸೈನಿಕರು ಸ್ಥಳಾಂತರ ಮಾಡುತ್ತಿದ್ದಾರೆ. ಹಿಮದ ಮಳೆ ಜೊತೆಗೆ ಅತಿಯಾದ ಶೀತಗಾಳಿಗೆ ಅಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗೆ ಕುಸಿದಿದೆ. ಕಳೆದ ಒಂದು ವಾರದಲ್ಲಿ 7 ಯಾತ್ರಿಗಳು ಮೃತ ಪಟ್ಟಿದ್ದಾರೆ.
ಕೇದಾರನಾಥದಲ್ಲಿ ಭಾರೀ ಹಿಮಪಾತದ ನಡುವೆ, ಸುರಕ್ಷಿತ ಸ್ಥಳಗಳಲ್ಲಿ ಉಳಿಯಲು ಪೊಲೀಸರು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.
ನಿನ್ನೆ ಕೇದಾರನಾಥ ಧಾಮದಲ್ಲಿ ಆದ ಭಾರೀ ಹಿಮಪಾತದಿಂದಾಗಿ ಯಾತ್ರಾರ್ಥಿಗಳನ್ನು ಭದ್ರತೆಯ ದೃಷ್ಟಿಯಿಂದ ಋಷಿಕೇಶ, ಶ್ರೀನಗರ, ರುದ್ರಪ್ರಯಾಗ, ಅಗಸ್ತ್ಯಮುನಿ, ಗುಪ್ತಕಾಶಿ, ಸೋನಪ್ರಯಾಗ ಮತ್ತು ಗೌರಿಕುಂಡ್‍ನಲ್ಲಿ ತಡೆಹಿಡಿಯಲಾಗಿದ್ದು, ರುದ್ರಪ್ರಯಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಬೋಧ್ ಕುಮಾರ್ ಗಿಲ್ಡಿಯಾಲ್ ಅವರು ಕೇಂದ್ರ ಕಚೇರಿಯಲ್ಲಿರುವ ಜವಾಡಿ ಬೈಪಾಸ್‍ನಲ್ಲಿ ವಿಶೇಷ ಅಭಿಯಾನ ನಡೆಸಿದ್ದು, ಅದರ ಭಾಗವಾಗಿ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ಕೇದಾರನಾಥ ಧಾಮದ ಪರಿಸ್ಥಿತಿಯ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದಾರೆ ಮತ್ತು ಸದ್ಯ ಯಾರೂ ಮುಂದೆ ಹೋಗದಂತೆ ಸೂಚಿಸಿದ್ದಾರೆ.
10,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತವಾಗಿ ಅಲ್ಲಲ್ಲಿಯೇ ನಿಲ್ಲಿಸಲಾಗಿದೆ. ಹವಾಮಾನವು ಸರಿಹೋದ ತಕ್ಷಣ ಜನರು ಮುಂದೆ ಹೋಗಲು ಅನುಮತಿಸಲಾಗುವುದು ಎಂದಿದ್ದಾರೆ.ಬದರಿನಾಥ ಧಾಮದಲ್ಲೂ ಹಿಮದ ಮಳೆ, ಶೀತ ಗಾಳಿ ಹೆಚ್ಚಿದೆ. ಇದರ ಮಧ್ಯೆ ಎರಡೂ ಕಡೆ ದಿನಕ್ಕೆ ಸಾವಿರಾರು ಯಾತ್ರಿಗಳು ದರ್ಶನ ಪಡೆಯುತ್ತಿದ್ದಾರೆ. ವಾತಾವರಣ ಕೆಟ್ಟಿರುವುದರಿಂದ ಉತ್ತರಾಖಂಡ ಸರ್ಕಾರ ಕೆಲ ದಿನಗಳು ನೋಂದಣಿ ನಿಲ್ಲಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ