ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾ.ದೇವದಾಸ್ ಅವರಿಂದ ನಾಮಪತ್ರ ಸಲ್ಲಿಕೆ

ಬಳ್ಳಾರಿ:

        ಇಂದು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಕಾ.ದೇವದಾಸ್ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನೂರಾರು ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಗಾಂಧಿಭವನದಿಂದ ಪ್ರಾರಂಭವಾದ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಛೇರಿಯನ್ನು ತಲುಪಿತು. ಮೆರವಣಿಗೆ ಪ್ರಾರಂಭಕ್ಕೂ ಮುನ್ನ ಶಹೀದ್ ಭಗತ್‍ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಕಾ.ದೇವದಾಸ್ ಮಾಡಿದರು.

       ಈ ಸಂದರ್ಭದಲ್ಲಿ ಕಾ.ದೇವದಾಸ್ ಮಾತನಾಡುತ್ತಾ “ ಶಹೀದ್ ಭಗತ್‍ಸಿಂಗ್ ಅವರು ತಮ್ಮ ಜೀವನದಲ್ಲಿ ಮಹಾನ್ ರಾಜಕೀಯ ವಿಚಾರಗಳನ್ನು ಪ್ರತಿನಿಧಿಸಿದ್ದರು. ಶೋಷಿತರು, ನೊಂದವರ ಪರವಾದ ಹೋರಾಟದ ರಾಜಕೀಯವನ್ನು ಅವರು ಎತ್ತಿಹಿಡಿದಿದ್ದರು. ಆದರೆ ಇಂದು ನಮ್ಮನ್ನಾಳುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಇನ್ನಿತರ ಪಕ್ಷಗಳು ಅತ್ಯಂತ ಕೊಳಕಾದ ರಾಜಕೀಯವನ್ನು, ಸ್ವಾರ್ಥ ಮತ್ತು ಅಧಿಕಾರಕ್ಕಾಗಿನ ರಾಜಕೀಯವನ್ನು ಮಾಡುತ್ತಿವೆ.

         ಬಂಡವಾಳಶಾಹಿಗಳ ಹಿತ ಕಾಪಾಡುವುದಕ್ಕಾಗಿ, ಜನರ ಹಿತವನ್ನು ಕಸದಬುಟ್ಟಿಗೆಸೆದಿವೆ. ಕಳೆದ 5 ವರ್ಷ ಆಳಿದ ಮೋದಿ ಸರ್ಕಾರ ಜನರಿಗೆ ಬರೀ ಸುಳ್ಳು ಭರವಸೆಗಳನ್ನು ನೀಡುತ್ತಾ, ಅಂಬಾನಿ, ಅದಾನಿ, ನೀರವ್ ಮೋದಿ, ವಿಜಯ್ ಮಲ್ಯ ಇಂತವರನ್ನೇ ಉದ್ಧಾರ ಮಾಡಿದೆ. ನಿರುದ್ಯೋಗ, ಬೆಲೆ ಏರಿಕೆ, ರೈತರ ಆತ್ಮ ಹತ್ಯೆ, ದುಬಾರಿ ಶಿಕ್ಷಣ, ಇಂತಹ ಅನೇಕ ಸಮಸ್ಯೆಗಳು ಜನರನ್ನು ಕಿತ್ತು ತಿಂತಿವೆ. ಈ ಸಮಸ್ಯೆಗಳ ಪರಿಹಾರವಾಗಬೇಕಾದರೆ, ಜನತೆಯ ಬಲಿಷ್ಠ ಹೋರಾಟಗಳನ್ನು ಬೆಳೆಸುವುದರ ಜೊತೆಗೆ ಅಂತಹ ಹೋರಾಟಗಳನ್ನು ಕಟ್ಟುತ್ತಿರುವ ಅಭ್ಯರ್ಥಿಗಳನ್ನು ಸಂಸತ್ತಿಗೆ ಆರಿಸಿ ಕಳಿಸಬೇಕಾಗಿದೆ. ಜನರ ಧ್ವನಿ ಸಂಸತ್ತಿನಲ್ಲಿ ಪ್ರತಿಧ್ವನಿಸಬೇಕಾದರೆ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷಕ್ಕೆ ಮತ ಹಾಕಲು” ಮನವಿ ಮಾಡಿದರು.

         ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಕಾ.ಸೋಮಶೇಖರ್, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಗಳಾದ ಕಾ.ರಾಧಾಕೃಷ್ಣ ಉಪಾಧ್ಯ, ಜಿಲ್ಲಾ ಸಮಿತಿ ಸದಸ್ಯರಾದ ಎಮ್.ಎನ್.ಮಂಜುಳ, ಡಾ.ಎನ್.ಪ್ರಮೋದ್, ಡಿ.ನಾಗಲಕ್ಷ್ಮಿ, ಎ.ಶಾಂತ ಹಾಗೂ ಎಸ್.ಯು.ಸಿ.ಐ. ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಮತ್ತು ನೂರಾರು ಜನ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link