ವಿನಾಯಕ ನಗರ :ಸ್ಲಂ ನಿವಾಸಿಗಳ ವಿಲಕ್ಷಣ ವರ್ತನೆ..!

ಮಹಡಿ ಮನೆಗಿಂತಾ ನಮಗೆ ಕೊಳಗೇರಿಯೇ ಲೇಸು

ತುಮಕೂರು

   ಮಹಡಿ ಮನೆ ಕಟ್ಟಿಕೊಟ್ಟರೂ ನಾವು ಅಲ್ಲಿಗೆ ಹೋಗುವುದಿಲ್ಲ, ಇಲ್ಲೇ ಇರುತ್ತೇವೆ. ಅಧಿಕಾರಿಗಳು ಬಂದು ನಮ್ಮ ಗುಡಿಸಲು ಕೆಡವಿದರೂ ನಾವು ಮತ್ತೆ ಇಲ್ಲಿ ಬಂದು ಗುಡಿಸಲು ಹಾಕಿಕೊಳ್ಳುತ್ತೇವೆ. ನಮ್ಮನ್ನು ಇಲ್ಲಿಂದ ತೆರವು ಮಾಡಿಸಬೇಡಿ, ಬೇರೆ ಕಡೆ ಹೋದರೆ ನಮಗೆ ಕೂಲಿ ಸಿಗುವುದಿಲ್ಲ… ತುಮಕೂರಿನ ವಿನಾಯಕ ನಗರದ ದೊಡ್ಡ ಚರಂಡಿ ಪಕ್ಕದ ಸ್ಲಂನ ನಿವಾಸಿಗಳ ಹೀಗೆ ಹೇಳುತ್ತಾರೆ. ದಿಬ್ಬೂರು ವಸತಿ ಸಂಕೀರ್ಣದಲ್ಲಿ ನೀಡಿರುವ ಮನೆಯನ್ನು ಬಿಟ್ಟು ಬಂದು ಕೆಲವರು ಇಲ್ಲಿ ವಾಸ ಮಾಡುತ್ತಿದ್ದಾರೆ.

    ವಿನಾಯಕ ನಗರದ ಸಿದ್ಧಿವಿನಾಯಕ ಸಮುದಾಯ ಭವನದ ಪಕ್ಕದ ದೊಡ್ಡ ಚರಂಡಿ ದಡದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಕೆಲವು ಕುಟುಂಬಗಳು ಈ ಜಾಗ ತೊರೆಯಲು ಹಿಂಜರಿದಿವೆ. ವರ್ಷದ ಎಲ್ಲಾ ದಿನವೂ ನಿರಂತರವಾಗಿ ಕೊಚ್ಚೆ ನೀರು ಹರಿಯುವ ಚರಂಡಿ, ಕಚ್ಚಾಡುವ ಹಂದಿ, ನಾಯಿಗಳು, ಝೆಂಕರಿಸುವ ಸೊಳ್ಳೆಗಳು, ಉಸಿರುಕಟ್ಟುವ ದುರ್ವಾಸನೆ, ಸರ್ವ ರೋಗ ಸೃಷ್ಠಿಯಾಗಬಹುದಾದ ಪರಿಸರ. ಇಂತಹ ಕಡೆಯೇ ನಾವು ಉಳಿಯುತ್ತೇವೆ, ತಾತನ ಕಾಲದಿಂದಲೂ ಇಲ್ಲೇ ವಾಸ ಮಾಡುತ್ತಿದ್ದೇವೆ ಎಂದು ಹೆಸರು ಹೇಳಬಯಸದ ಇಲ್ಲಿನ ನಿವಾಸಿ ಹೇಳುತ್ತಾರೆ.

     ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರಿನಲ್ಲಿ ನಾಗರೀಕರು ಸುಸಜ್ಜಿತ ನಾಗರೀಕ ಸೇವೆ ನಿರೀಕ್ಷಸುತ್ತಾರೆ. ರಸ್ತೆ, ಬೀದಿ ದೀಪ, ಚರಂಡಿ, ಶುದ್ದ ಕುಡಿಯುವ ನೀರು, ಶೌಚಾಲಯ ಒದಗಿಸಬೇಕೆಂದು ಬೇಡಿಕೆ ಇಡುತ್ತಾರೆ. ಆದರೆ ಇದಾವುದೂ ಇಲ್ಲದ, ಇದಾವುದನ್ನೂ ನಿರೀಕ್ಷಿಸದೆ ಇಲ್ಲಿ ಇವರು ವಾಸ ಮಾಡುತ್ತಿದ್ದಾರೆ.

    ಅಧಿಕಾರಿಗಳು ಈ ಪ್ರದೇಶಕ್ಕೆ ಬಂದರೆ ಹೆದರಿ ತಪ್ಪಿಸಿಕೊಂಡು ಹೋಗುತ್ತಾರೆ, ಅಧಿಕಾರಿಗಳು ತಮ್ಮನ್ನ ಈ ಜಾಗದಿಂದ ಎತ್ತಂಗಡಿ ಮಾಡಿಸಿಬಿಡುತ್ತಾರೆ ಎಂಬ ಭಯ ಇವರಿಗೆ!ಇಲ್ಲಿಯೇ ವಾಸ ಮಾಡಬೇಕೆಂದು ಇವರು ಹಟಕ್ಕೆ ಬಿದ್ದಿರಲು ಕಾರಣ ಇವರ ಜೀವನಾಧಾರವಾಗಿರುವ ಮಂಡಿಪೇಟೆ.

     ಹಲವಾರು ವರ್ಷಗಳಿಂದ ಮಂಡಿಪೇಟೆಯ ಕೂಲಿಯೇ ಇವರ ಬದುಕು ರೂಪಿಸುತ್ತಿದೆ. ಲಾರಿಗಳಿಗೆ ಸರಕು ಲೋಡು ಮಾಡುವ, ಅನ್‍ಲೋಡು ಮಾಡುವ ಕೆಲಸ, ಮತ್ತಿತರ ಕೂಲಿ ಹಣದಿಂದ ಬದುಕು ರೂಪಿಸಿಕೊಂಡಿದ್ದಾರೆ. ಕೆಲವರು ರೈಸ್ ಮಿಲ್‍ಗಳ ಉಬ್ಬಲು ತುಂಬುವ, ಮಾರುವ ವ್ಯವಹಾರ ಮಾಡುತ್ತಿದ್ದಾರೆ. ಇಲ್ಲಿಂದ ಬೇರೆ ಕಡೆಗೆ ಹೋದರೆ ಕೂಲಿಗೆ ಕುತ್ತು ಬೀಳುತ್ತದೆ ಎಂಬ ಆತಂಕ ಇವರದ್ದು. ದಿಬ್ಬೂರಿನ ವಸತಿ ಸಮುಚ್ಛಾಯದಲ್ಲಿ ನೀಡಿರುವ ಮನೆಗಳನ್ನು ಕೆಲವರು ಬೇರೆಯವರಿಗೆ ವಾಸಕ್ಕೆ ಕೊಟ್ಟು ಇಲ್ಲಿ ಬಂದಿದ್ದಾರೆ, ಕೆಲವರು ಮನೆ ಅಲ್ಲಿದ್ದೂ ಹೆಚ್ಚಿನ ಸಮಯ ಈ ಸ್ಲಂನಲ್ಲೇ ವಾಸ ಮಾಡುತ್ತಿದ್ದಾರೆ.

      ದಿಬ್ಬೂರಿನಲ್ಲಿ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ಲಾರಿಗಳ ಲೋಡು-ಅನ್‍ಲೋಡು ಕೆಲಸ ಯಾವಾಗೆಂದರೆ ಆವಾಗ ಬರುತ್ತದೆ, ಆ ಟೈಮಿಗೆ ಬರಲಾಗುವುದಿಲ್ಲ, ನಮ್ಮ ಮೊಬೈಲ್ ಕ್ಯಾಚ್ ಆಗದಿದ್ದರೆ ಕೂಲಿ ಹೋಗುತ್ತದೆ. ನಮ್ಮ ಪಾಲಿನ ಕೂಲಿ ಇನ್ನೊಬ್ಬರ ಪಾಲಾಗುತ್ತದೆ ಎಂದು ಹೇಳುತ್ತಾರೆ.

      ಹಿಂದಿನ ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರು ವಿನಾಯಕ ನಗರ ಸ್ಲಂ ನಿವಾಸಿಗಳ ಮನವೊಲಿಸಿ ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡಿದ್ದರು. ರಾಜಗಾಲುವೆ ಪಕ್ಕದ ಕೊಳಚೆ ಜಾಗ ಮನುಷ್ಯರು ವಾಸ ಮಾಡಲು ಯೋಗ್ಯವಲ್ಲ, ಸ್ಥಳ ಖಾಲಿ ಮಾಡಿ, ಸುರಕ್ಷತ ಸ್ಥಳಕ್ಕೆ ಹೋಗಿ ಎಂದು ಹೇಳಿದ್ದರು. ನಾವು ಬೇರೆ ಕಡೆ ಹೋಗುವುದಿಲ್ಲ ಇದೇ ಜಾಗದಲ್ಲಿ ಮನೆ ಕಟ್ಟಿಸಿಕೊಡಿ ಎಂದಿದ್ದರು.

     ಮನೆಗಳನ್ನು ಕಟ್ಟಲು ಆ ಜಾಗ ಸುರಕ್ಷತವಾಗಿಲ್ಲ, ಯಾವುದೇ ಅವಘಡ ನಡೆದರೆ ಜಿಲ್ಲಾಡಳಿತ ಹೊಣೆಯಾಗಬೇಕಾಗುತ್ತದೆ ಎಂದು ಮನವೊಲಿಸಿ ಕೆಲವರಿಗೆ ದಿಬ್ಬೂರು ವಸತಿ ಸಂಕೀರ್ಣದಲ್ಲಿ ಮನೆ ಹಂಚಿಕೆ ಮಾಡಿದ್ದರು. ಆ ವೇಳೆ ಕೆಲವರಲ್ಲಿ ಆಧಾರ್ ಕಾರ್ಡ್, ಮತ್ತಿತರ ದಾಖಲಾತಿ ಇರಲಿಲ್ಲ. ಇದ್ದ ಕೆಲವರು ಮನೆ ಪಡೆಯಲು ಆಸಕ್ತಿ ತೋರಲಿಲ್ಲ. ಹೀಗಾಗಿ ಏಳೆಂಟು ಕುಟುಂಬಗಳು ಇದೇ ಸ್ಲಂನಲ್ಲಿ ಉಳಿದವು. ಈಗ ಅವರ ಜೊತೆಗೆ ಇನ್ನಷ್ಟು ಕುಟುಂಬಗಳು ಈ ಸ್ಲಂಗೆ ಬಂದು ಸೇರಿಕೊಂಡಿವೆ.

     ಆ ಸಂದರ್ಭದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಮತ್ತಿತರ ಮುಖಂಡರು ಸ್ಲಂ ನಿವಾಸಿಗಳ ಮನವೊಲಿಸುವ ಪ್ರಯತ್ನ ನಡೆಸಿದರೂ ಅದು ಯಶಸ್ವಿಯಾಗಲಿಲ್ಲ. ಕನಿಷ್ಟ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಆಂದೋಲನದ ರೀತಿ ಸ್ಲಂ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ದಾಖಲು ಮಾಡಿ ನೆರವಾಗಿದ್ದರು.

     ದಿಬ್ಬೂರಿಗೆ ಹೋಗದಿದ್ದರೆ ಬೇರೆ ಕಡೆ ನಿವೇಶನ ಹುಡುಕಿ ಇವರಿಗೆ ವಿತರಿಸಿ, ಅಗತ್ಯ ನೆರವು ನೀಡುವ ಬಗ್ಗೆಯೂ ಆಗಿನ ಡೀಸಿ ಮೋಹನ್‍ರಾಜ್ ಪ್ರಯತ್ನ ಮಾಡಿ, ನಗರ ಸಮೀಪದ ಅಣ್ಣೇನಹಳ್ಳಿ, ರಾಯರಪಾಳ್ಯದಲ್ಲಿ ನಿವೇಶಗಳನ್ನು ಅಭಿವೃದ್ಧಿಪಡಿಸಿ ವಿತರಿಸಲು ಮುಂದಾದಾಗ ವಿನಾಯಕ ನಗರದ ಸ್ಲಂ ನಿವಾಸಿಗಳು ಅಲ್ಲಿಗೂ ಹೋಗಲು ಹಿಂಜರಿದರು, ನಂತರ ಆ ನಿವೇಶನಗಳನ್ನು ಪೌರ ಕಾರ್ಮಿಕರು ಹಾಗೂ ಹಂದಿ ಜೋಗರಿಗೆ ವಿತರಿಸಲಾಯಿತು ಎಂದು ನರಸಿಂಹಮೂರ್ತಿ ಹೇಳಿದರು.

     ಜನವಾಸಕ್ಕೆ ಯೋಗ್ಯವಲ್ಲದ ಜಾಗದಿಂದ ಈ ನಿವಾಸಿಗಳನ್ನು ಸ್ಥಳಾಂತರಗೊಳಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಮಂಡಿಪೇಟೆಯ ಕೂಲಿಯೇ ಇವರ ಜೀವನಾಧಾರವಾಗಿರುವುದರಿಂದ ಅವರು ಅಲ್ಲಿಂದ ದೂರ ಹೋಗಲು ಬಯಸುತ್ತಿಲ್ಲ. ಆದರೂ ಅವರಲ್ಲಿ ಜಾಗೃತಿ ಮೂಡಿಸಿ, ಆದಾಯ ಮೂಲ ಒದಗಿಸಿ, ಮೂಲಸೌಕರ್ಯ ನೀಡಲು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ನರಸಿಂಹಮೂರ್ತಿ ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link