ಬೆಂಗಳೂರು,
ತಮ್ಮನ್ನು ಉಪಮುಖ್ಯಮಂತ್ರಿ ಮಾಡದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಶ್ರೀರಾಮುಲು ಅವರ ನಡವಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ. ತಮ್ಮ ಇಲಾಖೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸುವ ಕಾರ್ಯಕ್ರಮಗಳಿಂದ ರಾಮುಲು ದೂರ ಉಳಿದಿದ್ದಾರೆ.
ಸಕಾರಣವೆ ಇಲ್ಲದೆ ಕಾರ್ಯಕ್ರಮಗಳಿಂದ ದೂರ ಉಳಿದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಉಪ ಚುನಾವಣೆಯಲ್ಲಿ ಭಾರಿ ಗೆಲುವು ದೊರೆತಿದ್ದರೂ ಸಹ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶ್ರೀರಾಮುಲು ಅಭಿನಂದನೆ ಸಲ್ಲಿಸಿಲ್ಲ. ಈಚೆಗೆ ನಡೆದ ನಾಲ್ಕು ಪ್ರಮುಖ ಕಾರ್ಯಕ್ರಮಗಳಿಂದಲೂ ದೂರ ಉಳಿದಿದ್ದರು. ತಮ್ಮದೆ ಇಲಾಖೆ ವ್ಯಾಪ್ತಿಗೆ ಒಳಪಡುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ನೂತನ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು. ಶ್ರೀರಾಮುಲು ಪಾಲ್ಗೊಳ್ಳಲಿಲ್ಲ.
ಗುರುವಾರ ಆರೋಗ್ಯ ಇಲಾಖೆಯಿಂದ ದಾದಿಯರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಗುರುವಾರ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಿಂದಲೂ ದೂರ ಉಳಿದಿದ್ದರು. ಯಡಿಯೂರಪ್ಪ ಅವರು ಶುಕ್ರವಾರ ಇಲಾಖಾವಾರು ಕಾರ್ಯದರ್ಶಿಗಳ ಸಭೆ ಕರೆದಿದ್ದರು. ಈ ಸಭೆಗೂ ಬರಲಿಲ್ಲ. ಉಪಚುನಾವಣೆ ಫಲಿತಾಂಶದ ನಂತರ ಸಿಎಂ ಅವರಿಂದ ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದಾರೆಯೆ ಎನ್ನುವ ಸಂದೇಹ ಸಹಜವಾಗಿಯೆ ವ್ಯಕ್ತವಾಗಿದೆ.
ಉಪ ಚುನಾವಣೆ ಬಳಿಕ ತಮಗೆ ಉಪಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಶ್ರೀರಾಮುಲು ಇದ್ದರು. ಆದರೆ ಅಂತಹ ಯಾವುದೆ ಲಕ್ಷಣಗಳು ಕಂಡು ಬಂದಿಲ್ಲ. ಚುನಾವಣೆಯಲ್ಲಿ ಗೆದ್ದಿರುವ ರಮೇಶ್ ಜಾರಕಿಹೊಳಿ ಸಹ ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮನ್ನು ಡಿಸಿಎಂ ಹುದ್ದೆಗೆ ಪರಿಗಣಿಸುವ ಸಾಧ್ಯತೆಗಳಿಲ್ಲ ಎನ್ನುವುದನ್ನು ರಾಮುಲು ಮನಗಂಡಿದ್ದಾರೆ.
ಹೀಗಾಗಿಯೆ ಅವರು ತೀವ್ರ ಆಕ್ರೋಶಗೊಂಡಿದ್ದಾರೆ. ಶ್ರೀರಾಮುಲು ಉಪ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ. ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಣತಿಯಂತೆ ಶ್ರೀರಾಮುಲು ಸಕ್ರಿಯವಾಗಿ ಕೆಲಸ ಮಾಡಿದ್ದರು. ಆದರೂ ತಮ್ಮನ್ನು ಡಿಸಿಎಂ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಪ್ರಸ್ತಾಪಿಸದೇ ಇರುವುದು ಶ್ರೀರಾಮುಲು ಬೇಸರಕ್ಕೆ ಕಾರಣ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








