ದಾವಣಗೆರೆ:
ಹಿರೇಮಠ ವಂಶಸ್ಥರು, ಮಹಾದೈವದವರು, ಭಕ್ತರು ಹಾಗೂ ಶ್ರೀ ಡಾ.ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಹಿರೇಮಠ ಆಡಳಿತ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಾ.2ರಿಂದ 4ರ ವರೆಗೆ ಡಾ.ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿಯವರ 11ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸ್ವಾಮಿ ತ್ರಿಭುವನಂದ, ಮಾ.2ರಂದು ಸಂಜೆ 7 ಗಂಟೆಗೆ ಚನ್ನಗಿರಿ ಸಿಲಾಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಹಿಸುವರು. ಜೀವನ ಮೌಲ್ಯಗಳು ಕುರಿತು ನಿವೃತ್ತ ಪ್ರಾಚಾರ್ಯ ಡಾ.ನಾ.ಲೋಕೇಶ್ ಒಡೆಯರ್, ಧರ್ಮ ನಿರಪೇಕ್ಷತೆ ಕುರಿತು ಸಾಹಿತಿ ಎಸ್.ಟಿ.ಶಾಂತಗಂಗಾಧರ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಥಣಿ ಎಸ್. ವೀರಣ್ಣ, ವರ್ತಕ ಬಿ.ಸಿ.ಉಮಾಪತಿ, ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಮತ್ತಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮಾ.3ರ ಸಂಜೆ 7 ಗಂಟೆಗೆ ನೆಗಳೂರು ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್ ನಮ್ಮ ಸಂಸ್ಕತಿ ಮತ್ತು ಪರಂಪರೆ ಹಾಗೂ ಉಪನ್ಯಾಸಕಿ ಎ.ಜಿ.ಸುಮತಿ ಜಯಪ್ಪ ಉತ್ಕಷ್ಟ ಬದುಕಿಗಾಗಿ ಮಹಿಳೆಯರ ಪಾತ್ರ ಕುರಿತು ವಿಷಯ ಮಂಡಿಸಲಿದ್ದಾರೆಂದು ಹೇಳಿದರು.
ಮಾ.4ರಂದು ರಾತ್ರಿ 9 ಗಂಟೆಗೆ ಸಂಗೀತಯುಕ್ತ ಜಾಗರಣೆ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಶಾಮಭೋಗ ಹಾಗೂ ಶ್ರೀಗುರು ಪಂಚಾಕ್ಷರ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ವೃಂದ ಸಂಗೀತ ಹಾಗೂ ಶಿವಧ್ಯಾನ ನಡೆಸಿಕೊಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸ್ವಾಮಿ ವಿಶ್ವೇಶ್ವರನಂದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








