ಆರೋಗ್ಯಯುತ ಧಾನ್ಯಕ್ಕೆ ಹಸಿರೆಲೆ ಗೊಬ್ಬರ ಬಳಸಿ

ದಾವಣಗೆರೆ:

   ರೈತರು ಆರೋಗ್ಯಯುತ ಆಹಾರ ಧಾನ್ಯಗಳ ಉತ್ಪಾದನೆಗೆ ಹಸಿರೆಲೆ ಗೊಬ್ಬರ ಬಳಸುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಾಜ್ಯ ನೋಡಲ್ ಅಧಿಕಾರಿ ಡಾ. ಜಿ.ಆರ್.ಪೆನ್ನೋಬಳಸ್ವಾಮಿ ಕರೆ ನೀಡಿದರು.

   ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶನಿವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಸಮೇತಿ ದಕ್ಷಿಣ ವಲಯ), ಮ್ಯಾನೇಜ್ ಹೈದರಾಬಾದ್, ಕೃಷಿ ತಂತ್ರಜ್ಞರ ಸಂಸ್ಥೆ, ಪ್ರಾದೇಶಿಕ ಘಟಕ, ಕೃಷಿ ಇಲಾಖೆ ಆತ್ಮಯೋಜನೆ ವಿಭಾಗದಿಂದ ಕೃಷಿ ಪರಿಕರ ಮಾರಾಟಗಾರರಿಗಾಗಿ ಏರ್ಪಡಿದಿದ್ದ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಆರೋಗ್ಯಯುತ ಆಹಾರ ಧಾನ್ಯಗಳನ್ನು ಉತ್ಪಾದಿಸಬೇಕಾದರೆ, ರೈತರು ರಸಗೊಬ್ಬರ ಬಳಕೆಯಿಂದ ದೂರ ಉಳಿದು, ಹಸಿರೆಲೆ ಗೊಬ್ಬರದ ಕಡೆ ಗಮನಹರಿಸಬೇಕು. ಇದಕ್ಕೆ ಪ್ರೋತ್ಸಾಹ ನೀಡಲು ಕೃಷಿ ಪರಿಕರ ಮಾರಾಟಗಾರರು ಹಸಿರೆಲೆ ಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

    ಒಂದು ಎಕರೆ ಜಮೀನಿನಲ್ಲಿ ಹಸಿರೆಲೆ ಗೊಬ್ಬರ ತಯಾರಾದರೆ, 30 ಟನ್ ಸಾವಯವ ಗೊಬ್ಬರ ಭೂಮಿಗೆ ಸೇರಿದಂತಾಗುತ್ತದೆ. ಆರೋಗ್ಯಯುತ ಆಹಾರ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದ ಅವರು, ಅತಿಯಾದ ರಸಗೊಬ್ಬರ ಬಳಕೆಯಿಂದಾಗಿ ಮಣ್ಣು ಜೀವಸತ್ವವನ್ನೇ ಕಳೆದುಕೊಂಡಿದ್ದು, ಭೂಮಿಯಲ್ಲಿ ಕೃಷಿ ಉತ್ಪಾದನಾ ಶಕ್ತಿಯು ಕ್ಷೀಣಿಸಿದೆ. ಅಲ್ಲದೇ, ಯಾಂತ್ರಿಕೃತ ಕೃಷಿಯಿಂದಾಗಿ ದನಕರುಗಳು ಸಹ ಕಡಿಮೆ ಆಗಿರುವುದರಿಂದ ಭೂಮಿಗೆ ಸಾವಯವ ಗೊಬ್ಬರ ಕೊಡುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ರಸಗೊಬ್ಬರ ಬಳಸಿ ಬೆಳೆದ ಆಹಾರವನ್ನು ನಾವು ಬಳಸುವುದಿಲ್ಲ.

    ಬದಲಿಗೆ ಮಾರಾಟ ಮಾಡುತ್ತೇವೆ. ಆದ್ದರಿಂದ ನಮಗೆ ತೊಂದರೆ ಇಲ್ಲ ಎಂಬುದಾಗಿ ಹಲವರು ತಪ್ಪು ಭಾವಿಸಿದ್ದಾರೆ. ಆದರೆ, ಕೃಷಿಗೆ ರಸಗೊಬ್ಬರ ಬಳಸಿದ ರೈತರ ರಕ್ತದಲ್ಲಿಯೂ ಶೇ 30ರಷ್ಟು ವಿಷ ಇರುವುದು ಸಂಶೋಧನೆಯಯಿಂದ ತಿಳಿದು ಬಂದಿದೆ ಎಂದ ಅವರು, ದೇಶದಲ್ಲಿ ಅತಿ ಹೆಚ್ಚು ತರಬೇತಿ ನೀಡಿದ ಜಿಲ್ಲೆ ಎಂದು ದಾವಣಗೆರೆಯನ್ನು ಗುರುತಿಸಲಾಗಿದೆ. ಇಲ್ಲಿ 16 ಬ್ಯಾಚ್‍ಗಳಲ್ಲಿ 640 ಮಂದಿ ತರಬೇತಿ ಪಡೆದಿದ್ದಾರೆ. ದೇಶದಲ್ಲಿ ಒಟ್ಟು 250 ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಅದರಲ್ಲಿ 125 ಕರ್ನಾಟಕದಲ್ಲಿಯೇ ಆಗಿದೆ ಎಂಬುದು ರಾಜ್ಯದ ಹೆಮ್ಮೆ ಎಂದರು.

     ಪ್ರಸ್ತುತ ಯುವಜನರು ಕೃಷಿಯಿಂದ ವಿಮುಖರಾಗುತ್ತಿದ್ದು, ಉದ್ಯೋಗ ಅರಸಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಹಳೇ ತಲೆಮಾರಿನ ಜನರೇ ಕೃಷಿಯಲ್ಲಿ ತೊಡಗುವಂತಾಗಿದೆ. ಇಂದಿನ ಮಾರುಕಟ್ಟೆ ಯುಗದಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಮನೋಭಾವ ಬಲವಾಗಿದೆ. ಕೃಷಿಯಲ್ಲಿ ಆಧುನಿಕ ಹಾಗೂ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದಿರುವುದೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದರು.

       ಕೃಷಿಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದರೂ ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಅಲ್ಲದೆ, ವಿದ್ಯುತ್, ನೀರು, ಬಿತ್ತನೆ ಬೀಜ, ಗೊಬ್ಬರ ಹೀಗೆ ಕೃಷಿಗೆ ಅಗತ್ಯವಾದ ಪ್ರತಿಯೊಂದಕ್ಕೂ ರೈತರು ಪರಾವಲಂಬಿಯಾಗಬೇಕಾದ ಸ್ಥಿತಿ ಇದೆ. ನಗರ ಕೇಂದ್ರಿತ ಆರ್ಥಿಕತೆಯಿಂದಾಗಿ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರೂ ಸಿಗುತ್ತಿಲ್ಲ. ಆದ್ದರಿಂದ ಕೃಷಿಕರು ಸಾಧ್ಯವಾದಷ್ಟು ಕಡಿಮೆ ನಿರ್ವಹಣೆ, ಖರ್ಚಿಯಲ್ಲಿ ಬೆಳೆಯಬಹುದಾದ ಬೆಳೆಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

      ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ಡಾ.ಜಿ.ಈಶ್ವರಪ್ಪ ಮಾತನಾಡಿ, ಇವತ್ತು ಪ್ರಮಾಣ ಪತ್ರ ಪಡೆದವರು ರೈತರಿಗೆ ಅನ್ಯಾಯ ಮಾಡದೇ ಒಳ್ಳೆಯ ಪರಿಕರಗಳನ್ನು ನೀಡಿ, ವಿಷ ರಹಿತ ಬೆಳೆ ಬೆಳೆಯಲು ಸಹಕಾರ ನೀಡುವುದಾಗಿ ಪ್ರತಿಜ್ಞೆ ಮಾಡಬೇಕು. ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ರೈತ ಉತ್ಪದಕರ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ರಾಜ್ಯದಲ್ಲಿ ಸುಮಾರು 350 ಸಂಸ್ಥೆಗಳಿವೆ. ಜಿಲ್ಲೆಯಲ್ಲಿ 56 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.  ಕಾರ್ಯಕ್ರಮದಲ್ಲಿ ತಂತ್ರಜ್ಞರ ಸಂಸ್ಥೆಯ ಸಿರಿಯಣ್ಣ, ರಾಮಪ್ಪ, ಬಿ.ಉಮೇಶ್, ಲೋಕಿಕೆರೆ ನಾಗರಾಜ್, ಬಿ.ಜಿ. ರುದ್ರಪ್ಪ, ಹುಲ್ಲತ್ತಿ, ಅಜಗಣ್ಣ, ರಾಜಶೇಖರ, ಚಂದ್ರು, ಪ್ರಭಾಶಂಕರ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ