ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ : ವಾಸ್ತವವಾಗಿ ಕುಗ್ರಾಮಕ್ಕೂ ಕಡೆ..!

ತುಮಕೂರು

ವರದಿ:ರಾಕೇಶ್.ವಿ.

         ಮಳೆ ಬಂದರೆ ಕೊಚ್ಚೆ ನೀರು, ಬಡಾವಣೆಗಳಿಂದ ಹರಿಯುವ ಒಳಚರಂಡಿ ನೀರು, ಚರಂಡಿ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳು. ಇದು ಹೆಸರಿಗೆ ಮಾತ್ರ ಸ್ಮಾರ್ಟ್. ಆದರೆ ನಿಜವಾಗಿಯೂ ನರಕದ ಕೂಪವಾಗಿರುವ ಬಡಾವಣೆಯ ದುಸ್ಥಿತಿಯ ಬಗ್ಗೆ ಹೇಳತೀರದಾಗಿದೆ.

      ತುಮಕೂರು ನಗರದ 35ನೇ ವಾರ್ಡ್ ಹಾಗೂ 31, 32ನೇ ವಾರ್ಡ್‍ಗಳ ಸರಹದ್ದು ಪ್ರದೇಶದ ದುಸ್ಥಿತಿ ಇದಾಗಿದ್ದು, ಕಳೆದ ಹತ್ತಾರು ವರ್ಷಗಳ ಹಿಂದೆ ಮಾಡಿದ ಕೆಲಸಕ್ಕೆ ಪ್ರತಿಫಲ ಇಂದು ಅನುಭವಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳ ಹಿಂದೆ ಇದ್ದಂತಹ ರಾಜಗಾಲುವೆಯ ಹಳ್ಳವನ್ನು ಮುಚ್ಚಲಾಗಿ ಈಗ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ರಾಜಗಾಲುವೆ, ಚರಂಡಿಗಳು ಮುಚ್ಚಿ ಹೋಗಿದ್ದು, ಕಸ, ತ್ಯಾಜ್ಯ ತುಂಬಿಕೊಂಡಿದೆ. ಇದರಿಂದ ಮಳೆ ನೀರು, ಚರಂಡಿ ನೀರು ರಸ್ತೆ ಮೇಲೆ ಹರಿದು ಕೆಲ ಕಡೆ ಬಡಾವಣೆ ಉದ್ಯಾನ, ರಸ್ತೆಗಳು, ಮನೆಗಳಿಗೆ ನೀರು ನುಗ್ಗಿದೆ.

     ಬಟವಾಡಿಯಿಂದ ಶೆಟ್ಟಿಹಳ್ಳಿ ರಿಂಗ್‍ರಸ್ತೆಗೆ ಸಂಪರ್ಕ ಕಲ್ಪಿಸುವ 60 ಅಡಿ ರಸ್ತೆ ಇದಾಗಿದ್ದು, ಕಿಡ್ಸ್ ಇಂಟರ್‍ನ್ಯಾಷನಲ್ ಶಾಲೆಗೆ ಹೋಗುವ ವೃತ್ತದಲ್ಲಿ ಸಣ್ಣಪುಟ್ಟ ವ್ಯವಹಾರ ಮಳಿಗೆಗಳು ಇವೆ. ಈ ಮಳಿಗೆಗಳ ಕೆಳಭಾಗದಲ್ಲಿ ಈ ಮುಂಚೆ ರಾಜಕಾಲುವೆ ಹರಿಯುತ್ತಿತ್ತು. ಪಕ್ಕದಲ್ಲಿನ ಸರ್ವೇ ನಂ 66ರ ಮುಂಭಾಗದಲ್ಲಿ ಸರ್ಕಾರದ ಕರಾಬ್ ಜಾಗದಲ್ಲಿ ಈ ಚರಂಡಿಯು ಹರಿಯುತ್ತಿತ್ತು. ಕ್ರಮೇಣ ಅಲ್ಲಿ ಮನೆಗಳ ನಿರ್ಮಾಣ ಮಾಡುವ ವೇಳೆಗೆ ಟೂಡಾದಿಂದ ಸರ್ವೇ ಮಾಡಿಸಿ ಮನೆ ಹಾಗೂ ಅಂಗಡಿಗಳ ನಿರ್ಮಾಣ ಮಾಡಲು ಅನುಮತಿ ಪಡೆದು ಅಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಅಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮಾತ್ರ ಮಾಡದೇ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

       ಈ ರಸ್ತೆಯಲ್ಲಿ ಹರಿಯುವ ಚರಂಡಿಗೆ ಸಿದ್ದರಾಮೇಶ್ವರ ಬಡಾವಣೆ, ಮಂಜುನಾಥನಗರ, ಗೋಕುಲ ಬಡಾವಣೆ, ಬಡ್ಡಿಹಳ್ಳಿ, ಮಹಾಲಕ್ಷ್ಮಿ ನಗರ, ಕಾಕನತೋಟದಿಂದ ಒಳಚರಂಡಿ ನೀರು ಬರುತ್ತದೆ. ಇಲ್ಲಿಂದ ಶೆಟ್ಟಿಹಳ್ಳಿ ಕೆರೆಗೆ ಹರಿಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಚರಂಡಿಗಳು ಬ್ಲಾಕ್ ಆಗಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಚರಂಡಿಯಲ್ಲಿ ನೀರು ನಿಂತುಕೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈ ಬಗ್ಗೆ ಈ ಹಿಂದಿನ ಶಾಸಕರ ಗಮನಕ್ಕೂ ತರಲಾಗಿತ್ತು. ಪಾಲಿಕೆ ಆಯುಕ್ತರಿಗೂ ಮಾಹಿತಿ ನೀಡಲಾಗಿತ್ತು. ಆದರೆ ಯಾರೊಬ್ಬರು ಇತ್ತ ಗಮನವೇ ಹರಿಸಲಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಖಾಸಗಿ ವ್ಯಕ್ತಿಗಳೊಂದಿಗೆ ಟೂಡಾ ಅಧಿಕಾರಿಗಳು ಶಾಮೀಲು:

       ಈ ಹಿಂದೆ ಇದ್ದಂತಹ ಟೂಡಾ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಡನೆ ಶಾಮೀಲಾಗಿ ಕೆಲವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಇದ್ದಂತಹ ರಾಜಕಾಲುವೆಗಳು ಮುಚ್ಚಿಹೋಗಿವೆ. ಅದೇ ಕಾಲುವೆಗಳ ಅಭಿವೃದ್ಧಿ ಮಾಡಿದ್ದಲ್ಲಿ ಇಂದು ಕೊಚ್ಚೆ ನೀರಿನ ಸಮಸ್ಯೆ ಬರುತ್ತಿರಲಿಲ್ಲ ಎಂಬುದು ಸ್ಥಳೀಯರ ಮಾತುಗಳಾಗಿವೆ.

ನಿಂತ ಕೊಚ್ಚೆ ನೀರು

  ಸಿದ್ದರಾಮೇಶ್ವರ ಬಡಾವಣೆಯಿಂದ ಪ್ರಮುಖ ರಸ್ತೆಯ ಮೂಲಕ ಹಾದು ಹೋಗಿರುವ ಚರಂಡಿಯ ಅಳತೆ ಚಿಕ್ಕದಾಗಿದ್ದು, ನೀರು ಸರಾಗವಾಗಿ ಹರಿಯದೆ, ಒಂದೇ ಕಡೆ ನಿಂತು ಕೊಂಡಿದ್ದು, ಈ ಸುತ್ತಮುತ್ತಲ ಓಡಾಡುವ ಜನ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ರಸ್ತೆಯ ಪಕ್ಕದಲ್ಲೇ ಚರಂಡಿ ಇದ್ದು, ಇನ್ನೊಂದು ಕಡೆಗಳಲ್ಲಿ ವ್ಯಾಪಾರ ಮಾಡುವವರು ಮೂಗು ಮುಚ್ಚಿಕೊಂಡು ವ್ಯಾಪಾರ ನಡೆಸುತ್ತಾರೆ.

ಹೆಚ್ಚುತ್ತಿರುವ ಸೊಳ್ಳೆಗಳ ಸಂತಾನೋತ್ಪತ್ತಿ

     ಇತ್ತೀಚೆಗೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳು ಕೂಡ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಇಲ್ಲಿ ಅದ್ಯಾವುದಕ್ಕೂ ಬೆಲೆ ಇಲ್ಲಂದಂತಾಗಿದ್ದು, ಸೊಳ್ಳೆಗಳು ಕೊಚ್ಚೆಯನ್ನೆ ಆವಾಸ ಸ್ಥಾನವನ್ನು ನಿರ್ಮಾಣ ಮಾಡಿಕೊಂಡಿವೆ. ಗುಂಪು ಗುಂಪಾಗಿ ಸೊಳ್ಳೆಗಳು ವಾಸ ಮಾಡುತ್ತಿದ್ದು, ಸುತ್ತಮುತ್ತಲಿನ ಜನರು ಆತಂಕದಲ್ಲಿ ಜೀವನ ಮಾಡುವ ಪರಿಸ್ಥಿತಿಯಲ್ಲಿದ್ದಾರೆ.

ಚರಂಡಿಯ ಮಾರ್ಗ ಬದಲಿಸಿದ ಅಧಿಕಾರಿಗಳು

       ರಸ್ತೆಯ ಎಡಭಾಗದಲ್ಲಿದ್ದ ಚರಂಡಿ ಮುಂದಕ್ಕೆ ಸಾಗಬೇಕಾದುದನ್ನು ಅಡ್ಡಗಟ್ಟಿ ರಸ್ತೆಯ ಬಲಭಾಗಕ್ಕೆ ಸಂಪರ್ಕ ಕಲ್ಪಿಸಿ ಅಲ್ಲಿಂದ ಯೂ ಟರ್ನ್ ತೆಗೆದುಕೊಳ್ಳುವಂತೆ ಮಾಡಲಾಗಿದೆ. ಒಂದೇ ಮೋರಿಯಲ್ಲಿ ಎರಡು ಪೈಪುಗಳನ್ನು ಹಾಕುವ ಮೂಲಕ ಸಿದ್ದರಾಮೇಶ್ವರ ಬಡಾವಣೆಯಿಂದ ಬರುವ ಕೊಚ್ಚೆ ನೀರು ಪಕ್ಕದ ಪೈಪಿನಿಂದ ಶೆಟ್ಟಿಹಳ್ಳಿ ಕೆರೆ ಕಡೆಗೆ ಸಾಗುವಂತೆ ಮಾಡಿರುವುದು ತುಂಬಾ ಅವೈಜ್ಞಾನಿಕವಾಗಿದೆ.

ದೂರವಾಣಿಗೆ ಸಿಗದ ಆಯುಕ್ತರು:

       ಮಹಾನಗರ ಪಾಲಿಕೆ ಆಯುಕ್ತರು ಸಾರ್ವಜನಿಕರ ಕರೆಗೆ ಸಿಗುವುದೇ ಇಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಯಾವುದೇ ಮಾಹಿತಿ ಕೇಳಲಾದರೂ ಅಥವಾ ಸಮಸ್ಯೆ ಬಗ್ಗೆ ಹೇಳಲಾದರೂ ಕರೆ ಮಾಡಿದರೆ ಕರೆಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಕಚೇರಿಗೆ ತೆರಳಿದರೂ ಅಲ್ಲಿಯೂ ಸಿಗುವುದಿಲ್ಲ. ಅಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಬರುತ್ತಾರೆ ಎಂದಷ್ಟೇ ಉತ್ತರ ನೀಡುತ್ತಾರೆ ಹೊರತು, ನಿಖರವಾದ ಮಾಹಿತಿ ನೀಡುವುದಿಲ್ಲ. ಸಮಸ್ಯೆಗಳನ್ನು ಹೊತ್ತು ತರುವ ಜನ ಗಂಟೆಗಟ್ಟಲೆ ಕಾಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.


    ಮೊದಲಿದ್ದ ರಾಜಗಾಲುವೆ ಒತ್ತುವರಿಯಾಗಿದೆ. ನಾಲ್ಕುವರೆ ಅಡಿ ಅಗಲ ಇದ್ದ ಚರಂಡಿಯನ್ನು ಮೂರು ಅಡಿಗೆ ತಗ್ಗಿಸಲಾಗಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದು, ಓಡಾಡುವ ಜನರಿಗೆ ತೀವ್ರತರವಾಗಿ ಕಿರಕಿರಿ ಉಂಟಾಗಿದೆ. ಚರಂಡಿ ನೀರು ಬಡಾವಣೆಯ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಹಲವು ಬಾರಿ ಪಾಲಿಕೆಗೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಸ್ಮಾರ್ಟ್ ಸಿಟಿ ಎಂಬುದು ಕೇವಲ ಐದಾರು ವಾರ್ಡ್‍ಗಳಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ.

ಜಯಪ್ರಕಾಶ್, ಸಿದ್ದರಾಮೇಶ್ವರ ಬಡಾವಣೆ


    ರಾಜಕಾಲುವೆ ಮುಚ್ಚಿಹೋಗಿದೆ. ಚರಂಡಿ ಅವ್ಯವಸ್ಥೆ ಆಗಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಬಂದ ಮಳೆಗೆ ನೀರು ಹರಿದು ರಸ್ತೆ ಮೇಲೆ ನುಗ್ಗಿದೆ. ಈ ಬಗ್ಗೆ ಪಾಲಿಕೆ ಎಂಜಿನಿಯರ್‍ಗಳಿಗೆ ಮಾಹಿತಿ ನೀಡಲು ಕರೆ ಮಾಡಿದರೂ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಗುರುವಾರದಂದು ಬೆಳಗ್ಗೆ ಪಾಲಿಕೆಯಿಂದ ಸಿಬ್ಬಂದಿ ಆಗಮಿಸಿ ದುರಸ್ಥಿ ಮಾಡುತ್ತಿದ್ದಾರೆ.

ಶಿವಕುಮಾರ, ಪಾಲಿಕೆ ಸದಸ್ಯೆ ನಿರ್ಮಲಾ ಅವರ ಪತಿ


   ನರಕಕ್ಕೆ ನಾಲ್ಕೆ ಅಡಿಗಳ ದೂರವಿರುವಂತೆ ನಾವು ಇಲ್ಲಿ ಜೀವನ ಮಾಡುತ್ತಿದ್ದೇವೆ. ನೋಡುವುದಕ್ಕೆ ಮಾತ್ರ ಚಂದವಾಗಿ ಕಾಣುವ ಬಡಾವಣೆಗಳಲ್ಲಿ ಯಾವೊಂದು ಚರಂಡಿಯೂ ಸ್ವಚ್ಛವಾಗಿಲ್ಲ. ಇರುವ ಚರಂಡಿಗಳು ಕೊಚ್ಚೆ ನೀರಿನಿಂದ ತುಂಬಿಕೊಂಡು ಗಬ್ಬು ನಾರುತ್ತಿವೆ. ಈ ಬಗ್ಗೆ ಸಂಪೂರ್ಣ ದಾಖಲೆಗಳೊಂದಿಗೆ ಮನವಿಯನ್ನು ಈ ಹಿಂದಿನ ಆಯುಕ್ತರಿಗೆ ನೀಡಿ ಒಂದು ವರ್ಷವಾದರೂ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಮನ ಹರಿಸಿಲ್ಲ. ಕೇಳಿದರೆ ಈ ರಸ್ತೆಯ ಪ್ಲಾನ್ ಹಾಗೂ ಲೇಔಟ್‍ನ ಪ್ಲಾನ್ ಕೊಡಿ ಎಂದು ನಮಗೇ ಕೇಳುತ್ತಾರೆ! ಜನರ ಸಮಸ್ಯೆಗಳು ಅರಿಯದೆ ಆಡಳಿತ ಮಾಡುತ್ತಾರಾ? ತುಮಕೂರು ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿಯಾಗುತ್ತಿದೆ ಹೊರತು, ನಿಜಕ್ಕೂ ಇದು ಕುಗ್ರಾಮಕ್ಕಿಂತಲೂ ಕಡೆಯಾಗಿದೆ.

ಮರಿಬಸಪ್ಪ, 32ನೇ ವಾರ್ಡ್ ನಿವಾಸಿ


 

Recent Articles

spot_img

Related Stories

Share via
Copy link