ತುಮಕೂರು
ಸ್ಮಾರ್ಟ್‍ಸಿಟಿ ಯೋಜನೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಕಂಪನಿ ಸಂಗ್ರಹಿಸಿಟ್ಟಿದ್ದ ಪೈಪ್‍ಗಳಿಗೆ ದಿಢೀರನೆ ಬೆಂಕಿ ಹೊತ್ತಿಕೊಂಡು, ಆ ಸಾಮಗ್ರಿಗಳು ಧಗಧಗನೆ ಹೊತ್ತಿ ಉರಿದ ಪ್ರಸಂಗ ತುಮಕೂರು ನಗರದಲ್ಲಿ ನಡೆದಿದೆ.
ನಗರದ ಡಾ.ಎಸ್.ರಾಧಾಕೃಷ್ಣನ್ ರಸ್ತೆಯ ತುದಿಯಲ್ಲಿ ಡಿ.ಡಿ.ಪಿ.ಐ. ಕಚೇರಿ ಸನಿಹದಲ್ಲಿ (ಮೇಲ್ಸೇತುವೆ ಕೆಳಭಾಗ) ಇರುವ ಖಾಲಿ ಜಾಗದಲ್ಲಿ ದಾಸ್ತಾನು ಮಾಡಲಾಗಿದ್ದ ಪಿ.ವಿ.ಸಿ. ಪೈಪ್‍ಗಳಿಗೆ ಬುಧವಾರ ಮುಂಜಾನೆ ಸುಮಾರು 2 ಗಂಟೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ವಿಸ್ತರಿಸಿ ಅವೆಲ್ಲವೂ ಧಗಧಗನೆ ಉರಿದಿದೆ.
ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬಂದರೂ ಬೆಂಕಿಯನ್ನು ಆರಿಸಲು ಸಾಧ್ಯವಾಗಲಿಲ್ಲವೆನ್ನಲಾಗಿದೆ. ಅಷ್ಟರೊಳಗೆ ಸುಮಾರು ನಾಲ್ಕು ಲಾರಿ ಲೋಡ್‍ಗಳಷ್ಟಿದ್ದ ಪೈಪುಗಳು ಹೊತ್ತಿ ಉರಿದುಹೋಗಿವೆ. ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಉಂಟಾಗಿದ್ದು, ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪೈಪ್‍ಗಳನ್ನು ಸ್ಮಾರ್ಟ್‍ಸಿಟಿ ಕಂಪನಿಯ ವಿವಿಧ ಕಾಮಗಾರಿಗಾಗಿ ಗುತ್ತಿಗೆದಾರರು ಸಂಗ್ರಹಿಸಿಟ್ಟಿದ್ದರೆನ್ನಲಾಗಿದೆ. ಗುತ್ತಿಗೆದಾರರು ಯಾರು? ಎಷ್ಟು ನಷ್ಟವಾಗಿದೆ? ಬೆಂಕಿ ಹೊತ್ತಿದ್ದು ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಕೃತ್ಯವೋ? ಎಂಬಿತ್ಯಾದಿ ವಿವರ ಸದ್ಯಕ್ಕೆ ಲಭಿಸಿಲ್ಲ. ಒಂದು ಮೂಲದ ಪ್ರಕಾರ ಸುಮಾರು 10 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆಯೆನ್ನಲಾಗಿದೆ. ಬುಧವಾರ ಮಧ್ಯಾಹ್ನ 3-30 ರವರೆಗೂ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾರೂ ಸಹ ದೂರು ನೀಡಿರಲಿಲ್ಲವೆಂದು ತಿಳಿದುಬಂದಿದೆ. ನಗರದ ಹೊಸಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಮಾರ್ಟ್‍ಸಿಟಿ ಕಾಮಗಾರಿಗಳ ಅವೈಜ್ಞಾನಿಕ ಅನುಷ್ಠಾನ ಮತ್ತು ವಿಳಂಬ ಗತಿಯ ಕಾಮಗಾರಿಗಳ ಬಗ್ಗೆ ಇತ್ತೀಚೆಗೆ ವ್ಯಾಪಕ ಟೀಕೆಗಳು ಎದುರಾಗುತ್ತಿವೆ. ಸಭೆಗಳಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಫಲ್ಯದ ವಿರುದ್ಧ ಜನತೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ದಾಸ್ತಾನು ಮಾಡಲಾಗಿದ್ದ ಪಿವಿಸಿ ಪೈಪ್‍ಗಳು ಬೆಂಕಿಗೆ ಆಹುತಿಯಾಗಿರುವುದು ಮತ್ತಷ್ಟು ಅಸಮಾದಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಮತ್ತು ಅನುಷ್ಠಾನ ಯಾವ ರೀತಿಯಲ್ಲಿವೆ ಎಂಬುದನ್ನು ಊಹಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ