ತುಮಕೂರು:
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅದ್ವಾನ ಮತ್ತು ಅವ್ಯವಸ್ಥೆಗಳ ಬಗ್ಗೆ ಎಷ್ಟು ಬರೆದರೂ ಸಾಕಾಗುತ್ತಿಲ್ಲ. ಕಾಮಗಾರಿಗಳಿಂದ ನೊಂದ ಸಾರ್ವಜನಿಕರು, ಇದನ್ನು ಹತ್ತಿರದಿಂದ ಗಮನಿಸುತ್ತಿರುವ ನಿವೃತ್ತ ತಜ್ಞರು ಒಳಂದೊಳಗೆ ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಪತ್ರಿಕಾ ಕಛೇರಿಗೆ ಕರೆ ಮಾಡಿ ನೀವೇ ಏನಾದರೂ ಬರೆದು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಿ ಎಂದು ಕೇಳುತ್ತಿದ್ದಾರೆ.
ನಗರದ ಅಶೋಕ ರಸ್ತೆಯನ್ನು ಒಮ್ಮೆ ಸುತ್ತುವರಿದು ಬಂದಾಗ ಕಾಮಗಾರಿಯ ಅವ್ಯವಸ್ಥೆಗಳು ಕಂಡು ಬರುತ್ತವೆ. ಬಿಜಿಎಸ್ ವೃತ್ತದಿಂದ ಆರಂಭಗೊಂಡು ಕೋಟೆ ಆಂಜನೇಯಸ್ವಾಮಿ ದೇವಾಲಯದ ಪೋಸ್ಟ್ ಆಫೀಸ್‍ವರೆಗೆ ಈ ರಸ್ತೆಯನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿಗೆ ಅಳವಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯ ರಸ್ತೆಯೂ ಒಳಗೊಂಡು ಒಟ್ಟು 16 ಕೋಟಿ ರೂ.ಗಳ ವೆಚ್ಚದ ಈ ಕಾಮಗಾರಿ ಈಗ ಪ್ರಗತಿಯಲ್ಲಿದೆ.
ರಸ್ತೆಯ ಒಂದು ಮಗ್ಗುಲಲ್ಲಿ ಯುಟಿಲಿಟಿ ಛೇಂಬರ್ ಅಳವಡಿಸುವ ಕಾರ್ಯ ಆರಂಭವಾಗಿ ಸುಮಾರು ದಿನಗಳೇ ಕಳೆದಿವೆ. ಚರ್ಚ್ ಸರ್ಕಲ್ ಕಡೆಯಿಂದ ಸಾವಿತ್ರಮ್ಮ ಛತ್ರದವರೆಗೆ ಈ ಕಾಮಗಾರಿ ನಡೆಯುತ್ತಾ ಸಾಗಿದೆ. ಇದರೊಳಗೆ ವಿವಿಧ ಪೈಪ್‍ಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸುವ ಕಾರ್ಯ ಯೋಜನೆ ಇದೆ. ಒಂದು ವರ್ಷದೊಳಗೆ ಈ ಎಲ್ಲ ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ ಇದು ಮಳೆಗಾಲದ ಸಮಯವಾಗಿರುವ ಕಾರಣ ರಸ್ತೆ ಬದಿಯಲ್ಲಿ ನಡೆದಿರುವ ಅಗೆತ ಕಾಮಗಾರಿ ಈಗ ಅಯೋಮಯವಾಗಿದೆ.
ಬೇಸಿಗೆ ದಿನಗಳಲ್ಲಿ ಅಥವಾ ಮಳೆಗಾಲ ರಹಿತ ದಿನಗಳ ಸಂದರ್ಭದಲ್ಲಿ ನಡೆಯಬೇಕಾದ ಈ ಕಾಮಗಾರಿ ಈಗ ಮಳೆಗಾಲದಲ್ಲಿ ನಡೆಯುತ್ತಿರುವುದರಿಂದ ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದೆ. ಅಗೆದ ಗುಂಡಿಯ ಮಣ್ಣನ್ನು ರಸ್ತೆಗೆ ಹಾಕಿರುವುದರಿಂದ ಒಂದು ಭಾಗದಲ್ಲಿ ರಸ್ತೆ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ. ಬಹಳ ಪ್ರಮುಖ ರಸ್ತೆ ಇದಾಗಿರುವುದರಿಂದ ಇಲ್ಲಿ ವಾಹನಗಳ ಓಡಾಟ ಹೆಚ್ಚು. ಈ ರಸ್ತೆಯಲ್ಲಿ ರೆಡ್‍ಕ್ರಾಸ್ ಬಿಲ್ಡಿಂಗ್, ಬ್ಯಾಂಕುಗಳು, ಖಾದಿ ಭಂಡಾರ, ಜೆಡಿಎಸ್ ಕಚೇರಿ, ಸಾವಿತ್ರಮ್ಮ ಛತ್ರ, ವಿವಿಧ ಹೋಟೆಲ್‍ಗಳು, ಲಾಡ್ಜ್‍ಗಳು ಸೇರಿದಂತೆ ಅನೇಕ ವಾಣಿಜ್ಯ ವಹಿವಾಟು ನಡೆಸುವ ಅಂಗಡಿಗಳಿವೆ.
ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ವ್ಯಾಪಾರ ವಹಿವಾಟು ಬಂದ್ ಆಗಿದೆ. ಅನೇಕ ಅಂಗಡಿಗಳಿಗೆ ಈಗ ವ್ಯಾಪಾರವೇ ಇಲ್ಲದಂತಾಗಿದೆ. ಇದು ಹೋಗಲಿ ಅಲ್ಲಿ ಪ್ರತಿದಿನ ಏಳುವ ಧೂಳು ಸುತ್ತಮುತ್ತಲ ಅಂಗಡಿಗಳಿಗೆಲ್ಲಾ ವ್ಯಾಪಿಸಿ ಕೆಲಸ ಮಾಡುವವರು ಮೂಗು ಮುಚ್ಚಿಕೊಂಡು ಕಚೇರಿ ಕೆಲಸಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಧೂಳು ಕೆಳಭಾಗದಿಂದ ಆರಂಭವಾಗಿ ಮಹಡಿ ಮೇಲಿರುವ ಕಚೇರಿಗಳಿಗೂ ವ್ಯಾಪಿಸುತ್ತಿದೆ.
ಈ ಕಾಮಗಾರಿಗಳನ್ನು ಯಾವಾಗ ಹೇಗೆ ಆರಂಭಿಸಬೇಕು ಎಂಬ ಬಗ್ಗೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವವರು ಇಲ್ಲಿ ಹೆಚ್ಚಾಗಿ ತಲೆ ಹಾಕುತ್ತಿಲ್ಲ. ವಿಳಂಬ ಗತಿಯ ಕಾಮಗಾರಿಯಿಂದಾಗಿ ನಿಗದಿತ ವಾಯಿದೆಯೊಳಗೆ ಮುಗಿಯಲು ಸಾಧ್ಯವಾಗದೆ ಇನ್ನೂ ಬಹಳ ತಿಂಗಳ ಕಾಲ ಈ ರಸ್ತೆಯಲ್ಲಿ ಜನ ಧೂಳು ಕುಡಿದುಕೊಂಡೇ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ.
ಯುಟಿಲಿಟಿ ಛೇಂಬರ್‍ಗಾಗಿ ರಸ್ತೆ ಅಗೆತ ಕಾಮಗಾರಿ ನಡೆಯುತ್ತಿದ್ದು, ಇದು ನಿಧಾನ ಗತಿಯಲ್ಲಿ ನಡೆಯಲು ಅನೇಕ ಅಡಚಣೆಗಳು ಎದುರಾಗಿವೆ. ಈ ಹಿಂದೆ ಇಲ್ಲೆಲ್ಲ ಭೂಮಿಯೊಳಗೆ ಅಳವಡಿಸಿರುವ ಕೇಬಲ್‍ಗಳು, ಪೈಪ್‍ಗಳು ಅಡ್ಡಾದಿಡ್ಡಿ ಅಳವಡಿಸಲಾಗಿದೆ. ಪ್ರತಿಯೊಂದನ್ನೂ ಗಮನಿಸಿಯೇ ಕಾಮಗಾರಿ ನಿರ್ವಹಿಸಬೇಕು. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಕೇಬಲ್‍ಗಳಿಗೆ ಹಾನಿಯಾಗುತ್ತದೆ. ಪೈಪ್‍ಗಳು ಒಡೆದು ಹೋಗುತ್ತವೆ. ಕಳೆದ ನಾಲ್ಕೈದು ದಿನಗಳ ಹಿಂದೆ ಕಾಮಗಾರಿ ನಡೆಯುವಾಗ ಕೇಬಲ್‍ಗೆ ತಾಕಿ ಬೆಂಕಿ ಹೊತ್ತಿಕೊಂಡ ಪ್ರಸಂಗವೂ ನಡೆದಿದೆ. ಈ ಹಿಂದೆ ನಗರಸಭೆಯಿಂದ ಕಾಮಗಾರಿಗಳು ನಡೆದಿದ್ದು, ನಿಯಮಿತವಾಗಿ ರಸ್ತೆಯ ಕೊನೆಯ ಭಾಗದಲ್ಲಿ ಪೈಪ್‍ಗಳನ್ನು, ಕೇಬಲ್‍ಗಳನ್ನು ಅಳವಡಿಸಿಲ್ಲ. ಕಾಮಗಾರಿ ನಿಧಾನಕ್ಕೆ ಇದೂ ಸಹ ಅಡಚಣೆ ಉಂಟು ಮಾಡುತ್ತಿದೆ.
ಇದೀಗ ಮಳೆಗಾಲವಾಗಿರುವುದರಿಂದ ರಸ್ತೆ ಅಗೆತದ ಗುಂಡಿಯೊಳಗೆ ಪ್ರತಿದಿನ ನೀರು ಸಂಗ್ರಹಣೆಯಾಗುತ್ತಿದೆ. ಮೋಟಾರ್ ಮೂಲಕ ನೀರನ್ನು ಎತ್ತುವಳಿ ಮಾಡಿ ಕಾಮಗಾರಿ ನಿರ್ವಹಣೆ ಮಾಡಬೇಕು. ಹೀಗೆ ಮಾಡುವಾಗ ಮಣ್ಣು ಕುಸಿತವೂ ಉಂಟಾಗುತ್ತಿದೆ. ವಾಹನಗಳ ಓಡಾಟಕ್ಕೆ ಸಣ್ಣ ದಾರಿಯಾಗಿದ್ದು, ಮಣ್ಣು ಹಾಗೂ ನೀರು ರಸ್ತೆಗೆ ಹರಿಯುವುದರಿಂದ ಜಾಗರೂಕತೆಯಿಂದ ಓಡಾಡಬೇಕಾದ ಪರಿಸ್ಥಿತಿ ಇದೆ.
ಸ್ಮಾರ್ಟ್ ಸಿಟಿ ಕಾಮಗಾರಿ ನಿರ್ವಹಣೆಯ ಹಿಂದೆ ಉನ್ನತ ಮಟ್ಟದ ಅಧಿಕಾರಿಗಳು ಇರುತ್ತಾರೆ. ಇವರೆಲ್ಲ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಲು ಮುಂದಾಗಬೇಕು. ಆದರೆ ಅಧಿಕಾರಿಗಳು ಎಲ್ಲಿಯೋ ಇದ್ದಾರೆ. ಕಾಮಗಾರಿಗಳನ್ನು ಯಾರೋ ನಿರ್ವಹಿಸುತ್ತಿದ್ದಾರೆ. ಅಂತೂ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಹೇಗೆ ನಡೆಯುತ್ತಿವೆ? ಹೇಗೆ ನಡೆಯಬೇಕಿತ್ತು ಎಂಬ ಮಾಹಿತಿ ಮಾತ್ರ ಯಾರಲ್ಲೂ ಇಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
