ತುಮಕೂರು:

ತುಮಕೂರಿನ ಬಹುತೇಕ ಕಡೆಗಳಲ್ಲಿ ರಸ್ತೆಗಳನ್ನು ಅಗೆದು ಬಿಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 17 ಸ್ಮಾರ್ಟ್ ರಸ್ತೆಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಆ ಯೋಜನೆ ಅನ್ವಯ ಕಾಮಗಾರಿಗಳು ನಡೆಯುತ್ತಿವೆ. 6 ವಾರ್ಡ್‍ಗಳಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಡೆಯುತ್ತಿವೆಯಾದರೂ ಈ ಕಾಮಗಾರಿಗಳು ಸ್ಮಾರ್ಟ್‍ಸಿಟಿ ವ್ಯಾಪ್ತಿಗೆ ಒಳಪಡುತ್ತವೋ ಅಥವಾ ನಗರ ಪಾಲಿಕೆಯ ಕಾಮಗಾರಿಗಳೋ ಎಂಬ ಗೊಂದಲ ಶುರುವಾಗಿದೆ. ಏಕೆಂದರೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳದಲ್ಲಿ ಯಾವ ಮಾಹಿತಿಗಳೂ ಲಭ್ಯವಾಗುತ್ತಿಲ್ಲ.
ರಸ್ತೆ ಬದಿಯಲ್ಲಿ ಯುಟಿಲಿಟಿ ಛೇಂಬರ್‍ಗಳನ್ನು ಅಳವಡಿಸಲು ಗುಂಡಿ ತೆಗೆಯಲಾಗಿದೆ. ಕೆಲವು ಕಡೆ ಈಗಾಗಲೇ ಇವುಗಳನ್ನು ಮುಚ್ಚಿದ್ದು ಮತ್ತೆ ಕೆಲವು ಕಡೆ ತೆರೆದ ಹಾಗೆಯೇ ಇವೆ. ಈ ಛೇಂಬರ್‍ಗಳ ಮೂಲಕವೇ ವಿವಿಧ ತರಹದ ಪೈಪ್‍ಲೈನ್ ಹಾದು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ.
ನಿರಂತರ ನೀರು ಸರಬರಾಜು ಪೈಪ್‍ಲೈನ್, ಬಿಎಸ್‍ಎನ್‍ಎಲ್ ಕೇಬಲ್, ವಿದ್ಯುತ್, ಗ್ಯಾಸ್ ಸಂಪರ್ಕ, ಜಿಯೋ ನೆಟ್‍ವರ್ಕ್ ಸಂಪರ್ಕ ಹೀಗೆ ಹಲವು ಪೈಪ್‍ಲೈನ್‍ಗಳು ಹಾದು ಹೋಗುವುದರಿಂದ ಮುಂಜಾಗರೂಕತೆ ಹೆಚ್ಚು ಇರಬೇಕು. ಇಲಾಖೆಗಳ ನಡುವೆ ಪರಸ್ಪರ ಸಹಕಾರ ಇರಬೇಕು. ಯಾವುದೇ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಹೋಗಿ ನೋಡಿದರೂ ಇಲ್ಲಿ ಯಾವ ಪೈಪ್‍ಲೈನ್ ಹೋಗುತ್ತಿದೆ? ಯಾವ ಇಲಾಖೆಯ ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಜನರಲ್ಲಿ ಎದುರಾಗಿರುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.
ಈಗಾಗಲೇ ಹಲವು ಕಡೆ ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿವೆ ಎಂದು ಹೇಳಲಾಗುತ್ತಿದೆ. ಮತ್ತೆ ಕೆಲವು ಕಡೆ ಕಾಮಗಾರಿಗಳೇ ನಡೆಯುತ್ತಿಲ್ಲ. ಬಹುಪಯೋಗಿ ರಸ್ತೆ ಎಂದೇ ಪರಿಗಣಿತವಾಗಿರುವ ರೈಲ್ವೆ ಸ್ಟೇಷನ್ ರಸ್ತೆಗೆ ಇನ್ನೂ ಮುಕ್ತಿ ಸಿಕ್ಕಿದಂತೆ ಕಾಣುತ್ತಿಲ್ಲ. ಈ ರಸ್ತೆಯಲ್ಲಿ ಒಂದು ಕಡೆ ಸರ್ಕಾರಿ ಕಟ್ಟಡಗಳಿವೆ. ಮತ್ತೊಂದು ಬದಿಯಲ್ಲಿ ವಾಸದ ಮನೆಗಳಿವೆ. ರಸ್ತೆಯ ಬದಿಯಲ್ಲಿ ಮರಗಳಿವೆ. ಈ ಎಲ್ಲ ಸಮಸ್ಯೆಗಳನ್ನೂ ನಿವಾರಿಸಿಕೊಂಡು ಇಲ್ಲಿ ಸ್ಮಾರ್ಟ್ ಸಿಟಿ ರಸ್ತೆಯಾಗಬೇಕು. ಆದರೆ ಕಾಮಗಾರಿ ಆರಂಭವಾಗದೇ ಇರಲು ಇರುವ ಸಮಸ್ಯೆಗಳೇನು ಎಂಬುದು ತಿಳಿಯುತ್ತಿಲ್ಲ. ಕಳೆದ ತಿಂಗಳು ಈ ಭಾಗದಲ್ಲಿ ಸಂಚರಿಸಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿ ಕೆಲವು ಸಮಸ್ಯೆಗಳಿವೆ. ಇನ್ನೊಂದು ತಿಂಗಳ ಒಳಗೆ ಸರಿಪಡಿಸಿ ಕಾಮಗಾರಿ ಮುಂದುವರೆಸಲಾಗುವುದು ಎಂದಿದ್ದರು.
ಮಳೆಗಾಲದಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿದ್ದು ಗುಂಡಿಗಳು ಏರ್ಪಟ್ಟಿರುವುದರಿಂದ ಸಾಕಷ್ಟು ಅನಾಹುತಗಳಾಗಿವೆ. ವಾಹನಗಳು ಗುಂಡಿಯೊಳಗೆ ಸಿಲುಕಿಕೊಂಡಿವೆ. ಅವೈಜ್ಞಾನಿಕ ರಸ್ತೆ ಗುಂಡಿಗಳ ಮೇಲೆ ವಾಹನಗಳು ಹರಿದು ಅಪಘಾತಕ್ಕೊಳಗಾಗಿವೆ. ಮಣ್ಣು ರಸ್ತೆಗಳಿಗೆ ಹರಡಿ ರಸ್ತೆಯ ಚಿತ್ರಣವೇ ಬದಲಾಗಿದೆ. ವಾಹನ ಸಂಚಾರವಂತೂ ಅತ್ಯಂತ ದುರ್ಲಭವೆನ್ನಿಸಿದೆ. ಕಾಮಗಾರಿಗಳು ನಡೆಯುತ್ತಿರುವ ಸ್ಥಳದ ಮನೆಗಳಿಗೆ ತೆರಳಲು ನೆಂಟರಿಷ್ಟರು ಪರಿಚಯಸ್ಥರು ಪರದಾಡುವಂತಹ ಪರಿಸ್ಥಿತಿ ಇದೆ. ಈ ಪರಿಸ್ಥಿತಿ ಇನ್ನೂ ಎಷ್ಟು ತಿಂಗಳ ಕಾಲ ಮುಂದುವರೆಯುತ್ತದೆ ಎಂಬ ಪ್ರಶ್ನೆಯನ್ನು ನಾಗರಿಕರೇ ಮುಂದಿಡುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಧಾತರೇ ಇಲ್ಲ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕಿತ್ತು. ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿತ್ತು.
ಗುಂಡಿ ಮುಚ್ಚುವ ಹೆಸರಿನಲ್ಲಿ ಹಣ ಲೂಟಿ: ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಹಿಂದಿನಿಂದಲೂ ಕೋಟಿಗಟ್ಟಲೆ ಹಣ ಪೋಲಾಗಿದೆ. 2006ರ ಸಮಯದಲ್ಲಿ ನಡೆದ ರಸ್ತೆ ಕಾಮಗಾರಿಗಳ ಹಣದ ಅವ್ಯವಹಾರವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ 100 ಕೋಟಿ ರೂ.ಗಳಷ್ಟು ಹಣ ಖರ್ಚಾಗಿತ್ತು.
ಈ ಹಣದಲ್ಲಿ ಅದೆಷ್ಟು ಜನ ಜೇಬು ತುಂಬಿಸಿಕೊಂಡರು ಎಂಬುದು ಆ ಕಾಲದಲ್ಲಿದ್ದವರಿಗಷ್ಟೇ ಗೊತ್ತು. ರಸ್ತೆ ಹೆಸರಿನ ವಿವಿಧ ಕಾಮಗಾರಿಗಳಿಗಾಗಿ ಲಕ್ಷ ಲಕ್ಷ ಹಣವನ್ನು ಸುರಿಯುತ್ತಲೇ ಬರಲಾಗಿದೆ. ರಸ್ತೆಗಳು ಮಾತ್ರ ಹಾಗೆಯೇ ಇವೆ. ಸಂಬಂಧಿಸಿದವರ ಜೇಬು ಮಾತ್ರ ದೊಡ್ಡದಾಗಿದೆ.
ಮಹಾತ್ಮಗಾಂಧಿ ರಸ್ತೆಯ ಕನ್ಸರ್‍ವೆನ್ಸಿಗಳಲ್ಲಿ ಪಾಲಿಕೆಯಿಂದಲೇ ಈ ಹಿಂದೆ ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಸ್ಮಾರ್ಟ್‍ಸಿಟಿ ಕಂಪನಿಯಿಂದಲೂ ಲಕ್ಷಾಂತರ ರೂ.ಗಳನ್ನು ಹಾಕಿ ಮತ್ತೊಮ್ಮೆ ಕಾಂಕ್ರಿಟ್ ನೆಪದಲ್ಲಿ ರಸ್ತೆ ಅಭಿವೃದ್ಧಿ, ಪಾರ್ಕಿಂಗ್ ಜಾಗವೆಂದು ತೋರಿಸಲಾಗಿದೆ. ಉಪ್ಪಾರಹಳ್ಳಿ ಮೇಲ್ಸೇತುವೆಯ ಕೆಳಭಾಗದಲ್ಲಿ ಸ್ಮಾರ್ಟ್‍ಸಿಟಿ ಹಣದಲ್ಲಿ ಬಣ್ಣ ಬಳೆಯಲಾಗಿದೆ. ಈಗಾಗಲೇ ಈ ಬಣ್ಣ ಉದುರಿ ಹೋಗುತ್ತಿದೆ. ರಸ್ತೆಯನ್ನು ಅಗೆದು 6-8 ತಿಂಗಳಾಗುತ್ತಿದ್ದರೂ ಸಂಬಂಧಿಸಿದ ಏಜೆನ್ಸಿಯವರು ಅದನ್ನು ರೆಸ್ಟೋರ್ ಮಾಡುತ್ತಿಲ್ಲ. ರಸ್ತೆಗಳು ಹಾಳಾಗಿದ್ದರೂ ಕೇಳುವವರಿಲ್ಲ ಎಂದು ಪಾಲಿಕೆ ಸದಸ್ಯ ಜೆ.ಕುಮಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ತುಮಕೂರು ನಗರದಲ್ಲಿ ಬಹಳಷ್ಟು ವರ್ಷಗಳಿಂದ ಜನರ ನಿದ್ರೆಗೆಡಿಸಿರುವ ಹಲವು ಸಮಸ್ಯೆಗಳಿವೆ. ಅದರಲ್ಲಿ ಸಿದ್ಧಗಂಗಾ ಬಡಾವಣೆಯ ಮೂಲಕ ಅಮಾನಿಕೆರೆ ತಲುಪುವ ರಾಜಗಾಲುವೆ ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಭಾರೀ ಮಳೆಯಾಯಿತೆಂದರೆ ಈ ಭಾಗದ ಚರಂಡಿ ಮೇಲೆ ನೀರು ಹರಿದು ಮನೆಗಳ ಒಳಗೆ ನುಗ್ಗುತ್ತದೆ. ಬಹಳ ಹಿಂದಿನಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಇಂತಹ ಕಡೆ ಸ್ಮಾರ್ಟ್‍ಸಿಟಿ ಮೂಲಕ ಏನಾದರೂ ಅಭಿವೃದ್ಧಿಪಡಿಸಲು ಸಾಧ್ಯವೇ ಎಂಬ ಬಗ್ಗೆ ಯಾರೂ ಚಿಂತಿಸಿಲ್ಲ. ಕೆಲವು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.
ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದಾಗಿ ರಸ್ತೆಗಳು ಅದ್ವಾನಗೊಂಡಿದ್ದು, ಈ ಬಗ್ಗೆ ನಾಗರಿಕರಲ್ಲಿ ಅಸಮಾಧಾನ ಹೆಚ್ಚುತ್ತಲೇ ಇದೆ. ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿರುವುದನ್ನು ಮನಗಂಡ ನಗರ ಪಾಲಿಕೆಯು ಕಾಮಗಾರಿಗಳಿಗಾಗಿ ರಸ್ತೆ ಅಗೆದು ಅಲ್ಲಲ್ಲಿ ಗುಂಡಿ ಬಿದ್ದಿರುವುದನ್ನು ಮುಚ್ಚಲು ಮುಂದಾಗಿದೆ. ಸ್ಮಾರ್ಟ್‍ಸಿಟಿ ನಿಯಮಾಳಿ ಪ್ರಕಾರ ಕಾಮಗಾರಿ ನಿರ್ವಹಣೆಯ ಹೊಣೆ ಹೊತ್ತ ಏಜೆನ್ಸಿಯವರೇ ರಸ್ತೆ ಅಗೆತದ ಗುಂಡಿ ಮುಚ್ಚಿ ಯಥಾಸ್ಥಿತಿಗೆ ತರಬೇಕು.
ಆದರೆ ಆ ಕೆಲಸ ಸಮರ್ಪಕವಾಗಿ ಆಗದೇ ಇರುವುದರಿಂದ ಪಾಲಿಕೆಯು ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿದೆ. ಇದಕ್ಕಾಗಿ 39.5 ಲಕ್ಷ ರೂ.ಗಳನ್ನು ಬಳಕೆ ಮಾಡಿಕೊಳ್ಳಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಯಾರೋ ಮಾಡಬೇಕಾಗಿದ್ದ ಕೆಲಸವನ್ನು ಮತ್ಯಾರೋ ಮಾಡಬೇಕಾಗಿ ಬಂದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಯ ದುರಂತ.
ಯಾವ ಸಮಯದಲ್ಲಿ ಯಾವ ಕಾಮಗಾರಿ ಮಾಡಬೇಕು ಎಂಬ ಪೂರ್ವಾಲೋಚನೆ ಇಲ್ಲದೆ ನಗರದಾದ್ಯಂತ ರಸ್ತೆಗಳನ್ನು ಅಗೆದು ಅವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡುತ್ತಿರುವ ಪರಿಣಾಮ ಅದರ ಸಂಕಷ್ಟವನ್ನು ಜನತೆ ಅನುಭವಿಸಬೇಕಾಗಿ ಬಂದಿದೆ. ಜನರ ತೆರಿಗೆ ಹಣವಂತೂ ವೃಥಾ ಪೋಲಾಗುವಂತಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದಿರುವ ಕಡೆ ತ್ಯಾಪೇ ಹಾಕುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆಲ್ಲ ಅದೆಷ್ಟು ಹಣ ಖರ್ಚು ಹಾಕುವರೋ? ಯಾವಾಗ ರಸ್ತೆಗಳು ಸುಸ್ಥಿತಿಗೆ ಬರುವವೋ? ಸಾರ್ವಜನಿಕರಂತೂ ನೆಮ್ಮದಿ ಕಳೆದುಕೊಂಡು ಹಿಡಿ ಶಾಪ ಹಾಕುತ್ತಿರುವುದು ನಿಂತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
