ಹರಪನಹಳ್ಳಿ
ಪಟ್ಟಣದ ಹರಿಹರ ರಸ್ತೆಯ ಗೇಟಿ ಬಸವಣ್ಣ ದೇವಸ್ಥಾನ ಬಳಿ ನಡೆಸುತ್ತಿರುವ ವಿವಿಧ ತಿನಿಸುಗಳ ಮಿನಿ ಕಾರ್ಖಾನೆಯೊಂದು ಹೊರ ಸುಸುತ್ತಿರುವ ಹೊಗೆಯಿಂದ ನಿವಾಸಿಗಳ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಕಲಾರಿಪತೆ ಎನ್ನುವವರ ಒಡೆತನಕ್ಕೆ ಸೇರಿದ ಈ ಕಾರ್ಖಾನೆಯಲ್ಲಿ ಕಳೆದ ಐದಾರು ವರ್ಷಗಳಿಂದ ಜೂಸ್ ಹಾಗೂ ಹುರಿದ ಸೂರ್ಯಕಾಂತಿ ಬೀಜ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಕಾರ್ಖಾನೆಯನ್ನು ಪರವಾನಿಗಿ ಇಲ್ಲದೇ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸಿನಿಮಾ ನಟರ ಭಾವಚಿತ್ರ ಹಾಗೂ ಆರ್ಯ ಚಿತ್ರದ ಹೆಸರಿನೊಂದಿಗೆ ಇಲ್ಲಿನ ವಸ್ತುಗಳನ್ನು ಮಾರಾಟವಾಗುತ್ತಿದೆ.
ಕಾರ್ಖಾನೆ ಹೊರ ಹಾಕುವ ಹೊಗೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಾಗರಿಕರು ಕಾರ್ಖಾನೆ ಮಾಲೀಕರಿಗೆ ತಿಳಿಸಿದರೂ ಅಕ್ಕಪಕ್ಕದ ಬಡವರನ್ನು ಹೆದರಿಸಿ ತಮ್ಮ ಕಾಯಕ ಮುಂದುವರಿಸಿದ್ದಾರೆ ಎಂದು ನೊಂದ ನಿವಾಸಿಗಳು ದೂರುತ್ತಿದ್ದಾರೆ.
ಇಲ್ಲಿ ತಾಯಾರಿಸುವ ಪಾನೀಯಕ್ಕೆ ಕಲುಷಿತ ನೀರು ಬಳಕೆ ಮಾಡಲಾಗುತ್ತಿದೆ. ತೆರೆದ ಡ್ರಮ್ ಗಳ ನೀರು ಸೊಳ್ಳೆಗಳು ವಾಸಸ್ಥಾನವಾಗಿದೆ. ಹುಳ ಇರುವೆಗಳಿಂದ ತುಂಬಿರುವ ಮ್ಯಾಂಗೋ ಪ್ಲಪ್ ಸೇರಿಸಿ ಮಿಷನ್ನಿಗೆ ಸುರಿದು ಪ್ಲಾಸ್ಟಿಕ್ ಪೌಚ್ಗಳಲ್ಲಿ ಸೀಲ್ ಮಾಡಿ ಚೀಲಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಇಂತಹ ಜೂಸ್ ಕುಡಿದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಸ್ವಚ್ಛತೆ, ಗುಣಮಟ್ಟವಿಲ್ಲದ ಆಹಾರ ತಯಾರಿಕೆ, ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.ಮೇಲಿನದು ಜೂಸ್ ಕಥೆಯಾದರೆ ಇದು ಸೂರ್ಯಕಾಂತಿ ಬೀಜ ತಯಾರಿಕೆ ಮಾಡುವುದು ಅದಕ್ಕಿಂತಲೂ ಭಯಾನಕವಾಗಿದೆ.
ಸೂರ್ಯಕಾಂತಿ ಬೀಜ ಹುರಿಯಲು ಟೈಯರ್ ಸುಟ್ಟು ತಯಾರಿಸಲಾಗುತ್ತಿದೆ. ಅಲ್ಲಿಯ ನಿವಾಸಿಗರಿಗೆ ವಾಯುಮಾಲಿನ್ಯ, ಕರಕಲು ತುಂಬಿದ ಕೆಟ್ಟ ಹೊಗೆ, ವಾಸನೆ, ಬೂದಿಯ ದೂಳಿನಿಂದ ಶ್ವಾಸಕೋಸದ ತೊಂದರೆ ಅನುಭವಿಸುವಂತಾಗಿದೆ. ಬಟ್ಟೆಗಳ ಮೇಲೂ ಟೈಯರ್ ಬೂದಿ ಬಿದ್ದು ಮಲೀನವಾಗುತ್ತಿವೆ. ಬೆಳಗ್ಗೆ ರಾತ್ರಿ ಪ್ಲಾಸ್ಟಿಕ್ ಸುಟ್ಟ ವಾಸನೆಯಿಂದ ಬೇಸತ್ತಿದ್ದೇವೆ ಎಂದು ಅಲ್ಲಿಯ ನಿವಾಸಿಗಳು ದೂರಿದ್ದಾರೆ.
`ತಿಂಗಳಿಗೆ ನಾಲ್ಕರಿಂದ ಐದು ಬಾರಿ ಸೂರ್ಯಕಾಂತಿ ಬೀಜ ಹುರಿಯಲು ದಾವಣಗೆರೆಯಿಂದ ಬರುತ್ತೇನೆ. ಒಮ್ಮೆ ಕನಿಷ್ಟ 8 ರಿಂದ 10 ಚೀಲ ಸೂರ್ಯಕಾಂತಿ ಬೀಜ ಹುರಿದು ಕೊಡುವುದು ನನ್ನ ಕೆಲಸವಾಗಿದೆ. ಅದನ್ನು ಬಿಟ್ಟು ಬೇರೆ ವಿಷಯ ನನಗೆ ಗೊತ್ತಿಲ್ಲ’ ಎನ್ನುತ್ತಾರೆ ದಾವಣಗೆರೆ ಆಜಾದ್ ನಗರದ ವಾಸೀಂ.
ಸ್ಥಳಕ್ಕೆ ಆಗಮಿಸಿದ ಪುರಸಭೆ ಆರೋಗ್ಯಾಧಿಕಾರಿ ಮಂಜುನಾಥ, ಜೂಸ್ ಹಾಗೂ ಸೂರ್ಯಕಾಂತಿ ಬೀಜ ಮಾಲೀಕರಿಗೆ ಎಚ್ಚರಿಕೆ ನೀಡಿ ಬೀಗ ಜಡಿದರು. ಜೊತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ