ಸಾಮಾಜಿಕವಾಗಿ ಅಭಿವೃದ್ಧಿಹೊಂದಲು ಸಚಿವರ ಕರೆ

ಗುಬ್ಬಿ

    ಹಿಂದುಳಿದ ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ಸಮಾನತೆ ಕಲ್ಪಿಸುವುದರ ಜೊತೆಗೆ ಆ ಸಮುದಾಯಗಳಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನಿಯಮಾನುಸಾರ ದೊರಕಿಸಿಕೊಡುವ ಮೂಲಕ ಶಕ್ತಿ ತುಂಬುವಂತಹ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದಾಗಿ ಸಣ್ಣಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

     ತಾಲ್ಲೂಕಿನ ಪತ್ರೆ ಮತ್ತಿಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಸಮುದಾಯಗಳು ಸರ್ಕಾರದ ಸೌಲಭ್ಯಗಳ ಬಗ್ಗೆ ಪರಿಪೂರ್ಣವಾದ ಮಾಹಿತಿ ಪಡೆದುಕೊಂಡು ತಮಗೆ ಮೀಸಲಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ಕರೆನೀಡಿದರು.

     ಯಾವುದೇ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಂಘಟನೆ ಮತ್ತು ಶಿಕ್ಷಣದಿಂದ ಮಾತ್ರಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಅವರನ್ನು ಸುಶಿಕ್ಷಿತರನ್ನಾಗಿ ಮಾಡುವತ್ತ ಮುಂದಾಗಬೇಕಿದೆ ಎಂದ ಅವರು ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಹೇಮಾವತಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಅ.1 ರಿಂದ ಈ ಭಾಗದ ಎಲ್ಲಾ ಕೆರೆಗಳಿಗೂ ನೀರನ್ನು ಹರಿಸಲಾಗುವುದೆಂದು ತಿಳಿಸಿದರು.

     ದಿವ್ಯ ಸಾನಿಧ್ಯ ವಹಿಸಿದ್ದ ಶಿಡ್ಲೆಕೋಣೆ ವಾಲ್ಮೀಕಿ ಸಂಸ್ಥಾನದ ಶ್ರೀಸಂಜಯಕುಮಾರಸ್ವಾಮೀಜಿ ಮಾತನಾಡಿ ಈ ಬಾರಿ ಎಪಿಎಂಸಿ ಅಧ್ಯಕ್ಷ ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ನೀಡುವ ಮೂಲಕ ವಾಲ್ಮೀಕಿ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬುವಂತಹ ಕೆಲಸವನ್ನು ಸಚಿವರು ಮಾಡಬೇಕೆಂದು ಮನವಿ ಮಾಡಿದ ಅವರು, ಎಸ್.ಟಿ.ಸಮುದಾಯಕ್ಕೆ ದೊರೆಯಬೇಕಾಗಿರುವ ಮೀಸಲಾತಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪುವಂತೆ ಸಚಿವರು ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

     ರಾಜ್ಯ ಜೆಡಿಎಸ್ ಎಸ್.ಟಿ.ಘಟಕದ ಅಧ್ಯಕ್ಷ ರಮೇಶ್ ಮಾತನಾಡಿ ಹಿಂದುಳಿದ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಆ ಸಮುದಾಯಗಳು ಯೋಜನೆಗಳ ಬಗ್ಗೆ ಪರಿಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ಕರೆನೀಡಿದರು.

     ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಸದಸ್ಯರಾದ ಲಕ್ಷ್ಮೀರಂಗಯ್ಯ, ವಿ.ವೀರಭದ್ರಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯ ರಮೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಗೌರಮ್ಮ, ಲಾವಣ್ಯ, ಗಂಗಮ್ಮ ಮುಖಂಡರಾದ ನರಸಿಂಹಮೂರ್ತಿ, ದೇವರಾಜು, ಶಿವಣ್ಣ, ಪತ್ರೆ ಬಸವರಾಜು, ಹೆಚ್.ಡಿ.ಯಲ್ಲಪ್ಪ, ಪತ್ರೆ ದಿನೇಶ್, ನಾಗರಾಜು, ನಾರಾಯಣಪ್ಪ, ಕೆಂಪಯ್ಯ, ಮಂಜಣ್ಣ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap