ಮೋಡದ ಮರೆಯಲ್ಲಿ ಮಿನುಗಿದ ಭಾಸ್ಕರ

ತುಮಕೂರು

     ಮೋಡ ಮುಸುಕಿದ ವಾತಾವರಣದ ನಡುವೆಯೂ ತುಮಕೂರು ನಗರದಲ್ಲಿ ಅಪರೂಪದ ಖಗೋಳೀಯ ವಿದ್ಯಮಾನದ ಕಂಕಣ ಸೂರ್ಯಗ್ರಹಣವನ್ನು ಅನೇಕ ಮಂದಿ ಕಣ್ತುಂಬಿಕೊಂಡರು. ಆದರೆ ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಈ ಬಾರಿಯ ವೀಕ್ಷಣೆ ತೀರಾ ಕಡಿಮೆಯೇ ಇತ್ತು.

     ತುಮಕೂರು ನಗರದಲ್ಲಿ ಒಂದೆರಡು ಕಡೆ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ತುಮಕೂರು ವಿಜ್ಞಾನ ಕೇಂದ್ರವು ತೋಟದ ರಸ್ತೆಯಲ್ಲಿರುವ ತನ್ನ ಕಾರ್ಯಾಲಯದ ಮುಂಭಾಗದಲ್ಲಿ ಬೆಳಗಿನಿಂದಲೇ ವೀಕ್ಷಕರಿಗೆ ಅನುವು ಮಾಡಿಕೊಟ್ಟಿತ್ತು.
ಸೌರ ಕನ್ನಡಕಗಳು (ಸೋಲಾರ್ ಫಿಲ್ಟರ್), ಪಿನ್ ಹೋಲ್ ಕ್ಯಾಮರಾ (ಸೂಜಿರಂಧ್ರ ಬಿಂಬಗ್ರಾಹಿ) ಹಾಗೂ ಗಾಗಲ್ಸ್ (ಕಪ್ಪು ಕನ್ನಡಕ) ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 10.15 ಕ್ಕೆ ಸೂರ್ಯ ಗ್ರಹಣದ ಪ್ರಥಮ ದೃಶ್ಯ ಇಲ್ಲಿ ಗೋಚರವಾಯಿತು. 11.15 ರಿಂದ 11.40 ರವರೆಗೆ ಪ್ರಖರ ಸೂರ್ಯ ಗ್ರಹಣದ ದರ್ಶನವಾಯಿತು.

     ಮೋಡಗಳು ಬಂದು ಹೋಗುತ್ತಿದ್ದ ಕಾರಣ ಪೂರ್ಣವಾಗಿ, ಸ್ಪಷ್ಟವಾಗಿ ನಿರಂತರವಾಗಿ ಕಾಣದೆ ಹೋದರೂ ಬಿಂಬಗ್ರಾಹಿಯಲ್ಲಿ ಗ್ರಹಣವನ್ನು ವೀಕ್ಷಿಸುವ ಅವಕಾಶ ದೊರೆಯಿತು. ಮಧ್ಯಾಹ್ನ 1.13 ಕ್ಕೆ ಗ್ರಹಣ ಮುಕ್ತಾಯವಾಯಿತು. ತುಮಕೂರು ವಿಜ್ಞಾನ ಕೇಂದ್ರಕ್ಕೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಆಸಕ್ತರು ಬಂದು ಹೋಗುತ್ತಿದ್ದರು. ಅಂದಾಜು 100 ಮಂದಿ ಸೂರ್ಯ ಗ್ರಹಣ ವೀಕ್ಷಿಸಿದ್ದಾರೆ ಎಂದು ವಿಜ್ಞಾನ ಕೇಂದ್ರದ ಮಧುಸೂದನರಾವ್ ತಿಳಿಸಿದರು. ಈ ಹಿಂದೆ ಗುಂಪು ಗುಂಪಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗಿದ್ದು, ಈ ಬಾರಿ ಕೊರೊನಾ ವೈರಸ್ ಕಾರಣದಿಂದಾಗಿ ಜನರೂ ಹೆಚ್ಚಿಗೆ ಬರಲಿಲ್ಲ.

    ಬಂದವರನ್ನು ಅಂತರ ಕಾಪಾಡಿಕೊಂಡು ಗ್ರಹಣ ವೀಕ್ಷಿಸುವಂತೆ ಸೂಚನೆ ನೀಡಲಾಯಿತು. ಅದರಂತೆಯೆ ಜನತೆ ಅಂತರ ಕಾಪಾಡಿಕೊಂಡು ಗ್ರಹಣ ವೀಕ್ಷಿಸಿದರು. ಕೆಲವು ಕಾಲ ಮೋಡಗಳು ಅಡ್ಡಿಯಾದರೂ ಸಹ ಗ್ರಹಣ ವೀಕ್ಷಣೆಗೆ ತೊಂದರೆಯಾಗಲಿಲ್ಲ ಎಂದು ಅವರು ತಿಳಿಸಿದರು.

  ಈ ಬಾರಿಯೂ ಕೆಲವರು ಕಡಲೆಪುರಿ ಹಂಚಿದರು. ಇನ್ನು ಕೆಲವರು ಬರುವಾಗ ಮನೆಯಿಂದ ಹಲಸಿನ ಹಣ್ಣು ತಂದು ವಿತರಿಸಿದರು. ಮೌಢ್ಯಗಳಿಗೆ ಒಳಗಾಗದಂತೆ ವೈಜ್ಞಾನಿಕ ಹಿನ್ನೆಲೆಯಲ್ಲಿ ಗ್ರಹಣವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿಜ್ಞಾನ ಕೇಂದ್ರದ ಕಾರ್ಯಕರ್ತರು ಬಂದವರಿಗೆ ಸಲಹೆ ನೀಡುತ್ತಿದ್ದರು. ವಿಜ್ಞಾನ ಕೇಂದ್ರದ ಸಿ.ಯತಿರಾಜು, ಬಿ.ಮರುಳಯ್ಯ, ರವಿಶಂಕರ್, ಪಿ.ಪ್ರಸಾದ್, ನಾಗರಾಜರಾವ್, ನಿತ್ಯಾನಂದ, ಮಲ್ಲಿಕಾರ್ಜುನ ಕೆಂಕೆರೆ, ಅಕ್ಕಮ್ಮ ಮೊದಲಾದವರು ಗ್ರಹಣ ವೀಕ್ಷಣೆಗೆ ಬಂದವರಿಗೆ ಸಲಹೆ ಸಹಕಾರ ನೀಡುತ್ತಿದ್ದರು.

  ಸೂರ್ಯ ಗ್ರಹಣದ ಸಂದರ್ಭದಲ್ಲಿ ಈ ಹಿಂದೆ ನಗರದ ಜನತೆ ಸೌರ ಕನ್ನಡಕಗಳನ್ನು ಖರೀದಿಸಿ ಅಥವಾ ಇತರೆ ಪರ್ಯಾಯ ವಸ್ತುಗಳನ್ನು ಬಳಸಿ ಗ್ರಹಣ ವೀಕ್ಷಣೆಗೆ ಮುಂದಾಗುತ್ತಿದ್ದರು. ಮನೆಯ ಮಹಡಿಗಳ ಮೇಲೆ ನಿಂತು ಕೆಲವರು ನೋಡುತ್ತಿದ್ದರು. ಆದರೆ ಈ ಬಾರಿ ಅಂತಹ ಲಕ್ಷಣಗಳು ಕಂಡುಬರಲಿಲ್ಲ. ಕೆಲವೆ ಮಂದಿ ಗ್ರಹಣ ವೀಕ್ಷಿಸುತ್ತಿದ್ದುದನ್ನು ಹೊರತುಪಡಿಸಿದರೆ ಈ ಬಾರಿ ಅಂತಹ ಕುತೂಹಲಭರಿತ ವಾತಾವರಣ ಕಂಡುಬರಲಿಲ್ಲ. ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಎಲ್ಲ ಕಡೆ ಇದೇ ಸುದ್ದಿ ಇರುವಾಗ ಗ್ರಹಣದ ವಿಷಯ ಮಂದಿಗೆ ಹೆಚ್ಚು ನಾಟಲಿಲ್ಲ.

   ಒಂದು ಕಡೆ ವಿಜ್ಞಾನ ಕೇಂದ್ರದ ಕಾರ್ಯಕರ್ತರು ಹಾಗೂ ವೈಜ್ಞಾನಿಕವಾಗಿ ಯೋಚಿಸುವವರು ಮೂಢನಂಬಿಕೆ ಬಿಟ್ಟು ವೈಜ್ಞಾನಿಕವಾಗಿ ಗ್ರಹಣ ವೀಕ್ಷಿಸಿ ಎಂದು ಸಾರಿದರೆ, ಬಹಳಷ್ಟು ಕಡೆಗಳಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣವೆ ಕಂಡುಬಂದಿತು. ಎಷ್ಟೋ ಜನರ ಮನೆಯಲ್ಲಿ ಬೆಳಗಿನ ತಿಂಡಿಯೂ ಇಲ್ಲದೆ, ಮಧ್ಯಾಹ್ನ ಗ್ರಹಣ ಮುಕ್ತಾಯವಾಗುವವರೆಗೆ ಹೊಟ್ಟೆಗೆ ಏನೂ ಸೇವಿಸಲಿಲ್ಲ. ಸ್ನಾನ ಕೂಡ ಮಾಡದೆ ಮನೆಯ ಒಳಗೆ ಉಳಿದು ಬಿಟ್ಟರು. ದೇವಸ್ಥಾನಗಳು ಸಹ ಗ್ರಹಣದ ಸಮಯದಲ್ಲಿ ತೆರೆಯಲಿಲ್ಲ. ಆನಂತರ ಶುದ್ಧೀಕರಣ ಕೆಲವೆಡೆ ನಡೆದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link