ಬೆಂಗಳೂರು
ಸುರಕ್ಷಿತ ವಲಯ ಎಂದು ಗುರುತಿಸಲ್ಪಟ್ಟಿರುವ ಶಾಸಕರ ಭವನದ ಎಲ್ಲಾ ಕಟ್ಟಡಗಳ ಮೇಲ್ಭಾಗದಲ್ಲಿ ಯಾವುದೇ ಟೆಂಡರ್ ಹಾಗೂ ಸಕ್ಷಮ ಪ್ರಾಧಿಕಾರಗಳ ಅನುಮತಿಯಿಲ್ಲದೆ ?ಚಾವಡಿ ಸೌರವಿದ್ಯುತ್ ಘಟಕ?ಗಳನ್ನು ಅಳವಡಿಸಲು ಖಾಸಗಿ ಕಂಪನಿಯೊಂದಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕೆಲ ವಕೀಲರು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.
ಕೆ.ವಿ.ಶಿವಾರೆಡ್ಡಿ, ಪ್ರವೀಣ್ ಸಿ.ಪಿ. ಹಾಗೂ ಹರಿನಾಥ ರೆಡ್ಡಿ ಎಂ.ಎ ಎಂಬುವವರು ಈ ದೂರು ಸಲ್ಲಿಸಿದ್ದು, ವಿಧಾನಸೌಧ, ರಾಜಭವನ, ಹೈಕೋರ್ಟ್ ಕಟ್ಟಡಗಳಿಗೆ ಸಮೀಪದಲ್ಲಿರುವ ಎಲ್ಲಾ ಕಟ್ಟಡಗಳನ್ನು ಸುರಕ್ಷಿತ ವಲಯ (ರೆಡ್ ಝೋನ್ ) ಎಂದು ಘೋಷಿಸಿದ್ದು, ಶಾಸಕರ ಭವನ ಕೂಡ ಇದೇ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಕಟ್ಟಡಗಳು ವಿಧಾನಪರಿಷತ್ ಹಾಗೂ ವಿಧಾನಸಭಾ ಸಚಿವಾಲಯಗಳ ನಿಯಂತ್ರಣದಲ್ಲಿವೆ. ಈ ಕಟ್ಟಡಗಳಲ್ಲಿ ಸೌರವಿದ್ಯುತ್ ಘಟಕ ಅಳವಡಿಕೆಗೆ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ, ರಾಜ್ಯ ಇಂಧನ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಮುಖ್ಯಮಂತ್ರಿ ನೇತೃತ್ವದ ವಿಶೇಷ ಮಂಡಳಿಯ ಅನುಮತಿ ಪಡೆಯದೆ ಹೈದರಾಬಾದ್ ಮೂಲದ ಮೈತ್ರಾ ಎನರ್ಜಿ ಪ್ರೈ.ಲಿ. ಎಂಬ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಹಾಗೂ ನಿರ್ದೇಶಕಿ ವಿಶಾಲಾಕ್ಷಿ ಅವರು ಆ. 18ರಂದು ಕಾನೂನುಬಾಹಿರವಾಗಿ ಈ ಆದೇಶ ಜಾರಿಗೊಳಿಸಿದ್ದು, ಪ್ರತಿ ಯೂನಿಟ್ ಗೆ 3.839 ರೂ. ದರದಲ್ಲಿ 600 ಕೆ ಡಬ್ಲ್ಯು ವಿದ್ಯುತ್ ಉತ್ಪಾದನೆ ಮಾಡುವಂತೆ 25 ವರ್ಷಗಳ ಅವಧಿಗೆ ಕಾರ್ಯಾದೇಶದಲ್ಲಿ ಸೂಚಿಸಲಾಗಿದೆ.
ಕಾರ್ಯಾದೇಶ ಪಡೆದಿರುವ ಕಂಪನಿ ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಅವರ ಆಪ್ತರಿಗೆ ಸೇರಿದ್ದು, ಅವರ ಪುತ್ರ ಹರ್ಷ ರಮೇಶ್ ಅವರ ಹೆಸರಿನಲ್ಲಿಯೂ ಇಂತಹದೇ ಹೆಸರಿನ ಕಂಪನಿಗಳಿವೆ ಎಂದು ತಿಳಿದುಬಂದಿವೆ. ಈ ಕಾರ್ಯಾದೇಶ ನೀಡಲು ವಿಶಾಲಾಕ್ಷಿ ಅವರು ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ.ಕೇವಲ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ಅನುಮತಿಯನ್ನು ಮಾತ್ರ ಪಡೆದು ಈ ಆದೇಶ ನೀಡಲಾಗಿದೆ. ಆದ್ದರಿಂದ ವಿಶಾಲಾಕ್ಷಿ ಅವರನ್ನು ತಕ್ಷಣ ಅಮಾನತುಗೊಳಿಸಿ, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
