ತುಮಕೂರು:
ಜನರ ಮುಂದಿಡುತ್ತಿರುವುದು ಮೋದಿ ಹೆಸರನ್ನೋ ಅಥವಾ ಅಭಿವೃದ್ಧಿ ವಿಚಾರವೋ?
ಮೋದಿ ಹಾಗೂ ಅಭಿವೃದ್ಧಿ ಎರಡನ್ನೂ ಜನರ ಮುಂದಿಡಲಾಗುತ್ತಿದೆ. ಮೋದಿಯವರ ಅವಶ್ಯಕತೆ, ಅನಿವಾರ್ಯತೆ ಇದೆ. ಮೋದಿಯವರು ಕೇವಲ 5 ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ, ಚಿತ್ರಣ ಹಾಗೂ ಇತರೆ ರಾಷ್ಟ್ರಗಳೊಂದಿಗಿನ ಅವರ ಒಡನಾಟ, ಬಾಂಧವ್ಯ ಹಾಗೂ ಧ್ವನಿ ಇಲ್ಲದ ಕಡುಬಡವರ ಆಸರೆಗೆ ನಿಂತಂತಹವರು ಮೋದಿಯವರು. ಎಲ್ಲರಿಗೂ ಸಮಾನವಾಗಿ ಪ್ರಗತಿ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಹಾಗಾಗಿ ಮೋದಿಯವರ ಆಡಳಿತ ವೈಖರಿ ಬಗ್ಗೆ ತಿಳಿಸುತ್ತಾ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಮುಂದೆ ಮೋದಿಯವರು ಅಧಿಕಾರಕ್ಕೆ ಬಂದು ಮತ್ತಷ್ಟು ಅಭಿವೃದ್ಧಿ ಮಾಡಲಿದ್ದಾರೆ.
ಪ್ರಣಾಳಿಕೆಯಲ್ಲಿ ರೈತರು, ಹಿಂದುಳಿದವರು, ಮಹಿಳೆಯರ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂಬ ಆರೋಪ ಇದೆ.
ಮೋದಿಯವರು ಹೊರಡಿಸಿದ ಪ್ರಣಾಳಿಕೆಯಲ್ಲಿ ರೈತರ ಬಗ್ಗೆಯೂ ಪ್ರಸ್ತಾಪ ಆಗಿದೆ. ಮಹಿಳೆಯರ ಬಗ್ಗೆಯೂ ಪ್ರಸ್ತಾಪ ಆಗಿದೆ. ಹಿಂದುಳಿದವರ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಹಿಂದುಳಿದವರ ಬಗ್ಗೆ ಆಲೋಚನೆ ಇಲ್ಲದೆ ಹೋಗಿದ್ದರೆ ಜನಧನ ಯೋಜನೆ ಯಾಕೆ ಬರುತ್ತಿತ್ತು? ಉಜ್ವಲ ಯೋಜನೆ ಯಾಕೆ ಬರುತ್ತಿತ್ತು? ಆಯುಷ್ಮಾನ್ಭಾರತ, ಗರ್ಭಿಣಿ ಸ್ತ್ರೀಯರಿಗೆ ಮಾಸಾಶನ ಯೋಜನೆ, ರೈತರಿಗೆ ಫಸಲ್ ಬಿಮಾ ಯೋಜನೆ ನೀಡಿದ್ದಾರೆ.
ಮೋದಿಯವರು ಈ ದೇಶದ ಚಿತ್ರಣ ಬದಲಾವಣೆ ಮಾಡುವುದಕ್ಕೆ ಕೆಳಹಂತದಲ್ಲಿರುವವರಿಗೂ ಪ್ರಮುಖ ಆದ್ಯತೆ ನೀಡುವ ಕೆಲಸ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ. 60 ವರ್ಷ ಆಡಳಿತ ಮಾಡಿದವರು, ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿಯನ್ನು ಸಹಿಸಲಾರದೆ ಎಲುಬಿಲ್ಲದ ನಾಲಿಗೆಯಂತೆ ಮಾತನಾಡುತ್ತಾರೆ. ಮೋದಿಯವರ ಕೊಡುಗೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. 130 ಕೋಟಿ ಜನರೆ ಅವರನ್ನು ಒಪ್ಪಿದ್ದಾರೆ. ಸ್ವಂತವಾಗಿ ಏನೇ ಮಾಡಿದರು ಅದು ಉದ್ಯೋಗ ಎನಿಸುತ್ತದೆ. ಚಾಯ್ ಮಾರುವುದು ಒಂದು ಉದ್ಯೋಗವೇ, ಪಕೋಡ ಮಾರುವುದು ಕೂಡ ಒಂದು ಉದ್ಯೋಗವೇ. ಉದ್ಯೋಗ ಎಂಬುದು ನಮ್ಮ ಆಸ್ತಿ ಇದ್ದ ಹಾಗೆ. ಯಾವ ಕೆಲಸವೂ ದೊಡ್ಡದು ಸಣ್ಣದು ಎಂಬ ಕೀಳರಿಮೆ ಬರಬಾರದು ಎಂಬುದನ್ನು ಮೋದಿಯವರು ತಿಳಿಸಿದ್ದಾರೆ.
ನೀರಿನ ರಾಜಕಾರಣ ಹೆಚ್ಚು ಪ್ರಸ್ತಾಪ ಏಕೆ?
ನೀರಿನ ರಾಜಕಾರಣ ಮಾಡುತ್ತಿರುವುದು ನಾವಲ್ಲ. ತುಮಕೂರಿಗೆ 24 ಟಿಎಂಸಿ ನೀರು ಬರಬೇಕಿತ್ತು. ಆದರೆ ಸುಖಾಸುಮ್ಮನೆ ಸಮುದ್ರಕ್ಕೆ ನೀರು ಹರಿಯಿತು. ಆದರೆ ತುಮಕೂರಿಗೆ ಸರಿಯಾಗಿ ನೀರು ಬಂದಿಲ್ಲ. ಒ ಮತ್ತು ವೈ ಚಾನಲ್ ಮಾಡಬೇಕಾದರೆ ವಿರೋಧ ಪಕ್ಷಗಳು ಯಾವ ರೀತಿಯಲ್ಲಿ ನಡೆದುಕೊಂಡಿವೆ. ಯಾವ ರೀತಿಯ ಸಮಸ್ಯೆಗಳು ಎದುರಾಗಿದ್ದವು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಹಾಸನ ಜಿಲ್ಲೆಗೆ ನೀರು ಸರಾಗವಾಗಿ ಹರಿಯುತ್ತೆ. ಆದರೆ ತುಮಕೂರಿಗೆ ಏಕೆ ಹರಿಯುವುದಿಲ್ಲ? ಈ ಮುಂಚೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಪಿಡಬ್ಲ್ಯೂಡಿ ಸಚಿವರು ಜೆಡಿಎಸ್ನವರೇ ಇದ್ದರು. ಆಗ ಏಕೆ ನೀರು ಬಿಡುವಲ್ಲಿ ಹಿಂದೇಟು ಹಾಕಿದ್ದರು? ಅಧಿಕಾರದಲ್ಲಿದ್ದಾಗ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ತಿಳಿದುಕೊಳ್ಳಬೇಕು. ಇದರ ಬಗ್ಗೆ ಜನರೇ ಹೇಳುತ್ತಾರೆ.
ರಾಜ್ಯದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಇದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವೇ ಗೆಲ್ಲುತ್ತದೆ. ಅದರಲ್ಲಿ ಇನ್ನೊಂದು ಮಾತಿಲ್ಲ. ಅದೇ ರೀತಿ ರಾಜ್ಯದಲ್ಲಿ 20ಕ್ಕೂ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಆ ನಂಬಿಕೆ ನಮಗಿದೆ. ಕಳೆದ ಅವಧಿಯಲ್ಲಿ ಬಿಜೆಪಿ ಪಕ್ಷದ ಸಂಸದರು ಆಯಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುತ್ತೇವೆ.
ದೇವೇಗೌಡರು ಗೆದ್ದರೆ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗುತ್ತೆ ಅಂತಿದ್ದಾರೆ?
ದೇವೇಗೌಡರು ಹಿರಿಯರು. ಅವರು ಮೊದಲು ತಮ್ಮ ಆರೋಗ್ಯ ಸುಧಾರಣೆ ಮಾಡಿಕೊಳ್ಳಲಿ. ನಗುನಗುತ್ತಾ ಜೀವನ ಮಾಡಲಿ. ರಾಜಕೀಯದಲ್ಲಿ ಒಂದೊಂದು ಹಂತ ಇರುತ್ತದೆ. ಅವುಗಳನ್ನು ದಾಟುತ್ತಾ ಹೋಗಿ ಪ್ರಧಾನಿ ಹುದ್ದೆಯಲ್ಲಿದ್ದು ಆಡಳಿತ ನಡೆಸಿದವರು. ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಶ್ಯಕತೆ ಇರಲಿಲ್ಲ. ಸುಮ್ಮನೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರೆ ಸಾಲದು. ಅಧಿಕಾರ ಇದ್ದಾಗಲೇ ಮಾಡಬೇಕಿತ್ತು. ಚುನಾವಣೆ ವೇಳೆಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುವುದು ಅಲ್ಲ.
ಜಿ.ಎಸ್ಬಿ ಏನೂ ಮಾಡಿಲ್ಲ ಎಂಬ ಆರೋಪಗಳಿವೆ?
ಜಿಎಸ್ ಬಸವರಾಜು ಅವರು ಪ್ರಚಾರ ಪ್ರಿಯರಲ್ಲ. ಅವರು ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಬಗ್ಗೆ ಮಾಹಿತಿ ಬೇಕಾದರೆ ಕೆಪಿಟಿಸಿಎಲ್ನ ಅಭಿವೃದ್ಧಿ, ಎಚ್ಎಎಲ್, ಮನೆಮನೆಗೆ ಗ್ಯಾಸ್ ಸಂಪರ್ಕ ಕೊಡಿಸಿರುವುದು. ನೀರಾವರಿಗಾಗಿ ಹಲವು ಹೋರಾಟಗಳನ್ನು ಮಾಡಿದ್ದಾರೆ. ರೈಲ್ವೇ ಇಲಾಖೆಯಲ್ಲಿ ಅಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕಳೆದ ಐದು ವರ್ಷ ಅಧಿಕಾರದಲ್ಲಿರಲಿಲ್ಲ. ಸುಖಾಸುಮ್ಮನೆ ಸುಳ್ಳು ಪ್ರಚಾರ ಮಾಡುವುದು ಅವರಿಗೆ ಇಷ್ಟವಿಲ್ಲ. ಮಾಡಿದ ಕೆಲಸಗಳನ್ನು ಮಾತ್ರ ಹೇಳುತ್ತಾ, ಮತ ಯಾಚನೆ ಮಾಡುತ್ತಿದ್ದಾರೆ. ಇದನ್ನರಿಯದ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.
ಮಾಜಿ ಪ್ರಧಾನಿ ಸ್ಪರ್ಧೆ ನಿಮಗೆ ಏನು ಅನಿಸುತ್ತಿದೆ?
ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡುವ ಅವಶ್ಯಕತೆ ಇರಲಿಲ್ಲ. ಮುದ್ದಹನುಮೆಗೌಡರು ಏನು ತಪ್ಪು ಮಾಡಿದ್ದರು? ಅವರು ಹಾಲಿ ಸಂಸದರಾಗಿದ್ದರು. ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ನಂಬಿಕೆಯೂ ಅವರಿಗೆ ಇತ್ತು. ಆದರೆ ದೇವೆಗೌಡರು ತುಮಕೂರಿಗೆ ಬಂದು ಅವರ ಸ್ಥಾನವನ್ನು ಕಿತ್ತುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ದೇವೇಗೌಡರು ಹಿರಿಯರಾಗಿರುವುದರಿಂದ ಮಾರ್ಗದರ್ಶನ ನೀಡಬಹುದಿತ್ತು. ಅವರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡುವಂತೆ ಮಾಡಬಹುದಿತ್ತು. ಆದರೆ ಅವರೇ ಇಲ್ಲಿ ಬಂದು ಸ್ಪರ್ಧೆ ಮಾಡಿರುವುದು ಸರಿ ಅಲ್ಲ.
ಯಾವ ವರ್ಗದ ಮತಗಳನ್ನು ಹೆಚ್ಚು ನಿರೀಕ್ಷಿಸಿದ್ದೀರಿ?
ಮೋದಿಯವರು ಎಲ್ಲಾ ವರ್ಗದವರಿಗೂ ಪ್ರಾಶಸ್ತ್ಯ ನೀಡಿದ್ದಾರೆ. ಭಾರತವನ್ನು ಸಶಕ್ತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ದೇಶದಲ್ಲಿ ಸ್ವಚ್ಛ ಹಾಗೂ ದಕ್ಷ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರಮುಕ್ತ ಆಡಳಿತ ನೀಡಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳ ಪೈಕಿ ಭಾರತವು ತನ್ನದೇ ಆದ ಗಾಂಭೀರ್ಯತೆಯನ್ನು ಹೊಂದಿದೆ. ಕೆಳವರ್ಗದವರನ್ನು ಕೂಡ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಜಾತ್ಯತೀತವಾಗಿ ಎಲ್ಲಾ ವರ್ಗದವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ.
ಮೋದಿಯವರು ಈ ದೇಶದ ಶಕ್ತಿ ಹಾಗೂ ದಂಡನಾಯಕರಾಗಿದ್ದಾರೆ. ಚುನಾವಣೆ ಎನ್ನುವುದು ಯುದ್ಧ ಇದ್ದಹಾಗೆ. ಈ ಯುದ್ಧದ ದಂಡನಾಯಕ ಮೋದಿಯವರಾಗಿದ್ದಾರೆ. ಅವರು ಈ ದೇಶಕ್ಕೆ ಅನಿವಾರ್ಯರಾಗಿದ್ದು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬಿಜೆಪಿಗೆ ಬೆಂಬಲ ದೊರೆಯಲಿದೆ. ತುಮಕೂರು ಜಿಲ್ಲೆಯಲ್ಲಿ ಬಸವರಾಜುರವರು ಕಣ್ಣಮುಂದೆ ಸಿಗುತ್ತಾರೆ. ತುಮಕೂರು ಜಿಲ್ಲೆಯವರು ತುಮಕೂರಿನ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶದ ನಾಯಕ ಮೋದಿಯವರ ಕೈ ಬಲಪಡಿಸಿ.
ವಿ.ಸೋಮಣ್ಣ, ಮಾಜಿ ಸಚಿವರು
ರಾಕೇಶ್.ವಿ.