ಎರಡು ತಿಂಗಳು ಮಳೆ ಬಾರದಿರುವುದು ಅಪಾಯಕಾರಿ : ಸ್ವಾಮಿ ಜಪಾನಂದಜಿ

ಪಾವಗಡ

   ಒಂದು ಕಡೆ ರೆಸಾರ್ಟ್ಸ್‍ಗಳಿಗೆ ನಮ್ಮನ್ನಾಳುವ ದೊರೆಗಳು ಓಡಾಡುತ್ತಲಿದ್ದರೆ, ಮತ್ತೊಂಡೆ ಸ್ವತಃ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಶಾಸಕರು.! ಈ ಗೊಂದಲದ ನಡುವೆ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನೇ ಉಸಿರನ್ನಾಗಿಸಿಕೊಂಡು ಅಹರ್ನಿಶಿ ದುಡಿಯುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜಿರವರು ಮೇವುಗಳಿಲ್ಲದೆ ಪರಿತಪಿಸುತ್ತಿರುವ ಗೋವುಗಳನ್ನು ಕಣ್ಣಾರೆ ಕಂಡು ಅವುಗಳಿಗೆ ತಕ್ಷಣ ಮೇವುಗಳನ್ನು ಒದಗಿಸುವ ಕಾರ್ಯವನ್ನು ಪುನಾರಂಭಿಸಿದ್ದಾರೆ.

     ಜುಲೈ 10ರಂದು ಚಳ್ಳಕೆರೆ ತಾಲ್ಲೂಕಿನ ಬೊಮ್ಮದೇವರಹಟ್ಟಿ ಹಾಗೂ ಅಜ್ಜಯ್ಯನ ದೇವರಗುಡಿಯ ಹಟ್ಟಿಗಳಿಗೆ ಭೇಟಿ ನೀಡಿದ ಸ್ವಾಮೀಜಿ, ದೇವರ ಹಸುಗಳನ್ನು ಕಾಪಾಡಿಕೊಂಡು ಬರುತ್ತಿರುವ ಕಿಲಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಸ್ಥಳೀಯ ಪತ್ರಕರ್ತರ ಸಭೆ ನಡೆಸಿ, ಸ್ಥಳೀಯ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಹಸುಗಳಿಗೆ ಮೇವು ಸರಬರಾಜು ಮಾಡಬೇಕೆಂದು ಒತ್ತಾಯ ಮಾಡಿದರು.

     ಈ ಕಾರ್ಯವನ್ನು ಈ ದಿನದವರೆವಿಗೂ ಆಶ್ರಮದ ವತಿಯಿಂದ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಶನ್ ರವರ ಅಮೂಲ್ಯ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಪೂಜ್ಯ ಸ್ವಾಮೀಜಿ ತಿಳಿಸಿದರು.

     ಸುಮಾರು ಆರುನೂರಕ್ಕೂ ಮಿಗಿಲಾದ ಗೋವುಗಳು ಮೇವಿಲ್ಲದೆ ನರಳುತ್ತಿರುವ ದೃಶ್ಯ ಎಂತಹವರಿಗೂ ಹೃದಯ ಕಲುಕುವಂತಾಗುತ್ತದೆ. ಇದಕ್ಕೆ ಮೂಲ ಕಾರಣ ಈ ವರೆವಿಗೂ ಮಳೆರಾಯ ಬಂದಿಲ್ಲ. ಎಲ್ಲೆಡೆಯೂ ಭೀಕರ ಬರಗಾಲದ ಛಾಯೆಯನ್ನು ಚಳ್ಳಕೆರೆ ಭಾಗದಲ್ಲಿ ಕಾಣಬಹುದಾಗಿದೆ. ಈ ಸ್ಥಿತಿಯನ್ನು ಕಣ್ಣಾರೆ ಕಂಡು ನೆರೆದ ಪತ್ರಕರ್ತರಿಗೆ ಸ್ವಾಮಿ ಜಪಾನಂದಜಿ ಸ್ವತಃ ವಿವರಿಸಿದರು.

     ಇದೇ ಸಂದರ್ಭದಲ್ಲಿ ಶಿರಸ್ತೇದಾರ್ ಚಂದ್ರಶೇಖರಯ್ಯ, ಸರಕಾರದ ವತಿಯಿಂದ ಖಂಡಿತವಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಭರವಸೆ ಇತ್ತರು. ಸ್ಥಳೀಯ ವಕೀಲರುಗಳಾದ ಬಯ್ಯನ್ನ ಹಾಗೂ ಬೋರಯ್ಯ ಸಭೆಯಲ್ಲಿ ಭಾಗವಹಿಸಿದ್ದರು.

       ತಹಸೀಲ್ದಾರರ ಕಚೇರಿಯ ದಾಖಲಾತಿ ಪ್ರಕಾರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಮಳೆಯೇ ಬಂದಿಲ್ಲದಿರುವುದು ಗಮನಾರ್ಹ. ಮೊದಲೇ ಮಳೆಯ ಅಭಾವದಿಂದ ತತ್ತರಿಸುತ್ತಿರುವ ಸ್ಥಿತಿಯಲ್ಲಿ ಮಳೆಗಾಲದ ಎರಡು ತಿಂಗಳು ಮಳೆಯೇ ಬರದೆ ಇರುವುದು ನಿಜಕ್ಕೂ ಅಪಾಯಕಾರಿಯಾದ ಅಂಶವೇ ಸರಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link