ಬೆಂಗಳೂರು
ರಾಜ್ಯದ ಜನರಿಗೆ ಮನೆ ಕಟ್ಟಿಕೊಡದಿದ್ದರೆ ನೇಣುಹಾಕಿಕೊಳ್ಳುತ್ತೇನೆ ಎಂದು ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕುತ್ತಿರುವ ವಸತಿ ಸಚಿವ ವಿ.ಸೋಮಣ್ಣ, ಜನರಿಗೆ ಹಸಿ ಸುಳ್ಳುಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳ ವಿಚಾರದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸದ ಸೋಮಣ್ಣ, ಭಾವನಾತ್ಮಕವಾಗಿ ಹೇಳಿಕೆಗಳನ್ನು ನೀಡಿ, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ. ಪಿಡಿಓಗಳ ಮೇಲೆ ಆಪಾದನೆ ಮಾಡಿ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ 7.65 ಲಕ್ಷ ಮನೆ ನಿರ್ಮಾಣ ಪ್ರಗತಿಯಲ್ಲಿವೆ. ಆದರೆ ಆ ಮನೆಗಳಿಗೆ ಸರ್ಕಾರ ಇನ್ನೂ ಬಾಕಿಯನ್ನೇ ಬಿಡುಗಡೆಮಾಡಿಲ್ಲ. 2.5 ಲಕ್ಷ ಮನೆಗಳ ಅನುದಾನ ರದ್ಧು ಮಾಡಿದ್ದಾರೆ. ಬಡವರ ಸೂರಿನ ಆಸೆಗೆ ತಣ್ಣೀರೆರಚುತ್ತಿರುವ ಸೋಮಣ್ಣ ಇದೀಗ 5.15 ಲಕ್ಷ ಮನೆಗಳ ಸಮೀಕ್ಷೆಗೆ ಆದೇಶ ನೀಡಿದ್ದಾರೆ. ಎರಡೂವರೆ ವರ್ಷದಿಂದ ಮನೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಬಹಳಷ್ಟು ಜನ ಮನೆ ಒಡೆದು ಅಡಿಪಾಯ ಹಾಕಿದ್ದರು. ಗುಡಿಸಲಿನಲ್ಲಿದ್ದುಕೊಂಡು ಹೊಸ ಮನೆಯ ಕನಸು ಕಾಣುತ್ತಿದ್ದರು. ವಸತಿ ಸಚಿವರಿಗೆ ಈ ಕುರಿತು ಕರುಣೆಯೇ ಇಲ್ಲ ಎಂದರು.
ಭ್ರಷ್ಟ ಅಧಿಕಾರಿ ಮಹದೇವ್ ಪ್ರಸಾದ್ ಮೇಲೆ ಸಾಕಷ್ಟು ಆರೋಪಗಳಿದ್ದು, ಮತ್ತೆ ಅದೇ ಅಧಿಕಾರಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನಿಯೋಜಿಸಲಾಗಿದೆ. ಇಂತಹ ಭ್ರಷ್ಟ ಅಧಿಕಾರಿಯಿಂದ ಇನ್ನೇನು ಮಾಡಲು ಸಾಧ್ಯ?. ಇಂತಹ ಭ್ರಷ್ಟ ಅಧಿಕಾರಿಗಳಿಂದಲೇ ಮನೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಸೂರಿಲ್ಲದವರಿಗೆ ಸೂರು ಕೊಡುತ್ತೇವೆ ಎನ್ನುತ್ತಾರೆ. ಆದರೆ 1 ಲಕ್ಷ ಮನೆ ಯೋಜನೆ ಏನಾಯಿತು? ಎಂದು ಸಚಿವರು ಹೇಳಬೇಕು ಎಂದು ಒತ್ತಾಯಿಸಿದರು.
ಬಡ ಫಲಾನುಭವಿಗಳ ಕಣ್ಣಲ್ಲಿ ನೀರು ತರಿಸುತ್ತಿರುವ ಸೋಮಣ್ಣ ವಸತಿ ಇಲಾಖೆಯಿಂದ ನಿರ್ಗಮಿಸಿದರೆ ಮಾತ್ರ ಇಲಾಖೆ ಉದ್ಧಾರವಾಗಲಿದೆ. ಸೋಮಣ್ಣ ಕೂಡಲೇ ರಾಜೀನಾಮೆ ನೀಡಬೇಕು ಎಂದು ಖಂಡ್ರೆ ಆಗ್ರಹಿಸಿದರು.ಡ್ರಗ್ಸ್ ಆರೋಪದಲ್ಲಿ ನಮ್ಮ ಪಕ್ಷದ ಶಾಸಕ ಜಮೀರ್ ಅಹಮದ್ ಹೆಸರು ಪ್ರಸ್ತಾಪವಾಗಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಊಹಾಪೊಹದ ಆರೋಪ ಸರಿಯಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಲಿ ಎಂದರು.
ಸಚಿವ ಸಿ.ಟಿ.ರವಿ ಅವರಿಗೆ ಜೂಜು ಬಗ್ಗೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ತೆರೆಯಲು ಹೊರಟವರು ಅವರೇ. ಈಗ ಕಾಂಗ್ರೆಸ್ ವಿರುದ್ಧ ಆರೋಪಿಸುತ್ತಿರುವ ಸಿ.ಟಿ.ರವಿ, ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸಲು ಹೊರಟಿದ್ದು ಏಕೆ? ಎಂದು ಮೊದಲು ಉತ್ತರಿಸಬೇಕು. ಸಿ.ಟಿ.ರವಿ ಹೇಳುವುದೊಂದು ಮಾಡುವುದಿನ್ನೊಂದು ಎನ್ನುವಂತಾಗಿದೆ. ಅಕ್ರಮಗಳಿಗೆ ಬೆಂಬಲಿಸುವ ಸಿ.ಟಿ.ರವಿ ಜಮೀರ್ ಕ್ಯಾಸಿನೋ ಬಗ್ಗೆ ಮಾತನಾಡುವ ಹಕ್ಕು ಹೊಂದಿಲ್ಲ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ